ಗುರುವಾರ , ಆಗಸ್ಟ್ 22, 2019
26 °C
ಪ್ರತಿ ವರ್ಷ ಮಳೆಗಾಗಿ ಪ್ರಾರ್ಥನೆ

ಕೆಆರ್‌ಎಸ್‌ಗೆ ಮುಖ್ಯಮಂತ್ರಿ ಬಾಗಿನ ಅರ್ಪಣೆ

Published:
Updated:

ಮೈಸೂರು: ಕೃಷ್ಣರಾಜಸಾಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬಾಗಿನ ಅರ್ಪಿಸುವಾಗ  ಮಳೆ ಸುರಿಯಿತು. ಅಲ್ಲೇ ಪಕ್ಕದಲ್ಲಿ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸುವಾಗಲೂ ಮಳೆ ಹನಿಯಿತು. ಅದು ಸಂಜೆ ನಾಲ್ಕರ ಮಳೆ. ಮುಖ್ಯಮಂತ್ರಿ ಅವರ ಪ್ರಾರ್ಥನೆಗೆ ಅಸ್ತು ಎಂದಂತೆ ಮಳೆ ಮುಂದುವರಿಯಿತು.-ಇದು ಮಂಡ್ಯ ಜಿಲ್ಲೆಯಲ್ಲಿನ ಕೃಷ್ಣರಾಜಸಾಗರದಲ್ಲಿ ಗುರುವಾರ ಕಂಡ ಚಿತ್ತಾಕರ್ಷಕ ದೃಶ್ಯ. `ಜುಲೈ ತಿಂಗಳಲ್ಲಿ ಕೆಆರ್‌ಎಸ್ ಭರ್ತಿಯಾಗಿದ್ದು ಅಪರೂಪ. ಕೊಡಗು ಜಿಲ್ಲೆಯಲ್ಲಿಯ ತಲಕಾವೇರಿ, ಭಾಗಮಂಡಲದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಾವೇರಿ ನದಿ ನೀರು ಹೆಚ್ಚಿ, ಕೆಆರ್‌ಎಸ್ ತುಂಬಿದೆ.

ಹೀಗಾಗಿ, ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ, ಪ್ರತಿ ವರ್ಷ ಹೀಗೆಯೇ ಮಳೆಯಾಗಲಿ ಎಂದು ಕಾವೇರಿ ಮಾತೆಯನ್ನು ಪ್ರಾರ್ಥಿಸುವೆ. ಇದಕ್ಕಾಗಿ ಭಕ್ತಿ, ನಮ್ರತೆ ಹಾಗೂ ಗೌರವಪೂರ್ವಕವಾಗಿ ಪೂಜೆ ಸಲ್ಲಿಸಿದ್ದೇವೆ. ಕಾವೇರಿ ಅಲ್ಲದೇ ಕಬಿನಿ, ತುಂಗಭದ್ರಾ, ನಾರಾಯಣಪುರ, ಆಲಮಟ್ಟಿ, ಲಿಂಗನಮಕ್ಕಿ ಜಲಾಯಶಗಳು ಭರ್ತಿಯಾಗಿವೆ.

ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ತಮಿಳುನಾಡಿಗೆ ನೀರು ಬಿಡುವ ಸಮಸ್ಯೆ ಬಗೆಹರಿದಿದೆ. ರೈತರಿಗೆ ಸಮೃದ್ಧ ಬೆಳೆ ಬಂದು ಸುಖವಾಗಿರಲಿ. ಸಾರ್ವಜನಿಕರು ಸಂತೋಷದಿಂದ ಇರಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದರು.ಈ ಸಂದರ್ಭದಲ್ಲಿ ನೀರಾವರಿ ಸಚಿವ ಎಂ.ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್, ಸಚಿವರಾದ ವಿ. ಶ್ರೀನಿವಾಸ್ ಪ್ರಸಾದ್, ಎಚ್.ಎಸ್. ಮಹದೇವ ಪ್ರಸಾದ್, ಎಚ್.ಸಿ. ಮಹದೇವಪ್ಪ, ಶಾಸಕರಾದ ಎಂ.ಕೆ. ಸೋಮಶೇಖರ್, ಕೆ.ಎನ್. ಪುಟ್ಟಣ್ಣಯ್ಯ ಮೊದಲಾದವರು ಹಾಜರಿದ್ದರು.ಚುನಾವಣಾ ನೀತಿ ಉಲ್ಲಂಘನೆ?:  ಮಧ್ಯಾಹ್ನ 3.45 ಗಂಟೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕೃಷ್ಣರಾಜಸಾಗರದ ಎಂಜಿನಿಯರಿಂಗ್ ಸಿಬ್ಬಂದಿ ಕಾಲೇಜಿನ ಹೆಲಿಪ್ಯಾಡ್‌ಗೆ ಆಗಮಿಸಿದ ಮುಖ್ಯಮಂತ್ರಿ ಅವರು, ಬಾಗಿನ ಅರ್ಪಿಸಿ ಮತ್ತೆ ಬೆಂಗಳೂರಿನತ್ತ ಪ್ರಯಾಣಿಸಿದ್ದು 4.30 ಗಂಟೆಗೆ.

ಆದರೆ, ಬಾಗಿನ ಅರ್ಪಿಸಿದ ನಂತರ ಉಪ ಚುನಾವಣೆಯ ಅಂಗವಾಗಿ ನೀತಿಸಂಹಿತೆ ಜಾರಿಯಲ್ಲಿದ್ದರೂ ಸರ್ಕಾರಿ ವಾಹನದಲ್ಲಿ ಹೆಲಿಪ್ಯಾಡ್‌ವರೆಗೆ ತೆರಳಿದರು. ಈ ಕುರಿತು ಮಂಡ್ಯ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಅವರನ್ನು ಕೇಳಿದಾಗ, ಭದ್ರತೆ ದೃಷ್ಟಿಯಿಂದ ಸರ್ಕಾರಿ ವಾಹನದಲ್ಲಿ ಸಂಚರಿಸಲು ಚುನಾವಣಾ ಆಯೋಗದಿಂದ ಪರವಾನಗಿ ಪಡೆಯಲಾಗಿದೆ ಎಂದು ತಿಳಿಸಿದರು.

Post Comments (+)