ಸೋಮವಾರ, ನವೆಂಬರ್ 18, 2019
26 °C

ಕೆಆರ್‌ಎಸ್‌ನಲ್ಲಿ ಬರೀ 3.3 ಟಿಎಂಸಿ ನೀರು

Published:
Updated:

ಮೈಸೂರು: ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಒಡಲು ದಿನೇ ದಿನೇ ಬರಿದಾಗುತ್ತಿದ್ದು, ಕಣ್ಣು ಹಾಯಿಸಿದಷ್ಟು ದೂರಕ್ಕೆ ಜಲಾಶಯದಲ್ಲಿ ಕಾಣುತ್ತಿದ್ದ  ನೀರು ಇಲ್ಲವಾಗುತ್ತಿದೆ.ಜಲಾಶಯದಲ್ಲಿ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಲಿದೆ. ಈ ಜಲಾಶಯದ ನೀರನ್ನೇ ನೆಚ್ಚಿಕೊಂಡಿರುವ  ಮೈಸೂರು, ಮಂಡ್ಯ, ಚಾಮರಾಜನಗರ, ಚನ್ನಪಟ್ಟಣ, ರಾಮನಗರ ಮತ್ತು ಬೆಂಗಳೂರಿನ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.2004 ರಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ದಾಖಲೆ ಮಟ್ಟದಲ್ಲಿ ಕುಸಿದಿತ್ತು. ಆಗ ಜಲಾಶಯದ ನೀರಿನ ಮಟ್ಟ 71.33 ಅಡಿ ಇತ್ತು. 2012  ಮಾರ್ಚ್ 30 ರಂದು 98.63 ಅಡಿಗಳಷ್ಟು ನೀರು ಸಂಗ್ರಹವಿತ್ತು. ಕುಡಿಯುವ ನೀರು ಮತ್ತು ಬೆಳೆಗೆ ಒದಗಿಸಬೇಕಾದ ನೀರು ಸೇರಿದಂತೆ ಒಟ್ಟಾರೆ 17.355 ಟಿಎಂಸಿ ಜಲಾಶಯದಲ್ಲಿ ನೀರು ಸಂಗ್ರಹ ಇತ್ತು.ಈ ಮಾರ್ಚ್ 31 ಕ್ಕೆ ಜಲಾಶಯದಲ್ಲಿ ನೀರಿನ ಮಟ್ಟ 72 ಅಡಿಗೆ ಇಳಿಯಿತು. ಒಳ ಹರಿವಿನ ಪ್ರಮಾಣ 359 ಕ್ಯೂಸೆಕ್ ಮತ್ತು ಹೊರ ಹರಿವಿನ ಪ್ರಮಾಣ 701 ಕ್ಯೂಸೆಕ್ ಮಾತ್ರ ಇತ್ತು. ಪ್ರಸ್ತುತ ಜಲಾಶಯದಲ್ಲಿ 3.3 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹವಿದೆ. ಮೈಸೂರು, ಕೆ.ಆರ್.ಸಾಗರಕ್ಕೆ ನೀರು ಪೂರೈಸುವ ಆರ್‌ಬಿಎಲ್‌ಎಲ್ ನಾಲೆ ಕೂಡ ಬರಿದಾಗುತ್ತಿದೆ. ಮೈಸೂರಿಗೆ ನೀರೊದಗಿಸುವ ಹೊಂಗಳ್ಳಿ ವಾಣಿ ವಿಲಾಸ ಕಾರ್ಯಾಗಾರಕ್ಕೆ ಹರಿಯುವ  ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

................`ಕೃಷ್ಣರಾಜ ಸಾಗರ ಜಲಾಶಯದಲ್ಲಿ ಪ್ರಸ್ತುತ 3.3 ಟಿಎಂಸಿ ಅಡಿ ಮಾತ್ರ ನೀರಿದೆ. ಮೈಸೂರು, ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಿಗೆ ನಿತ್ಯ ಒಂದು ಸಾವಿರ ಕ್ಯೂಸೆಕ್ ನೀರನ್ನು ಪೂರೈಸಲಾಗುತ್ತಿದೆ. ಮಳೆ ಕೈಕೊಟ್ಟಿರುವುದರಿಂದ ಒಳ ಹರಿವಿನ ಪ್ರಮಾಣ ಕಡಿಮೆ ಇದ್ದು, ಹೊರ ಹರಿವಿನ ಪ್ರಮಾಣ ಹೆಚ್ಚಿದೆ. ಜಲಾಶಯದಲ್ಲಿ ಸಂಗ್ರಹ ಇರುವಷ್ಟು ನೀರು ಬಿಡುತ್ತೇವೆ. ಡೆಡ್ ಸ್ಟೋರೇಜ್ ತಲುಪಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು'.

-ವಿಜಯಕುಮಾರ್, ಎಂಜಿನಿಯರ್, ಕೃಷ್ಣರಾಜಸಾಗರ

ಪ್ರತಿಕ್ರಿಯಿಸಿ (+)