ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತ

7
ತುರ್ತುಸಭೆಗೆ ಸಂಸದ ವಿಶ್ವನಾಥ್ ಆಗ್ರಹ

ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತ

Published:
Updated:
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿತ

ಮೈಸೂರು: ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯ ಮಟ್ಟ ಬೇಸಿಗೆ ಆರಂಭಕ್ಕೆ ಮುನ್ನವೇ ಕುಸಿದಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತುಸಭೆ ಕರೆಯಬೇಕು' ಎಂದು ಸಂಸದ ಅಡಗೂರು ಎಚ್.ವಿಶ್ವನಾಥ್ ಆಗ್ರಹಿಸಿದರು.ಕೆಆರ್‌ಎಸ್ ಜಲಾಶಯಕ್ಕೆ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ರಾಜಧಾನಿ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಐದು ಜಿಲ್ಲೆಗಳ ಅಂದಾಜು 2 ಕೋಟಿ ಜನತೆಗೆ ಕೆಆರ್‌ಎಸ್‌ನಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ಜಲಾಶಯದ ನೀರಿನ ಮಟ್ಟ 83 ಅಡಿಗಳಿಗೆ ಕುಸಿದಿರುವುದರಿಂದ ಭವಿಷ್ಯದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಲಿದೆ. ಈಗ ಇರುವ ನೀರು 30 ದಿನಗಳಿಗೆ ಮಾತ್ರ ಬಳಕೆ ಮಾಡಲು ಸಾಧ್ಯ' ಎಂದರು.`ಕೆಆರ್‌ಎಸ್ ಜಲಾಶಯದ ವಾಸ್ತವಾಂಶ ಅರಿಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಪ್ರಸ್ತುತ ಪರಿಸ್ಥಿತಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ ಸಮರ್ಥವಾದ ಮಂಡಿಸಬೇಕು. ಕಾವೇರಿ ವಿವಾದಕ್ಕೆ ಸಂಬಂಧಿ ಸಿದಂತೆ ಸುಪ್ರೀಂ ಕೊರ್ಟ್‌ನಲ್ಲಿ ಇರುವ ಬಾಕಿ ವಿಚಾರಣೆಗಳನ್ನು ಕೂಡಲೇ ಇತ್ಯರ್ಥ ಗೊಳಿಸಬೇಕು. ಇಲ್ಲವಾದಲ್ಲಿ ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದರೆ ಈ ಭಾಗದ ಜನರ ಪರಿಸ್ಥಿತಿ ತೀರಾ ಹದಗೆಡಲಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ತಜ್ಞರ ಜೊತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಹುಡುಕಲು ಮುಂದಾಗಬೇಕು. ಇಲ್ಲವಾದಲ್ಲಿ ಹಾಹಾಕಾರ ಉಂಟಾಗಲಿದೆ' ಎಂದು ಹೇಳಿದರು.`ಕಬಿನಿ ಜಲಾಶಯದ ಪರಿಸ್ಥಿತಿ ಸಹ ಭಿನ್ನವಾಗಿಲ್ಲ. ಕಬಿನಿಯಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಜಲಾಶಯದಲ್ಲೂ ನೀರಿನ ಮಟ್ಟ 2256 ಅಡಿಗಳಿಗೆ ಕುಸಿದಿದೆ.ಹಾಗಾಗಿ ಬೆಂಗಳೂರಿಗೆ ನೀರಿನ ಸರಬರಾಜು ಸ್ಥಗಿತಗೊಳಿಸಿ ಕೆಆರ್‌ಎಸ್‌ನಿಂದಲೇ ಸರಬರಾಜು ಮಾಡಲಾಗುತ್ತಿದೆ. ಕೆಆರ್‌ಎಸ್ ಜಲಾಶಯದ ಮಟ್ಟ 68 ಅಡಿಗಳವರೆಗೆ ಕುಸಿದಾಗ ಹೊಂಗಳ್ಳಿ ಪಂಪಿಂಗ್ ಸ್ಟೇಷನ್‌ನಿಂದ ನೀರನ್ನು ಪಂಪ್ ಮಾಡುವುದು ಅನಿವಾರ್ಯ. ಆದರೆ ಅನೇಕ ವರ್ಷಗಳಿಂದ ಹೊಂಗಳ್ಳಿ ಪಂಪಿಂಗ್ ಸ್ಟೇಷನ್ ಬಳಕೆ ಮಾಡದಿರುವು ದರಿಂದ ಯಂತ್ರಗಳು ತುಕ್ಕು ಹಿಡಿದಿವೆ. ಕೂಡಲೇ ಅಧಿಕಾರಿಗಳು ಗಮನ ಹರಿಸಿ ಯಂತ್ರಗಳನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಬೇಕು' ಎಂದು ಒತ್ತಾಯಿಸಿದರು.ವಾರದೊಳಗೆ ಸಭೆ: `ಮೈಸೂರಿನಲ್ಲಿ ಪ್ರಭಾರ ಜಿಲ್ಲಾಧಿಕಾರಿ ಇದ್ದಾರೆ. ಸರ್ಕಾರ ಇನ್ನೂ ಜಿಲ್ಲಾಧಿಕಾರಿ ಯನ್ನು ನೇಮಿಸಿಲ್ಲ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಎಂಜಿನಿಯರುಗಳ ಸಭೆಯನ್ನು ವಾರದೊಳಗೆ ಕರೆದು ಕೆಆರ್‌ಎಸ್ ನೀರಿನ ಸಮಸ್ಯೆ ಕುರಿತು ಚರ್ಚಿಸಬೇಕು' ಎಂದು ಒತ್ತಾಯಿಸಿದರು.ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ ಮಾತನಾಡಿ, `ಕೆಆರ್‌ಎಸ್‌ನಲ್ಲಿ ಇರುವ ನೀರು ಮುಂದಿನ 30 ದಿನಗಳಿಗೆ ಮಾತ್ರ ಬಳಕೆಗೆ ಸಾಧ್ಯ. ಈ ತಿಂಗಳ ಕೊನೆವರೆಗೆ ಬೆಳೆ, ಜಾನುವಾರುಗಳಿಗೆ ಸಾಕಾಗಲಿದೆ. ಕಬಿನಿ, ಹಾರಂಗಿ, ಹೇಮಾವತಿ ಜಲಾಶಯದ ಮಟ್ಟ ಡೆಡ್ ಸ್ಟೋರೇಜ್ ಹಂತ ತಲುಪಿದೆ. ಹಾಗಾಗಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು' ಎಂದರು.ಮಹಾನಗರಪಾಲಿಕೆ ಸೂಪರಿಂಟೆಂಡ್ ಎಂಜಿನಿಯರ್ ಕೃಷ್ಣ,ಸಹಾಯಕ ಎಂಜಿನಿಯರ್ ನಟರಾಜ್, ವಾಣಿವಿಲಾಸ ನೀರು ಸರಬರಾಜು ಕಾರ್ಯಪಾಲಕ ಎಂಜಿನಿಯರ್ ಸುಬ್ರಹ್ಮಣ್ಯಂ, ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ. ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯ ಸಿ.ಮಂಜುನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry