ಕೆ.ಆರ್. ನಗರ: ಅಪರೂಪದ ನಿಲುಸುಕಲ್ಲು ಸಮಾಧಿಗಳು ಪತ್ತೆ

7

ಕೆ.ಆರ್. ನಗರ: ಅಪರೂಪದ ನಿಲುಸುಕಲ್ಲು ಸಮಾಧಿಗಳು ಪತ್ತೆ

Published:
Updated:

ಕೆ.ಆರ್. ನಗರ: ತಾಲ್ಲೂಕಿನ ಗಂಧನ­ಹಳ್ಳಿಯಲ್ಲಿ,  ಕುರುಬರಹಳ್ಳಿ, ಎಲೆಮುದ್ದನ­ಹಳ್ಳಿ, ಹೊಸೂರು ಹಾಗೂ ಲಾಳಂದೇವನಹಳ್ಳಿಯಲ್ಲಿ  ಸುಮಾರು 3 ಸಾವಿರ ವರ್ಷಗಳ ಹಿಂದಿನ ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಇತ್ತೀಚೆಗೆ ಪತ್ತೆಯಾಗಿವೆ.ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ. ರಾಮದಾಸರೆಡ್ಡಿ ಹಾಗೂ ಸಾಲಿಗ್ರಾಮ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸದ ಸಹಪ್ರಾಧ್ಯಾಪಕ ಎಂ.ಕೆ. ಮೃತ್ಯುಂಜಯ ಅವರೊಂದಿಗೆ ನಡೆಸಿದ ಕ್ಷೇತ್ರಕಾರ್ಯದಲ್ಲಿ 9 ಸಮಾಧಿಗಳು, ಅವಶೇಷಗಳು ಸಿಕ್ಕಿವೆ.ಇಲ್ಲಿ ಪತ್ತೆಯಾಗಿರುವ ಬೃಹತ್ ಗಾತ್ರದ ನಿಲುಸುಕಲ್ಲು ಸಮಾಧಿಗಳು 20ರಿಂದ 10 ಅಡಿ ಎತ್ತರವಿದೆ. ಈ ಸಮಾಧಿಗಳ ನೆಲೆಗಳಲ್ಲಿ ಕಪ್ಪು ಮತ್ತು ಕೆಂಪು ಬಣ್ಣದ ಮಡಕೆ ಭಾಗಗಳು, ಮೂಳೆ, ಅರೆಯುವ ಕಲ್ಲುಗಳು, ಅಲಂಕಾರಿಕ ಮಡಕೆ ಭಾಗಗಳು, ಕಬ್ಬಿಣ ಕರಗಿಸಿದ ನಂತರ ಉಳಿಯುವ ಕಿಟ್ಟ ದೊರಕಿವೆ.ಸದ್ಯ, ಈ ಕಲ್ಲುಗಳನ್ನು ಮುನಿವ್ಯಾಸನ್ನನ ಕಲ್ಲು, ಬಾನಿಕಲ್ಲು, ಮಾರಮ್ಮನ ಕಲ್ಲು, ಮುನಿಯಪ್ಪವಾಸದಕಲ್ಲು, ಹೊಸೂರಮ್ಮನಕಲ್ಲು ಎಂಬ ಹೆಸರುಗಳಿಂದ ಜನ ಕರೆಯುತ್ತಿದ್ದಾರೆ.ಗಂಧದಹಳ್ಳಿಯ ಸಿದ್ದರಾಮೇಗೌಡರ ಗದ್ದೆಯಲ್ಲಿ ಪತ್ತೆಯಾಗಿರುವ 20 ಅಡಿ ಎತ್ತರ, 12 ಅಡಿ ಅಗಲ, 24 ಅಡಿ ಸುತ್ತಳತೆ ಇರುವ ಅಪರೂಪದ ನಿಲುಸುಕಲ್ಲಿನಲ್ಲಿ ಭೂಮಟ್ಟದಿಂದ ತುದಿವರೆಗೂ 60 ಕುಳಿಗಳಿವೆ. ಇವು ಆದಿ ಮಾನವ ಆಕಾಶದಲ್ಲಿರುವ ನಕ್ಷತ್ರಗಳನ್ನು ನೋಡಿ ಸಮಯ ತಿಳಿಯಲು ಮಾಡಿಕೊಂಡಿರುವ ಕುಳಿಗಳೆಂದು ಪುರಾತತ್ವಶಾಸ್ತ್ರಜ್ಞ ಮಹದೇವಯ್ಯ ವಿಶ್ಲೇಷಿಸಿದರು.ಕೇರಳ, ಯೂರೋಪಿನ ಕೆಲವು ಪ್ರದೇಶಗಳು ಹಾಗೂ ಟರ್ಕಿಯ ಗೊಬೆಕ್ಸಿ­ತೆಪೆಯಲ್ಲಿರುವ ಕಲ್ಲುಗಳಿಗೆ ಈ ನಿಲುಸುಕಲ್ಲು ಸಮಾಧಿಗಳು ಹೋಲಿಕೆಯಲ್ಲಿವೆ ಎಂದು ಇತಿಹಾಸ ಪ್ರಾಧ್ಯಾಪಕ ರಾಮದಾಸರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry