ಕೆ.ಆರ್. ಪುರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ

7
ನಗರದ 14 ಕಡೆಗಳಲ್ಲಿ ಈ ವ್ಯವಸ್ಥೆ ರೂಪಿಸಲು ಜಲಮಂಡಳಿ ಸಿದ್ಧತೆ

ಕೆ.ಆರ್. ಪುರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ

Published:
Updated:
ಕೆ.ಆರ್. ಪುರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ

ಬೆಂಗಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ಸಮೀಪ ಇರುವ ಮಳೆನೀರು ಕಾಲುವೆಯಲ್ಲಿ ಹರಿಯುವ ಕೊಳಚೆ ನೀರನ್ನು ಶುದ್ಧೀಕರಿಸಿ ಮತ್ತೆ ಕಾಲುವೆಗೆ ಬಿಡುವ ಕಿರು ಒಡ್ಡು ಆಧಾರಿತ ತಾತ್ಕಾಲಿಕ ಶುದ್ಧೀಕರಣ ವ್ಯವಸ್ಥೆಯನ್ನು ಜಲಮಂಡಳಿಯು ಕೆ.ಆರ್.ಪುರದಲ್ಲಿ ನಿರ್ಮಿಸಿದ್ದು, ನಗರದ 14 ಕಡೆಗಳಲ್ಲಿ ಈ ವ್ಯವಸ್ಥೆಯನ್ನು ರೂಪಿಸಲು ಸಿದ್ಧತೆ ನಡೆಸಿದೆ.ಪ್ರಾಯೋಗಿಕವಾಗಿ ಕೆ.ಆರ್.ಪುರದಲ್ಲಿರುವ ಕೊಳಚೆನೀರು ಶುದ್ಧೀಕರಣ ಘಟಕ ಸಮೀಪದಲ್ಲೇ ಇರುವ ಮಳೆ ನೀರು ಕಾಲುವೆಗೆ ಅಡ್ಡವಾಗಿ ಸುಮಾರು ಅರ್ಧ ಮಟ್ಟದಲ್ಲಿ ಕಾಂಕ್ರೀಟ್ ಒಡ್ಡು ನಿರ್ಮಿಸಲಾಗಿದೆ. ಸಂಗ್ರಹಗೊಳ್ಳುವ ನೀರನ್ನು ಕೊಳವೆಯ ಮೂಲಕ  ಗುಂಡಿಗೆ ಹಾಯಿಸಲಾಗಿದ್ದು, ಇದೇ ನೀರನ್ನು ಪಂಪ್ ಮೂಲಕ ಘಟಕಕ್ಕೆ ತುಂಬಿ, ಅಲ್ಲಿಂದ ಶುದ್ದೀಕರಣಗೊಂಡು ನೀರು ಮತ್ತೆ ಕಾಲುವೆಯನ್ನು ಸೇರುತ್ತದೆ.  ಇದರಿಂದ ಕೊಳಚೆ ನೀರಿನ ಬದಲು ಶುದ್ದೀಕರಣಗೊಂಡ ನೀರು ಕಾಲುವೆಯ ಮೂಲಕ ಕೆ.ಆರ್.ಪುರ ಸಮೀಪದ ತಿಂಗಯ್ಯನಗರ ಕೆರೆಯನ್ನು ತಲುಪುತ್ತದೆ. ಅಂತರ್ಜಲ ಕಲುಷಿತಗೊಳ್ಳುವುದನ್ನು ತಪ್ಪಿಸುತ್ತದೆ.ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ವಾಮನ ಆಚಾರ್ಯ, `20 ದಶಲಕ್ಷ ಲೀಟರ್ ಶುದ್ಧೀಕರಣ ಸಾಮರ್ಥ್ಯ ಹೊಂದಿರುವ ಈ ಘಟಕದಲ್ಲಿ ಸದ್ಯಕ್ಕೆ ಐದು ದಶಲಕ್ಷ ನೀರು ಶುದ್ಧೀಕರಣಗೊಳುತ್ತಿದ್ದು, ಕಾಲುವೆಯ ಕೊಳಚೆ ನೀರನ್ನು ಹರಿಸಿದ ಮೇಲೆ ಈ ಶುದ್ಧೀಕರಣದ ಪ್ರಮಾಣ 10 ದಶಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಇತರೆ ಶುದ್ಧೀಕರಣ ಘಟಕಗಳ ಸಮೀಪ ಕಾಲುವೆ ಇರುವುದರಿಂದ ಒಡ್ಡುಕಟ್ಟು ಶುದ್ದೀಕರಣ ವ್ಯವಸ್ಥೆಯನ್ನು ಎಲ್ಲ ಕಡೆಗಳಲ್ಲೂ ಸ್ಥಾಪಿಸಿ ಅಂತರ್ಜಲ ಹೆಚ್ಚಿಸಬಹುದು' ಎಂದು ತಿಳಿಸಿದರು.`ಅಂತರ್ಜಲ ಶುದ್ದೀಕರಣ ಹಾಗೂ ಕೆರೆಗಳಲ್ಲಿ ಕೊಳಚೆ ನೀರು ಇಂಗುವುದನ್ನು ತಪ್ಪಿಸಲು ಇದೇ ತಂತ್ರಜ್ಞಾನವನ್ನು ವಿವಿಧೆಡೆಗಳಲ್ಲಿ ಅಳವಡಿಸಲಾಗುವುದು. ಎಲ್ಲ ಕಡೆ ಯಶಸ್ವಿಯಾಗಿ ಅಳವಡಿಕೆಯಾದ ನಂತರ ಸುಮಾರು 101 ದಶಲಕ್ಷ ಲೀಟರ್ ನೀರು ಶುದ್ಧೀಕರಣಗೊಂಡು ಅಂತರ್ಜಲವನ್ನು ಸೇರಲಿದೆ. ಕಿರು ಒಡ್ಡು ನಿರ್ಮಾಣದ ವೆಚ್ಚ ರೂ.90 ಸಾವಿರ ಆಗಿದ್ದು, ಒಟ್ಟು ರೂ.20 ಲಕ್ಷ  ಅಂದಾಜು ವೆಚ್ಚದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ' ಎಂದು ಅವರು ತಿಳಿಸಿದರು.`ನಾಗಸಂದ್ರ, ವೃಷಭಾವತಿ ಕಣಿವೆ, ರಾಜಾ ಕೆನಾಲ್ ಪ್ರದೇಶಗಳಲ್ಲಿರುವ ಇರುವ ಶುದ್ಧೀಕರಣ ಘಟಕಗಳಲ್ಲಿ ತಕ್ಷಣವೇ ಈ ವ್ಯವಸ್ಥೆಯನ್ನು ಅಳವಡಿಸಿ, ಕಡಿಮೆ ಖರ್ಚಿನಲ್ಲಿ ಅಲ್ಪಾವಧಿಯಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಬಹುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry