ಕೆಎಂಎಫ್ ಹಾಲಾಹಲ

7

ಕೆಎಂಎಫ್ ಹಾಲಾಹಲ

Published:
Updated:

ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಶುಕ್ರವಾರ ಕಚೇರಿಗೆ ಬಂದ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಅವರು ಏಕಾಏಕಿ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮನಾಥ್ ಅವರನ್ನು ಎತ್ತಂಗಡಿ ಮಾಡಿದ್ದಾರೆ. ಅವರ ಸ್ಥಾನಕ್ಕೆ ಬೆಂಗಳೂರು ಡೇರಿ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ರೆಡ್ಡಿ ಅವರನ್ನು ನೇಮಕ ಮಾಡಿದ್ದಾರೆ.ಈ ಬೆಳವಣಿಗೆಯಿಂದ ಮನನೊಂದ ಪ್ರೇಮನಾಥ್ ಅವರು ಸೇವೆಗೆ ರಾಜೀನಾಮೆ ನೀಡಿದ್ದಾರೆ.

ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಆಂಧ್ರಪ್ರದೇಶ ಪೊಲೀಸರು ಸೋಮಶೇಖರ ರೆಡ್ಡಿ ಅವರನ್ನು ಬಂಧಿಸಿದ್ದರು. ಸುಮಾರು ಎರಡು ತಿಂಗಳ ಕಾಲ ಹೈದರಾಬಾದ್‌ನ ಜೈಲಿನಲ್ಲಿದ್ದ ಅವರು ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.ಶುಕ್ರವಾರ ಬೆಳಿಗ್ಗೆ 11ಕ್ಕೆ ಕೆಎಂಎಫ್ ಪ್ರಧಾನ ಕಚೇರಿಗೆ ಬರುತ್ತಲೇ ಲಕ್ಷ್ಮಣ ರೆಡ್ಡಿ ಅವರಿಗೆ ಅಧಿಕಾರ ಹಸ್ತಾಂತರಿಸುವಂತೆ ಪ್ರೇಮನಾಥ್ ಅವರಿಗೆ ಸೂಚಿಸಿದರು. ಕಚೇರಿಗೆ ಬರುವಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡು ಬಂದಿದ್ದ ರೆಡ್ಡಿ ಅವರು ತಮ್ಮ ಜತೆ ಇದ್ದ ಲಕ್ಷ್ಮಣ ರೆಡ್ಡಿ ಅವರನ್ನು ತೋರಿಸಿ, `ಅವರಿಗೆ ಅಧಿಕಾರ ಒಪ್ಪಿಸಿ~ ಎಂದು ಹೇಳಿದರು.ಇದರಿಂದ ಕಕ್ಕಾಬಿಕ್ಕಿಯಾದ ಪ್ರೇಮನಾಥ್ ಅವರು `ಸರ್, ಈ ರೀತಿಯ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ನನ್ನನ್ನು ನೇಮಕ ಮಾಡಿದ್ದು ಆಡಳಿತ ಮಂಡಳಿ. ಏಕಾಏಕಿ ಹೀಗೆ ಹೇಳಿದರೆ ಹೇಗೆ~ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.ಇದರಿಂದ ಸಿಟ್ಟಿಗೆದ್ದ ಸೋಮಶೇಖರ ರೆಡ್ಡಿ, `ನನಗೆ ನೀವು ಬೇಡ. ಲಕ್ಷ್ಮಣ ರೆಡ್ಡಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು. ನಿಮ್ಮನ್ನು ವಿಜಾಪುರದ ಡೆಂಪೊ ಡೇರಿ (ಹಾಲಿನ ಪುಡಿ) ಘಟಕದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಿದ್ದೇನೆ~ ಎಂದು ಹೇಳಿ, ಆದೇಶದ ಪ್ರತಿಯನ್ನು ನೀಡಿದರು ಎನ್ನಲಾಗಿದೆ.ನಂತರ ಪ್ರೇಮನಾಥ್ ಅವರು ಸಹಕಾರ ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಲು ಪ್ರಯತ್ನಿಸಿದರು.ಆಗ ರೆಡ್ಡಿ ಜತೆ ಇದ್ದ ಬೆಂಬಲಿಗರು, `ಅಂತಹ ಯಾವ ಪ್ರಯತ್ನವೂ ಬೇಡ. ಮೊದಲು ರಾಜೀನಾಮೆ ಕೊಟ್ಟು ಹೊರನಡೆಯಿರಿ~ ಎಂದು ಬೆದರಿಸಿದರು ಎಂದು ಗೊತ್ತಾಗಿದೆ.ಹೀಗಾಗಿ ಪ್ರೇಮನಾಥ್ ಅವರು ಲಕ್ಷ್ಮಣ ರೆಡ್ಡಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಬೆಳಿಗ್ಗೆ 11.30ಕ್ಕೆ ಕಚೇರಿಯಿಂದ ಹೊರ ನಡೆದರು. ಹೋಗುವುದಕ್ಕೂ ಮುನ್ನ ರಜೆ ಹಾಕಿದರು. ಬಳಿಕ ರಾಜೀನಾಮೆ ಪತ್ರವನ್ನು ಎಂ.ಡಿ. ಕಚೇರಿಗೆ ಕೊಟ್ಟು ಹೋದರು ಎಂದು ಮೂಲಗಳು ತಿಳಿಸಿವೆ.ಪ್ರೇಮನಾಥ್ ವರ್ಗಾವಣೆ  ಜತೆಗೆ, ಪಶು ಆಹಾರ ಖರೀದಿಯಲ್ಲಿನ ಅಕ್ರಮದ ಆರೋಪದ ಎದುರಿಸುತ್ತಿರುವ ಕೆಎಂಎಫ್‌ನ ಈ ಹಿಂದಿನ ನಿರ್ದೇಶಕ ನರಸಿಂಹ ರೆಡ್ಡಿ ಅವರನ್ನು ವಿಜಾಪುರದ ಡೆಂಪೊ ಡೇರಿಯಿಂದ ಬೆಂಗಳೂರಿನ ಮದರ್ ಡೇರಿಯ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಿದ್ದಾರೆ.ಈ ಹಿಂದೆ ಉಸ್ತುವಾರಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ.ಎಂ.ಎನ್.ವೆಂಕಟರಾಮು ಅವರನ್ನು ಸೆ.5ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಬದಲಿಸಲಾಗಿತ್ತು. ಅವರ ಜಾಗಕ್ಕೆ ಪ್ರೇಮನಾಥ್ ಅವರನ್ನು ನೇಮಕ ಮಾಡಲಾಗಿತ್ತು.ವಿರೋಧ: ರೆಡ್ಡಿ ಅವರ ಈ ಕ್ರಮದ ಬಗ್ಗೆ ಕೆಎಂಎಫ್ ನಿರ್ದೇಶಕ ರೇವಣ್ಣಸಿದ್ದಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. `ಇದೊಂದು ಸರ್ವಾಧಿಕಾರಿ ಧೋರಣೆ. ಆಡಳಿತ ಮಂಡಳಿ ತೆಗೆದುಕೊಂಡಿದ್ದ ತೀರ್ಮಾನಕ್ಕೆ ವ್ಯತಿರಿಕ್ತವಾಗಿ ಅಧ್ಯಕ್ಷರು ನಡೆದುಕೊಂಡಿದ್ದಾರೆ. ಇದು ಖಂಡನೀಯ~ ಎಂದು  ಅವರು `ಪ್ರಜಾವಾಣಿ~ಗೆ ತಿಳಿಸಿದರು.`ಸೆ.5ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಕೆಎಂಎಫ್ ಎಂ.ಡಿ ಹುದ್ದೆಗೆ ಐಎಎಸ್ ಅಧಿಕಾರಿ  ನೇಮಿಸುವಂತೆ ಸರ್ಕಾರವನ್ನು ಕೋರುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಕುರಿತು ಮುಖ್ಯಮಂತ್ರಿಗೂ ಮನವಿ ಮಾಡಿದ್ದು ತಕ್ಷಣವೇ ಐಎಎಸ್ ಅಧಿಕಾರಿಯನ್ನು ನೇಮಿಸಬೇಕು~ ಎಂದು ಆಗ್ರಹಪಡಿಸಿದರು.`ಬೇಸತ್ತು ರಾಜೀನಾಮೆ~

ಬೆಂಗಳೂರು:  `ಯಾವ ತಪ್ಪು ಇಲ್ಲದಿದ್ದರೂ ನನ್ನನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಇದರಿಂದ ಬೇಸತ್ತು ಸೇವೆಗೆ ರಾಜೀನಾಮೆ ನೀಡಿದ್ದೇನೆ~ ಎಂದು ಎ.ಎಸ್. ಪ್ರೇಮನಾಥ್ `ಪ್ರಜಾವಾಣಿ~ಗೆ ತಿಳಿಸಿದರು.ಐಎಎಸ್ ಅಧಿಕಾರಿ ನೇಮಕ?

ಬೆಂಗಳೂರು: ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮನಾಥ್ ಅವರನ್ನು ದಿಢೀರನೆ ವರ್ಗಾವಣೆ ಮಾಡಿರುವುದು ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಗ್ರಾಸ ನೀಡಿದ್ದು, ಐಎಎಸ್ ಅಧಿಕಾರಿಯನ್ನು ಆ ಹುದ್ದೆಗೆ ನೇಮಿಸುವುದು ಬಹುತೇಕ ಖಚಿತವಾಗಿದೆ.ಸೋಮಶೇಖರ ರೆಡ್ಡಿ ಜೈಲಿನಲ್ಲಿದ್ದ ಸಂದರ್ಭದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ ಸರ್ಕಾರ ಐಎಎಸ್ ಅಧಿಕಾರಿಯನ್ನು ಎಂ.ಡಿ. ಆಗಿ ನೇಮಕ ಮಾಡಲು ಪ್ರಯತ್ನ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry