ಕೆಎಎಸ್ ಪರೀಕ್ಷೆಯಲ್ಲಿ ಅವ್ಯವಹಾರ ಎಸಗಿದ ಪ್ರಕರಣ:ದೂಳು ತಿನ್ನುತ್ತಿರುವ ವರದಿ

7

ಕೆಎಎಸ್ ಪರೀಕ್ಷೆಯಲ್ಲಿ ಅವ್ಯವಹಾರ ಎಸಗಿದ ಪ್ರಕರಣ:ದೂಳು ತಿನ್ನುತ್ತಿರುವ ವರದಿ

Published:
Updated:

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಅವ್ಯವಹಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೆ.ರಾಮೇಶ್ವರಪ್ಪ ವಿರುದ್ಧ ನಡೆದ ಇಲಾಖಾ ವಿಚಾರಣೆಯ ವರದಿ ದೂಳು ತಿನ್ನುತ್ತಿದೆ.ರಾಮೇಶ್ವರಪ್ಪ ವಿರುದ್ಧದ ಆರೋಪ ಇಲಾಖಾ ವಿಚಾರಣೆಯಲ್ಲಿ ಸಾಬೀತಾಗಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಎಂಟು ತಿಂಗಳ ಹಿಂದೆಯೇ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಇಲಾಖಾ ವಿಚಾರಣೆಯನ್ನು ಆಧರಿಸಿ ರಾಮೇಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ವಿಚಾರ ಆರು ತಿಂಗಳ ಹಿಂದೆ ಸಂಪುಟ ಸಭೆಯ ಮುಂದೆ ಬಂದಿತ್ತು. ಆಗ ರಾಮೇಶ್ವರಪ್ಪ ನೆರವಿಗೆ ಬಂದ ಸಚಿವರೊಬ್ಬರು, ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

 

ಆ ವೇಳೆ ಮಧ್ಯಪ್ರವೇಶಿದ ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಇಲಾಖಾ ವಿಚಾರಣೆಯ ವರದಿ ಆಧರಿಸಿ ಕ್ರಮಕೈಗೊಳ್ಳುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಮುಂದಿನ ಸಂಪುಟ ಸಭೆಗೆ ಈ ವಿಷಯವನ್ನು ತನ್ನಿ~ ಎಂದು ಸೂಚಿಸುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದರು.ಇದಾದ ನಂತರ ಕಾನೂನು ಇಲಾಖೆ ತನ್ನ ಅಭಿಪ್ರಾಯ ತಿಳಿಸಿದ್ದು, `ವರದಿ ಆಧರಿಸಿ ಸರ್ಕಾರ ಕ್ರಮಕೈಗೊಳ್ಳಬಹುದು ಎಂದು ಹೇಳಿದೆ. ಇಷ್ಟಾದರೂ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ತನಿಖಾಧಿಕಾರಿ ನೀಡಿರುವ ವರದಿ ಮೂಲೆ ಸೇರಿದೆ~ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.ಕೆಪಿಎಸ್‌ಸಿ 1998ರಲ್ಲಿ ನಡೆಸಿದ ಕೆಎಎಸ್ ಪರೀಕ್ಷೆಗೆ ಹಾಜರಾಗುವುದಕ್ಕೂ ಮೊದಲೇ ರಾಮೇಶ್ವರಪ್ಪ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉನ್ನತ ಹುದ್ದೆ ಬಯಸಿದ್ದ ಅವರು ಆ ಸಾಲಿನ ಕೆಎಎಸ್ ಪರೀಕ್ಷೆ ಬರೆದಿದ್ದರು.ಮುಖ್ಯ ಪರೀಕ್ಷೆಯಲ್ಲಿ ರಾಮೇಶ್ವರಪ್ಪ ಮತ್ತು ಅವರ ಕುಟುಂಬದ ಇತರ ಮೂವರು ಅವ್ಯವಹಾರ ಎಸಗಿ ಮೊದಲ ಮೂರು ರ‌್ಯಾಂಕ್‌ಗಳನ್ನು ಪಡೆದಿದ್ದಾರೆ ಎಂಬುದು ಆಯೋಗ ನಡೆಸಿದ ತನಿಖೆಯಿಂದ ಸಾಬೀತಾಗಿತ್ತು. ಹೀಗಾಗಿ ರಾಮೇಶ್ವರಪ್ಪ, ಅವರ ಭಾವಮೈದುನ ನಾಗರಾಜ್, ನಾದಿನಿಯರಾದ ತ್ರಿವೇಣಿ, ಹೇಮಲತಾ ಸೇರಿದಂತೆ ಅಕ್ರಮ ಎಸಗಿದ ಅಭ್ಯರ್ಥಿಗಳನ್ನು ಆಯೋಗವು  ಕಪ್ಪುಪಟ್ಟಿಗೆ ಸೇರಿಸಿತ್ತು.ಆ ವೇಳೆಗಾಗಲೇ ರಾಮೇಶ್ವರಪ್ಪ ಸೇವೆಯಲ್ಲಿ ಇದ್ದ ಕಾರಣ, ಆಯೋಗದ ಶಿಫಾರಸಿನಂತೆ 2011ರಲ್ಲಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.ಮೊನ್ನಪ್ಪ ಪ್ರಕರಣ: 1998ರಲ್ಲಿ ಆಯೋಗದ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಎ.ಕೆ.ಮೊನ್ನಪ್ಪ ಅವರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಅಭಿಜಿತ್‌ದಾಸ್ ಗುಪ್ತಾ ಅವರು ವಿಚಾರಣೆ ನಡೆಸಿ ವರದಿ ನೀಡಿದ್ದಾರೆ. `ಪರೀಕ್ಷೆಯಲ್ಲಿ ಅವ್ಯವಹಾರ ಆಗಿರುವುದು ನಿಜ. ಆದರೆ ಮೊನ್ನಪ್ಪ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆ ಇಲ್ಲ~ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.`ಇನ್ನೂ ಓದಿಲ್ಲ~

`ರಾಮೇಶ್ವರಪ್ಪ ವಿರುದ್ಧ ನಡೆದ ಇಲಾಖಾ ವಿಚಾರಣೆಯ ವರದಿ ಮತ್ತು ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ಸಂಬಂಧಿಸಿದ ಕಡತ ನನಗೆ ಸಲ್ಲಿಕೆಯಾಗಿದೆ. ಅದು ತುಂಬ ದೀರ್ಘವಾಗಿದೆ. ಇನ್ನೂ ಓದಿಲ್ಲ. ವರದಿಯಲ್ಲಿ ಏನಿದೆ ಎಂದು ತಿಳಿದುಕೊಂಡ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು~.

-ಡಿ.ಎನ್.ಜೀವರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry