ಕೆ.ಎಚ್.ಮುನಿಯಪ್ಪ ಅಮಾನತಿಗೆ ಆಗ್ರಹ

7

ಕೆ.ಎಚ್.ಮುನಿಯಪ್ಪ ಅಮಾನತಿಗೆ ಆಗ್ರಹ

Published:
Updated:

ಚಿಂತಾಮಣಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ವಿ.ಮುನಿಯಪ್ಪ ಅವರನ್ನು ಕಾಂಗ್ರೆಸ್‌ನಿಂದ ಅಮಾನತುಗೊಳಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ವೆಂಕಟರವಣಸ್ವಾಮಿ ಒತ್ತಾಯಿಸಿದರು.ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಕೇಂದ್ರ ಸಚಿವರನ್ನು ಅಮಾನತು ಮಾಡದಿದ್ದರೆ ಕೋಲಾರ ಜಿಲ್ಲೆಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕಾಂಗ್ರೆಸ್ ಅವಸಾನವಾಗುತ್ತದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ನ 21 ಸದಸ್ಯರಿದ್ದರೂ ಕೇವಲ ಒಬ್ಬ ಸದಸ್ಯರಿರುವ ಬಿಜೆಪಿ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಈ ರೀತಿ ನಡೆದುಕೊಂಡರೆ ಪಕ್ಷಕ್ಕೆ ಉಳಿಗಾಲವಿದೆಯೇ ಎಂದು ಪ್ರಶ್ನಿಸಿದರು.ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ. ಕೋಲಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಎಪಿಎಂಸಿ ಇತರ ಸ್ಥಳೀಯ ಸಂಸ್ಥೆಗಳಲ್ಲೂ ಪಕ್ಷ ಅಧಿಕಾರ ಕಳೆದುಕೊಂಡಿದೆ ಎಂದು ಆರೋಪಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ಚಿನ್ನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೋಡಿಗಲ್ ರೆಡ್ಡೆಪ್ಪ, ಸದಸ್ಯ ಸ್ಕೂಲ್ ಸುಬ್ಬಾರೆಡ್ಡಿ, ಟಿಎಪಿಎಂಸಿ ಅಧ್ಯಕ್ಷ ಚಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟಶಿವಾರೆಡ್ಡಿ, ನಗರಸಭೆ ಸದಸ್ಯ ದೇವರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಸಿ, ಬಿಜೆಪಿಗೆ ಅಧಿಕಾರ ನೀಡಿರುವ ಕೆ.ಎಚ್.ಮುನಿಯಪ್ಪ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.ರಾಜಕೀಯ ಗಂಧವೇ ಅರಿಯದ ನಂದನವನಂ ಶ್ರೀರಾಮರೆಡ್ಡಿ, ಪೆರೇಸಂದ್ರ ಸುಧಾಕರರೆಡ್ಡಿ ಸೇರಿ, ಆಂಜನೇಯರೆಡ್ಡಿ ಕುಟುಂಬವು ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯುಂಟು ಮಾಡಿದೆ ಎಂದು ಆರೋಪಿಸುವುದರಲ್ಲಿ ಹುರುಳಿಲ್ಲ. ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಆರಂಭದಿಂದಲೂ ಚಿಂತಾಮಣಿಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದು ಕೊಡುತ್ತಿರುವುದು ಆಂಜನೇಯರೆಡ್ಡಿ ಕುಟುಂಬ ಎಂದರು.ಮಾಜಿ ಮಂತ್ರಿ ಚೌಡರೆಡ್ಡಿ ಬೆಂಬಲದೊಂದಿಗೆ ಸಂಸದರಾದರು. ಅದೇ ರೀತಿ ವೇಮಗಲ್ ಮತ್ತು ಚಿಂತಾಮಣಿ ಕ್ಷೇತ್ರಗಳಲ್ಲಿ ಕೃಷ್ಣಬೈರೇಗೌಡ, ಎಂ.ಸಿ.ಸುಧಾಕರ್ ಬೆಂಬಲದೊಂದಿಗೆ ಮಂತ್ರಿಯಾಗಿರುವುದನ್ನು ಮರೆತು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry