ಕೆಎಚ್‌ಡಿಸಿ ಅಧಿಕಾರಿಗಳಿಗೆ ದಿಗ್ಬಂಧನ

7

ಕೆಎಚ್‌ಡಿಸಿ ಅಧಿಕಾರಿಗಳಿಗೆ ದಿಗ್ಬಂಧನ

Published:
Updated:

ಹುಬ್ಬಳ್ಳಿ: ಕಳೆದ ತಿಂಗಳಿನ ಸಂಬಳ ಬಂದಿಲ್ಲವೆಂದು ಕೆಎಚ್‌ಡಿಸಿ (ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ) ನೌಕರರು ತಮ್ಮ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಘಟನೆ ಶುಕ್ರವಾರ ಇಲ್ಲಿಯ ನೇಕಾರ ಭವನದಲ್ಲಿ ನಡೆಯಿತು.ಗುಲ್ಬರ್ಗ, ಗದಗ, ಬನಹಟ್ಟಿ-ರಬಕವಿ, ಬಸವಕಲ್ಯಾಣ ಹಾಗೂ ಭಾಗ್ಯನಗರದ ಆರು ಯೋಜನಾ ಕಚೇರಿಗಳಲ್ಲಿ ಕೆಎಚ್‌ಡಿಸಿಯ 200 ಉದ್ಯೋಗಿಗಳಿಗೆ ಹಾಗೂ ಉತ್ತರ ಕರ್ನಾಟಕದ 10 ಮಾರಾಟ ಮಳಿಗೆಗಳ 20 ಸಿಬ್ಬಂದಿಗೆ ನವೆಂಬರ್ ತಿಂಗಳ ಸಂಬಳ ಬಂದಿಲ್ಲ. ಸಂಬಳ ಕೊಡಿರೆಂದು ವಿವಿಧೆಡೆಯಿಂದ ಬಂದ ನೌಕರರು, ಅಧಿಕಾರಿಗಳನ್ನು ಕೇಳಿದರು. ಆದರೆ ಈ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು ಬೆಳಗಾವಿಯ ಅಧಿವೇಶನಕ್ಕೆ ತೆರಳುವುದನ್ನು ಕಂಡ ನೌಕರರು, ಅಧಿಕಾರಿಗಳನ್ನು ಕೊಠಡಿಯಲ್ಲಿ ದಿಗ್ಬಂಧನ ವಿಧಿಸಿ, ಮಧ್ಯಾಹ್ನ ಊಟ ಮಾಡುವುದಕ್ಕೂ ಅವಕಾಶ ನೀಡಲಿಲ್ಲ.`ಉತ್ಪಾದನೆ ಹಾಗೂ ಮಾರಾಟ ಗುರಿ ತಲುಪಿದರೂ ತಿಂಗಳ ಸಂಬಳ ಕೊಟ್ಟಿಲ್ಲ. ಇದರೊಂದಿಗೆ ನವೆಂಬರ್ ತಿಂಗಳಲ್ಲಿ ನಿಗಮದ ನೇಕಾರರಿಗೆ ಕಚ್ಚಾ ಮಾಲು ಸರಿಯಾಗಿ ಪೂರೈಸಿಲ್ಲ. ಜೊತೆಗೆ ಕಳಪೆ ಗುಣಮಟ್ಟದ ಕಚ್ಚಾ ಮಾಲು ಕೊಡಬಾರದೆಂಬ ನಿಯಮವಿದೆ.ಹೀಗಾಗಿ ನೇಕಾರರಿಗೆ ಕಚ್ಚಾ ಮಾಲು ಪೂರೈಸಲಿಲ್ಲ. ಇದರಿಂದ ಉತ್ಪಾದನಾ ಗುರಿ ತಲುಪಲಾಗಿಲ್ಲ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹ್ಸಿನ್ ಖಾನ್ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿಯಾಗಿ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಬೆಳಗಾವಿ ಅಧಿವೇಶನಕ್ಕೆ ಅವರು ಹೋಗಿದ್ದಾರೆ. ಮೊಬೈಲ್ ಫೋನ್ ಸ್ವೀಕರಿಸುತ್ತಿಲ್ಲ.ಹೀಗಾಗಿ ಇಲ್ಲಿರುವ ಅಧಿಕಾರಿಗಳಿಗೆ ಮಧ್ಯಾಹ ಒಂದು ಗಂಟೆಯಿಂದ ದಿಗ್ಬಂಧನ ಹಾಕಿದೆವು' ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ತಿಳಿಸಿದರು.`ವ್ಯವಸ್ಥಾಪಕ ನಿರ್ದೇಶಕರೇ ಉತ್ತರ ಕೊಡುತ್ತಾರೆ' ಎಂದು ನಿಗಮದ ಜಂಟಿ ಕಾರ್ಯದರ್ಶಿ ಆನಂದ ಕಿತ್ತೂರು ಹೇಳಿದರು. ಮೊಹ್ಸಿನ್ ಖಾನ್ ಅವರನ್ನು ಸಂಪರ್ಕಿಸಿದಾಗ, ಈಗಾಗಲೇ ಶೇ 50-60ರಷ್ಟು ಉತ್ಪಾದನೆ ಹಾಗೂ ಮಾರಾಟದ ಗುರಿ ತಲುಪಿದ ನೌಕರರಿಗೆ ಶೇ 50ರಷ್ಟು ಸಂಬಳ ನೀಡಲಾಗಿದೆ. ಶೇ 80ರಷ್ಟು ಗುರಿ ತಲುಪಿದವರಿಗೆ ಪೂರ್ತಿ ಸಂಬಳ ಕೊಡಲಾಗುವುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry