ಕೆಎಚ್‌ಬಿ ಕಾಲೊನಿಯಲ್ಲಿ ಮುಕ್ತಿ ಕಾಣದ ಸಮಸ್ಯೆಗಳು

ಭಾನುವಾರ, ಜೂಲೈ 21, 2019
26 °C

ಕೆಎಚ್‌ಬಿ ಕಾಲೊನಿಯಲ್ಲಿ ಮುಕ್ತಿ ಕಾಣದ ಸಮಸ್ಯೆಗಳು

Published:
Updated:

ಕಾರವಾರ: ನಗರದ ಗೃಹಮಂಡಳಿ (ಕೆಎಚ್‌ಬಿ) ಕಾಲೊನಿ (19ನೇ ವಾರ್ಡ್)ಯಲ್ಲಿರುವ ರಸ್ತೆ, ಬೀದಿದೀಪ ಮತ್ತು ಗಟಾರು ಸಮಸ್ಯೆಗಳು ಮುಕ್ತಿ ಕಾಣುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ.ತರಾತುರಿಯಲ್ಲಿ, ಅವೈಜ್ಞಾನಿಕವಾಗಿ ಕಾಲೊನಿಯಲ್ಲಿ ಗಟಾರು ನಿರ್ಮಿಸಿದ್ದರಿಂದ ಮಳೆ ನೀರು ಸರಿಯಾಗಿ ಹರಿದು ಹೋಗದೆ ಮನೆಯಂಗಳದಲ್ಲೇ ನಿಂತು ನಿವಾಸಿಗಳು ತೊಂದರೆ ಅನುಭವಿಸಬೇಕಾಗಿದೆ. ಎಡಬಿಡದೆ ಮಳೆ ಸುರಿದರೆ ಕಾಲೊನಿಯಲ್ಲಿರುವ ಎಲ್‌ಐಜಿ ಸಾಲಿನಲ್ಲಿ ನೀರು ಮನೆಯೊಳಗೆ ಪ್ರವೇಶ ಮಾಡುತ್ತದೆ.ಹೀಗೆ ಪ್ರತಿ ಮಳೆಗಾಲ ಎನ್ನುವುದು ಕಾಲೊನಿಯ ನಿವಾಸಿಗಳಿಗೆ ದುಃಸ್ವಪ್ನವಾಗಿ ಕಾಡುತ್ತದೆ. ಗಟಾರಿನಲ್ಲೇ ಸಂಗ್ರಹವಾಗಿರುವ ಮಳೆ ನೀರಿನಲ್ಲಿ ಕಸಕಡ್ಡಿ ಮತ್ತು ತ್ಯಾಜ್ಯಗಳು ಬಿದ್ದು ಅದು ಕೊಳೆತು ಅಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಕೊಡುವ ಕಾಟದಿಂದ ಸುಖ ನಿದ್ದೆ ಎನ್ನುವುದು ಕಾಲೊನಿಯ ನಿವಾಸಿಗಳ ಪಾಲಿಗೆ ದೂರದ ಮಾತಾಗಿದೆ.ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಗರಸಭೆ ಕಾಲೊನಿಯ ಕೆಲವು ಭಾಗಗಳಲ್ಲಿ ಗಟಾರಿನಲ್ಲಿ ತುಂಬಿದ ಹೂಳು ತೆಗೆದಿದೆ. ಆದರೂ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದರಿಂದಾಗಿ ಮಳೆ ನೀರು ರಸ್ತೆಯ ಮೇಲೆ ಬಂದು ನಿಲ್ಲುವುದರಿಂದ ಡಾಂಬರು ಕಿತ್ತುಹೋಗಿ ಗುಂಡಿಗಳು ಬಿದ್ದು ರಸ್ತೆಗಳೂ ಶೋಚನೀಯ ಸ್ಥಿತಿಗೆ ತಲುಪಿವೆ.ಸುಮಾರು 80 ಎಕರೆ 14 ಗುಂಟೆ  ವ್ಯಾಪ್ತಿ ಹೊಂದಿರುವ ಕಾಲೊನಿಯನ್ನು ಹಸ್ತಾಂತರ ಮಾಡುವ ಪ್ರಸ್ತಾವವನ್ನು  ಗೃಹಮಂಡಳಿ 2003ರಲ್ಲಿ ನಗರಸಭೆ ಮುಂದಿಟ್ಟಾಗ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಕಾಲೊನಿಯಲ್ಲಿ ರಸ್ತೆ, ಗಟಾರು ಮತ್ತು ಬೀದಿದೀಪ ವ್ಯವಸ್ಥೆ ಸರಿಯಾಗಿಲ್ಲದಿರುವ ಕಾರಣ ಅದನ್ನು ದುರಸ್ತಿ ಮಾಡಲು ನಾಲ್ಕು ಕೋಟಿ ರೂಪಾಯಿಗಳನ್ನು ಗೃಹಮಂಡಳಿಯವರು ನಗರಸಭೆಗೆ ಪಾವತಿಸಬೇಕು. ಈ ಹಣ ಪಾವತಿಸಿದರೆ ಮಾತ್ರ ಹಸ್ತಾಂತರ ಮಾಡಿಕೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದ್ದರು.ಇದಕ್ಕೆ ಗೃಹಮಂಡಳಿ ಒಪ್ಪಲಿಲ್ಲ. ನಗರಸಭೆಯ ಚುನಾಯಿತ ಪ್ರತಿನಿಧಿಗಳ ಅವಧಿ 2007ರಲ್ಲಿ ಪೂರ್ಣಗೊಂಡು ಆಡಳಿತಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಜಿಲ್ಲಾಡಳಿತ ಕಾಲೊನಿ ಹಸ್ತಾಂತರ ಮಾಡಿಕೊಂಡಿತು. `ಕಾಲೊನಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಗೃಹಮಂಡಳಿ ಕೇವಲ ರೂ 90 ಲಕ್ಷ ಹಣ ನೀಡಿತ್ತು.

 

ಅಭಿವೃದ್ಧಿಗೆ ಮೀಸಲಿಟ್ಟ ಹಣ ಕಡಿಮೆ ಆಗಿದ್ದರಿಂದ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಕಾಲೊನಿಯಲ್ಲಿ ನಡೆಯಲೇ ಇಲ್ಲ. ಹೀಗೆ ನಗರಸಭೆ ಮತ್ತು ಗೃಹಮಂಡಳಿ ಕಚ್ಚಾಟದಲ್ಲಿ ತೊಂದರೆ ಅನುಭವಿಸುತ್ತಿರುವವರು ಕಾಲೊನಿಯ ನಿವಾಸಿಗಳು. ಕಾಲೊನಿಯ ಸಮಸ್ಯೆಗಳ ಕುರಿತು ಅನೇಕ ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ~ ಕಾಲೊನಿಯ ನಿವಾಸಿ ಪ್ರಸನ್ನ ಆಚಾರಿ.`ಕಾಲೊನಿಯಲ್ಲಿ ಗಟಾರು, ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿಗೆ ಪ್ರಸ್ತಾವ ತಯಾರಿಸುವಂತೆ ಸಚಿವ ಆನಂದ ಅಸ್ನೋಟಿಕರ್ ಅವರು ಕಾಳಿ ನಿರ್ಮಿತ ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ. ನಿರ್ಮಿತಿ ಕೇಂದ್ರದವರ ಹತ್ತು ಕೋಟಿ ರೂಪಾಯಿ ಪ್ರಸ್ತಾವ ಸಿದ್ಧಪಡಿಸಿದ್ದಾರೆ ಎಂದು ಗೊತ್ತಾಗಿದೆ. ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕ ನಂತರ ಕಾಲೊನಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿದೆ~ ಎನ್ನುತ್ತಾರೆ ಈ ಭಾಗದ ನಗರಸಭೆ ಸದಸ್ಯ ದಿಗಂಬರ ಗುನಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry