ಗುರುವಾರ , ಮೇ 13, 2021
16 °C

ಕೆಎಚ್‌ಬಿ ಕಾಲೊನಿ: ಹೊಸ ರೂಪ, ಹಳೆ ಸಮಸ್ಯೆ

ಪ್ರಜಾವಾಣಿ ವಾರ್ತೆ/ನಾಗೇಂದ್ರ ಖಾರ್ವಿ Updated:

ಅಕ್ಷರ ಗಾತ್ರ : | |

ಕಾರವಾರ: ನಗರದ ಹಬ್ಬುವಾಡದಲ್ಲಿರುವ ಕರ್ನಾಟಕ ಗೃಹಮಂಡಳಿ (ಕೆಎಚ್‌ಬಿ) ಕಾಲೊನಿ (19ನೇ ವಾರ್ಡ್)ಗೆ ಇಮಾರತುಗಳ ಮೇಲೆ ಇಮಾರತು ನಿರ್ಮಾಣವಾಗುತ್ತಿವೆ. ಹೀಗೆ ಕಾಲೊನಿ ಹೊಸ ರೂಪ ಪಡೆದುಕೊಳ್ಳುತ್ತಿದೆ. ಆದರೆ,  ಹಳೆ ಸಮಸ್ಯೆಗಳು ಕಾಲೊನಿಯ ನಿವಾಸಿಗಳನ್ನು ಕಾಡುತ್ತಿದೆ.ರಸ್ತೆ, ಬೀದಿದೀಪ ಮತ್ತು ಗಟಾರು ಹಾಗೂ ಅನೈರ್ಮಲ್ಯದ ಸಮಸ್ಯೆಗಳು ಕಾಲೊನಿಯಲ್ಲಿ ಹಾಸುಹೊಕ್ಕಾಗಿವೆ. ಗಟಾರು ಹೂಳೆತ್ತುವ ಕಾಮಗಾರಿ ಅಸಮರ್ಪಕವಾಗಿ ನಡೆದಿರುವುದರಿಂದ ನಿವಾಸಿಗಳು ಈ ಮಳೆಗಾಲದಲ್ಲೂ ತೊಂದರೆ ಅನುಭವಿಸುವುದು ತಪ್ಪುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಮಳೆ ಬಿದ್ದು ರಸ್ತೆ, ಗಟಾರಿನಲ್ಲಿ ನೀರು ಬಿದ್ದಿರುವುದೇ ಇದಕ್ಕೆ ಸಾಕ್ಷಿ.ಪ್ರತಿ ಮಳೆಗಾಲ ಎನ್ನುವುದು ಕಾಲೊನಿಯ ನಿವಾಸಿಗಳಿಗೆ ದುಸ್ವಪ್ನವಾಗಿ ಕಾಡುತ್ತದೆ. ಗಟಾರಿನಲ್ಲೇ ಸಂಗ್ರಹವಾಗಿರುವ ಮಳೆ ನೀರಿನಲ್ಲಿ ಕಸಕಡ್ಡಿ ಮತ್ತು ತ್ಯಾಜ್ಯಗಳು ಬಿದ್ದು ಅದು ಕೊಳೆತು ಅಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಕೊಡುವ ಕಾಟದಿಂದ ಸುಖ ನಿದ್ದೆ ಎನ್ನುವುದು ಕಾಲೊನಿಯ ನಿವಾಸಿಗಳ ಪಾಲಿಗೆ ದೂರದ ಮಾತಾಗಿದೆ.ಗಟಾರುಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಇರುವುದರಿಂದ ಮಳೆ ನೀರು ರಸ್ತೆಯ ಮೇಲೆ ಬಂದು ನಿಲ್ಲುತ್ತದೆ. ಇದರಿಂದಾಗಿ ಡಾಂಬರು ಕಿತ್ತುಹೋಗಿ ಗುಂಡಿಗಳು ಬಿದ್ದು ರಸ್ತೆಗಳೂ ಶೋಚನೀಯ ಸ್ಥಿತಿಗೆ ತಲುಪಿವೆ.ಸುಮಾರು 80 ಎಕರೆ 14 ಗುಂಟೆ  ವ್ಯಾಪ್ತಿ ಹೊಂದಿರುವ ಕಾಲೊನಿಯನ್ನು ಹಸ್ತಾಂತರ ಮಾಡುವ ಪ್ರಸ್ತಾವವನ್ನು  ಗೃಹಮಂಡಳಿ 2003ರಲ್ಲಿ ನಗರಸಭೆ ಮುಂದಿಟ್ಟಾಗ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಕಾಲೊನಿಯಲ್ಲಿ ರಸ್ತೆ, ಗಟಾರು ಮತ್ತು ಬೀದಿದೀಪ ವ್ಯವಸ್ಥೆ ಸರಿಯಾಗಿಲ್ಲದಿರುವ ಕಾರಣ ಅದನ್ನು ದುರಸ್ತಿ ಮಾಡಲು ನಾಲ್ಕು ಕೋಟಿ ರೂಪಾಯಿಗಳನ್ನು ಗೃಹಮಂಡಳಿಯವರು ನಗರಸಭೆಗೆ ಪಾವತಿಸಬೇಕು. ಈ ಹಣ ಪಾವತಿಸಿದರೆ ಮಾತ್ರ ಹಸ್ತಾಂತರ ಮಾಡಿಕೊಳ್ಳಬೇಕು ಎಂದು ಸದಸ್ಯರು ಪಟ್ಟು ಹಿಡಿದಿದ್ದರು. ಇದಕ್ಕೆ ಗೃಹಮಂಡಳಿ ಒಪ್ಪಲಿಲ್ಲ. ನಗರಸಭೆಯ ಚುನಾಯಿತ ಪ್ರತಿನಿಧಿಗಳ ಅವಧಿ 2007ರಲ್ಲಿ ಪೂರ್ಣಗೊಂಡು ಆಡಳಿತಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಜಿಲ್ಲಾಡಳಿತ ಕಾಲೊನಿ ಹಸ್ತಾಂತರ ಮಾಡಿಕೊಂಡಿತು. ಕಾಲೊನಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಗೃಹಮಂಡಳಿ ಕೇವಲ ್ಙ 90 ಲಕ್ಷ ಹಣ ನೀಡಿತ್ತು. ಅಭಿವೃದ್ಧಿಗೆ ಮೀಸಲಿಟ್ಟ ಹಣ ಕಡಿಮೆ ಆಗಿದ್ದರಿಂದ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಕಾಲೊನಿಯಲ್ಲಿ ನಡೆಯಲೇ ಇಲ್ಲ.ಹೀಗೆ ನಗರಸಭೆ ಮತ್ತು ಗೃಹಮಂಡಳಿ ಕಚ್ಚಾಟದಲ್ಲಿ ತೊಂದರೆ ಅನುಭವಿಸುತ್ತಿರುವವರು ಕಾಲೊನಿಯ ನಿವಾಸಿಗಳು. ಕಾಲೊನಿಯ ಸಮಸ್ಯೆಗಳ ಕುರಿತು ಅನೇಕ ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ ಕಾಲೊನಿಯ ನಿವಾಸಿಗಳು.`ಕಾಲೊನಿಯ ಸಮಸ್ಯೆಗಳ ಬಗ್ಗೆ ನೂತನ ಶಾಸಕ ಸತೀಶ ಸೈಲ್ ಅವರೊಂದಿಗೆ ಮಾತನಾಡಿದ್ದೇವೆ. ಈಗಾಗಲೇ ಶಾಸಕರು ಒಮ್ಮೆ ಕಾಲೊನಿಗೆ ಭೇಟಿ ನೀಡಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವ ಭರವಸೆ ಇದೆ' ಎನ್ನುತಾರೆ ಕಾಲೊನಿ ಅಭಿವೃದ್ಧಿ ಸಂಘದ ಅಧ್ಯಕ್ಷ ಗಂಗಾಧರ ಜಾಂಬಾವಳಿಕರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.