ಶನಿವಾರ, ಮೇ 15, 2021
25 °C

ಕೆಎಲ್‌ಇ ಅಂಗಳದಲ್ಲಿ ಪ್ರಯೋಗಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ದೇಶದಲ್ಲಿ ಸಂಭವಿಸುವ ರೈಲು ಅಪಘಾತಗಳ ಪೈಕಿ ರೈಲು ಹಳಿ ತಪ್ಪುವುದರಿಂದಾಗಿ ನಡೆವ ಅಪಘಾತಗಳೇ ಹೆಚ್ಚು. ಇದಕ್ಕೆ ಪರ್ಯಾಯ ಮಾರ್ಗ ಹುಡುಕುವ ಸಲುವಾಗಿ ಗದಗ ಜಿಲ್ಲೆಯ ಎಸ್‌ಕೆಎಸ್‌ವಿ ಎಂ.ಎ. ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ರೈಲು ಹಳಿಯಲ್ಲಿನ ಬಿರುಕು ಪತ್ತೆಹಚ್ಚುವ ಯಂತ್ರದ ಮಾದರಿಯೊಂದನ್ನು ವಿನ್ಯಾಸಗೊಳಿಸಿದ್ದಾರೆ.ರೈಲು ಹಳಿಗಳ ಮೇಲೆ ಸಂಚರಿಸುವ ಈ ಯಂತ್ರ ಒಂದು ವೇಳೆ ಹಳಿಗಳಲ್ಲಿ ದೋಷ ಕಂಡುಬಂದಲ್ಲಿ ತಕ್ಷಣ ಜಿಪಿಎಸ್ ಮೂಲಕ ಸಂಬಂಧಿಸಿದ ಇಲಾಖೆಗೆ ಸಂದೇಶ ಕಳುಹಿಸುತ್ತದೆ. ಹಾಗೆಯೇ ಮುಂದುವರಿಯುತ್ತದೆ. ಮಾನವರಹಿತವಾಗಿ ಕಾರ್ಯನಿರ್ವಹಿಸಬಲ್ಲ ಈ ಯಂತ್ರದ ಮಾದರಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ರೈಲ್ವೆ ಇಲಾಖೆಯಲ್ಲಿ ಸೇವೆ ಬಳಸಿಕೊಳ್ಳಬಹುದು ಎನ್ನುವುದು ವಿದ್ಯಾರ್ಥಿಗಳ ಅಭಿಮತ.ಇಂತಹದ್ದೇ ಹತ್ತಾರು ಮಾದರಿಗಳು, ವಿನ್ಯಾಸಗಳ ಪ್ರದರ್ಶನಕ್ಕೆ ನಗರದ ಕೆಎಲ್‌ಇ ಐಟಿ ಕಾಲೇಜು ಆವರಣ ಶನಿವಾರ ವೇದಿಕೆಯಾಯಿತು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ಸಹಯೋಗದಲ್ಲಿ ಇಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಪ್ರಾಜೆಕ್ಟ್ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರಯೋಗಗಳು, ವಿನ್ಯಾಸಗಳನ್ನು ಪ್ರಸ್ತುತಪಡಿಸಿದ್ದರು.ಲಕ್ಷ್ಮೇಶ್ವರ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಾದ ಮಯೂರ್ ಕಮ್ಮಾರ, ಅರುಣ್ ಅಂಗಡಿ, ಅಮಿತ್ ಶಿರೋಳ ಹಾಗೂ ಶಾಹಿದ್ ಅಲಿ ನದಾಫ್ ಹಳಿ ಬಿರುಕು ಪತ್ತೆ ಯಂತ್ರದ ಮಾದರಿಯನ್ನು ಹೊತ್ತು ತಂದಿದ್ದರು. ಇಂತಹದ್ದೇ ಅನೇಕ ಮಾದರಿಗಳಿದ್ದವು. ವಿಜಾಪುರದ ಪಿ.ಜಿ. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸೋಲಾರ್ ಶಕ್ತಿಯಿಂದ ಕಾರ್ಯ ನಿರ್ವಹಿಸಬಲ್ಲ ಸೀಡ್ ಸ್ಪ್ರೇ ಅನ್ನು ಪ್ರದರ್ಶಿಸಿದರು. ಬೀಜ ಹಾಗೂ ಗೊಬ್ಬರ ಎರಡನ್ನೂ ನೆಲಕ್ಕೆ ಚೆಲ್ಲಲು ಅನುಕೂಲವಾಗಬಲ್ಲ ಈ ಸಾಧನಕ್ಕೆ  ಸೋಲಾರ್ ಕೋಶವುಳ್ಳ ತಟ್ಟೆ ಅಳವಡಿಸಲಾಗಿದ್ದು, ಅಲ್ಲಿ ಉತ್ಪಾದನೆಯಾಗುವ ಶಕ್ತಿಯು ಯಂತ್ರದಲ್ಲಿರುವ ಬ್ಯಾಟರಿಯಲ್ಲಿ ಶೇಖರಣೆಗೊಂಡು ಅದರಿಂದ ಸ್ಪ್ರೇಯರ್ ಕಾರ್ಯನಿರ್ವಹಿಸಲಿದೆ. ಬಳಸಲೂ ಈ ಯಂತ್ರ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿಗಳು ವಿವರಿಸಿದರು. ಅಮರಪ್ಪ ಬಸನಗೌಡ ಬಿರಾದಾರ, ರಾಚಪ್ಪ ನರಗುಂದ, ಧನರಾಜ ವಿಭೂತಿ ಈ ಯಂತ್ರವನ್ನು ವಿನ್ಯಾಸಗೊಳಿಸಿದ್ದರು.ವಿಜಾಪುರದ ಬಿಎಲ್‌ಡಿ ಕಾಲೇಜಿನ ರವಿ ನೆಲಗಿ, ರಾಘವೇಂದ್ರ, ನಾಗರಾಜ ಹಣೆಪ್ಪನವರ ಹಾಗೂ ರಾಜು ಸೇರಿ ವೈಬ್ರೋ ಥರ್ಮಲ್ ಡಸ್ಟ್ ರಿಮೂವರ್ ಮತ್ತು ಡ್ರಯರ್ ಮಾದರಿಯನ್ನು ಪ್ರದರ್ಶನದಲ್ಲಿ ಇಟ್ಟಿದ್ದರು. ಶೇಂಗಾ, ಮೆಕ್ಕೆಜೋಳ ಮೊದಲಾದ ಕಾಳುಗಳಲ್ಲಿನ ಧೂಳನ್ನು ತೆಗೆಯುವ ಜೊತೆಗೆ ಅವುಗಳನ್ನು ಒಣಗಿಸಬಲ್ಲ ಈ ಯಂತ್ರವನ್ನು ಸಿದ್ಧಪಡಿಸಲು ರೂ 15,000 ವಿನಿಯೋಗಿಸಿದ್ದಾಗಿ ಅವರು ತಿಳಿಸಿದರು.ಹುಬ್ಬಳ್ಳಿ-ಧಾರವಾಡ, ವಿಜಾಪುರ, ಗದಗ ಮೊದಲಾದ ಜಿಲ್ಲೆಗಳ 10 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪ್ರಯೋಗಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಉದ್ಘಾಟನೆ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ಎಸ್.ಜಿ.ಎನ್. ಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರಾಧ್ಯಾಪಕರಾದ ಯು.ಜೆ. ಶೆಣೈ, ಎಂ.ಕೃಷ್ಣಕುಮಾರ್, ಕೆಎಲ್‌ಇ ಐಟಿ ಪ್ರಾಚಾರ್ಯ ಬಸವರಾಜ ಅನಾಮಿ, ಡೀನ್ ರಮೇಶ ಬುರಬುರೆ, ಉದ್ಯಮಿ ಎಂ.ಕೆ. ಪಾಟೀಲ, ಕೆ.ಎಂ. ವೆಂಕಟೇಶ್, ಪ್ರೊ. ಮಹಾಂತೇಶ ಸಜ್ಜನ ಈ ಸಂದರ್ಭ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.