ಕೆಎಸ್‌ಆರ್‌ಟಿಸಿಗೆ ಪಾಠ ಕಲಿಸಿದ ನಿವೃತ್ತ ಪ್ರಾಂಶುಪಾಲ

7

ಕೆಎಸ್‌ಆರ್‌ಟಿಸಿಗೆ ಪಾಠ ಕಲಿಸಿದ ನಿವೃತ್ತ ಪ್ರಾಂಶುಪಾಲ

Published:
Updated:

ಬೆಂಗಳೂರು: ಕೆಎಸ್‌ಆರ್‌ಟಿಸಿ ನಿರ್ಲಕ್ಷ್ಯ ಧೋರಣೆ ವಿರುದ್ಧ ನಿವೃತ್ತ ಪ್ರಾಂಶುಪಾಲರೊಬ್ಬರು ಸತತ ಐದು ವರ್ಷಗಳ ಕಾಲ ಹೋರಾಟ ಮಾಡಿ ಯಶಸ್ಸು ಸಾಧಿಸಿರುವ ಅಪರೂಪದ ಪ್ರಸಂಗ ಇಲ್ಲಿದೆ.ರಾಜಹಂಸ ಬಸ್‌ನಲ್ಲಿ ಅನುಭವಿಸಿದ ನರಕಯಾತನೆ ಪ್ರಯಾಣದಿಂದ ಕಂಗೆಟ್ಟು ಗ್ರಾಹಕರ ವೇದಿಕೆಗೆ ಮೊರೆ ಹೋಗಿ ಪರಿಹಾರ ಪಡೆಯುವಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ. ಆದರೆ, ವೇದಿಕೆ ಆದೇಶ ನೀಡಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಅಧಿಕಾರಿಗಳು ಪರಿಹಾರ ನೀಡಿಲ್ಲ. ಈಗ ಅವರು ಮತ್ತೊಂದು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.ಘಟನೆ ವಿವರ:  ನಗರದ ಭಾರತ್‌ ಎಲೆಕ್ಟ್ರಾನಿಕ್ಸ್‌ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎನ್‌.ಪಿ. ರಾಘವೇಂದ್ರರಾವ್‌  (71)ಅವರು 2008ರ ನ. 30ರಂದು ಕೆಎಸ್‌ಆರ್‌ಟಿಸಿಯ ರಾಜ ಹಂಸ ಬಸ್‌ನಲ್ಲಿ (ಕೆಎ–01, 7880) ಉಡುಪಿಯಿಂದ ಬೆಂಗಳೂರಿಗೆ ಪ್ರಯಾಣ ಕೈಗೊಂಡಿದ್ದರು. ಪಡುಬಿದ್ರೆ ಬಳಿ ಬಂದಾಗ ಮಳೆ ಸುರಿಯಲು ಆರಂಭಿಸಿದಾಗ ಇವರು ಆಸೀನರಾಗಿದ್ದ ನಾಲ್ಕನೇ ಸಂಖ್ಯೆಯ ಸೀಟಿನ ಮೇಲೆ ಬಸ್‌ ಚಾವಣಿಯಿಂದ ನೀರು ಸೋರ ತೊಡಗಿತು. ಈ ಸಮಸ್ಯೆಯನ್ನು ನಿರ್ವಾಹಕರು ಮತ್ತು ಮಂಗಳೂರಿನ ನಿಯಂತ್ರಣಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪರ್ಯಾಯ ಕ್ರಮಕೈಗೊಳ್ಳಲಿಲ್ಲ. ಬಸ್‌ ಸಂಪೂರ್ಣ ಭರ್ತಿಯಾಗಿದ್ದರಿಂದ ಯಾವುದೇ ವ್ಯವಸ್ಥೆಯೂ ಇಲ್ಲದೆ ಚಾಲಕರ ಕ್ಯಾಬಿನ್‌ನಲ್ಲಿದ್ದ ಕಬ್ಬಿಣದ ಆಸನದಲ್ಲಿ ಕುಳಿತು ಬೆಂಗಳೂರವರೆಗೂ ಪ್ರಯಾಣಿಸಿದರು.ನಂತರ 2008ರ ಡಿಸೆಂಬರ್‌ 2ರಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಮಗಾದ ತೊಂದರೆ ಬಗ್ಗೆ ದೂರು ನೀಡಿದಾಗ ಪರಿಹಾರ ರೂಪದಲ್ಲಿ 100 ರೂಪಾಯಿ ನೀಡುವುದಾಗಿ ಮಂಗಳೂರು ಘಟಕದ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಒಪ್ಪದಿದ್ದಾಗ ಎರಡು ವರ್ಷಗಳ ನಂತರ ಅಂದರೆ 2010ರ ನವೆಂಬರ್‌ 11ರಂದು ರಾಘವೇಂದ್ರರಾವ್‌ ಅವರನ್ನು ವಿಚಾರಣೆಗೆ ಕರೆಯಲಾಯಿತು. ಈ ವಿಚಾರಣೆ ಸಂದರ್ಭದಲ್ಲಿ ನಿರ್ವಾಹಕ ಮತ್ತು ರಾಘವೇಂದ್ರ ರಾವ್‌ ಪರಸ್ಪರ ಗುರುತು ಸಹ ಹಿಡಿಯಲಿಲ್ಲ.ಈ ವಿಚಾರಣೆ ನಡೆದು ಐದು ತಿಂಗಳ ನಂತರ ಅಂದರೆ 2011ರ ಏಪ್ರಿಲ್‌ 28ರಂದು ಪ್ರಯಾಣದಲ್ಲಿ ಉಂಟಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿ ₨ 252 ಚೆಕ್‌ ಅನ್ನು ರಾಘವೇಂದ್ರರಾವ್‌ ಅವರಿಗೆ ಕೆಎಸ್‌ಆರ್‌ಟಿಸಿ ಕಳುಹಿಸಿತು. ಆದರೆ, ಪ್ರಯಾಣಕ್ಕೆ ತಾವು ₨ 275 ನೀಡಿದ್ದು, ಉಳಿದ ₨ 23 ನೀಡುವಂತೆ ರಾಘವೇಂದ್ರರಾವ್‌ ಪತ್ರ ಬರೆದರು. ಇದಕ್ಕೆ ಉತ್ತರವಾಗಿ ಎರಡು ತಿಂಗಳ ನಂತರ ಉಳಿದ ಮೊತ್ತವನ್ನು ಕೆಎಸ್‌ಆರ್‌ಟಿಸಿ ಪಾವತಿಸಿತು.ಇಷ್ಟಕ್ಕೆ ಸುಮ್ಮನೆ ಕೂರದ ರಾಘವೇಂದ್ರರಾವ್‌ ಅವರು, ತಮಗಾದ ಆರ್ಥಿಕ, ದೈಹಿಕ, ಮಾನಸಿಕ ಹಿಂಸೆಗೆ ಪರಿಹಾರ ನೀಡಿ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದರು. ಈ ಅಧಿಕಾರಿಗಳಿಂದ ಯಾವುದೇ ರೀತಿ ಪ್ರತಿಕ್ರಿಯೆ ಬಾರದಿದ್ದಾಗ 2012ರ ಡಿಸೆಂಬರ್‌ 27ರಂದು ಗ್ರಾಹಕರ ವೇದಿಕೆಗೆ ಮೊರೆ ಹೋದರು.ಈ ಪ್ರಕರಣದ ಕುರಿತು 2013ರ ಜುಲೈ 29ರಂದು ತೀರ್ಪು ನೀಡಿದ ವೇದಿಕೆ, ಸೇವೆ ನ್ಯೂನತೆಗೆ ₨ 1,000 ಹಾಗೂ ವ್ಯಾಜ್ಯಗಳ ವೆಚ್ಚ ₨ 1,000 ನೀಡುವಂತೆ ಆದೇಶ ನೀಡಿತು. ಈ ಮೊತ್ತವನ್ನು 30 ದಿನಗಳಲ್ಲಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿತ್ತು. ಆದರೆ, ಇದುವರೆಗೆ ರಾಘವೇಂದ್ರರಾವ್‌ ಅವರಿಗೆ ಕೆಎಸ್‌ಆರ್‌ಟಿಸಿ ಪರಿಹಾರ ನೀಡಿಲ್ಲ.ಹಕ್ಕು ಪ್ರತಿಪಾದಿಸಿದ್ದೇನೆ

‘ಈ ಪ್ರಕರಣದಲ್ಲಿ ನಾನು ₨ 5 ಸಾವಿರಕ್ಕಿಂತ ಹೆಚ್ಚು ವೆಚ್ಚ ಮಾಡಿದ್ದೇನೆ. ಈ ಪ್ರಕರಣವನ್ನು ಕೇವಲ ಹಣ ಕಾಸಿನ ದೃಷ್ಟಿಯಿಂದ ನೋಡಬಾರದು. ನಮ್ಮ ಹಕ್ಕನ್ನು ಪ್ರತಿಪಾದಿಸಲು ಈ ಹೋರಾಟ ಮಾಡಿದ್ದೇನೆ. ಕೆಎಸ್‌ ಆರ್‌ಟಿಸಿ ಅಧಿಕಾರಿಗಳಿಗೆ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ ಇಷ್ಟೊಂದು ಶ್ರಮಪಟ್ಟಿದ್ದೇನೆ’

ಎನ್‌.ಪಿ. ರಾಘವೇಂದ್ರರಾವ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry