ಗುರುವಾರ , ಜೂನ್ 24, 2021
23 °C
ರಾಮನಗರ: ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ

ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕೆಎಸ್‌ಆರ್‌ಟಿಸಿ ಬಸ್‌ಗಳ ಕಡ್ಡಾಯ ನಿಲುಗಡೆಗೆ ಒತ್ತಾಯಿಸಿ ಅರ್ಚಕರಹಳ್ಳಿ ಬಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಬೆಂಗಳೂರು– ಮೈಸೂರು ಹೆದ್ದಾರಿ­ಯಲ್ಲಿರುವ ಕಾಲೇಜು ಬಳಿ ಸರ್ಕಾರಿ ಬಸ್‌ಗಳ ನಿಲುಗಡೆಗೆ ಎರಡು ವರ್ಷ­ಗಳಿಂದ ಒತ್ತಾಯಿಸಲಾಗುತ್ತಿದೆ. ನಿರಂತರ­­ವಾಗಿ ಮನವಿಗಳು ಸಲ್ಲಿಸಿ, ಹಲವು ಬಾರಿ ಪ್ರತಿಭಟನೆಯನ್ನೂ ಮಾಡ­ಲಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯ­ಲಾಗಿದೆ. ಆದರೆ ನಮ್ಮ ಮನವಿಗೆ ಯಾರೊಬ್ಬರು ಸ್ಪಂದಿಸಿಲ್ಲ. ಯಾವುದೇ ಪ್ರಯೋಜನ ಆಗಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೂರಿದರು.ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸುಮಾರು 2000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸಂಖ್ಯೆ 200 ಇದೆ. ರಾಮನಗರ ಮತ್ತು ಚನ್ನಪಟ್ಟಣ ನಡುವೆ ಇರುವ ಈ ಕಾಲೇಜಿಗೆ ಬಸ್‌ಗಳು ನಿಲುಗಡೆ ಮಾಡು­­­­ವುದಿಲ್ಲವಾದ ಕಾರಣ ಕಾಲೇಜಿಗೆ ಹೋಗುವುದು ಕಷ್ಟವಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.ಸಿಇಟಿಯಲ್ಲಿ ಹೆಚ್ಚಿನ ಅಂಕ ಪಡೆದು ಕೌನ್ಸೆಲಿಂಗ್‌ನಲ್ಲಿ ಸರ್ಕಾರಿ ಎಂಜಿನಿಯ­ರಿಂಗ್‌ ಕಾಲೇಜು ಎಂದು ಈ ಕಾಲೇಜನ್ನು ಆಯ್ಕೆ ಮಾಡಿಕೊಂಡರೆ ಇಲ್ಲಿ, ಸಾರಿಗೆ ಸೇರಿದಂತೆ ಮೂಲ ಸೌಕರ್ಯವೇ ಇಲ್ಲವಾಗಿದೆ. ರಾಮ­ನಗರ­­– ಚನ್ನಪಟ್ಟಣ ನಡುವೆ ನಿರ್ಮಿಸಿ­ರುವ ಈ ಕಾಲೇಜಿಗೆ ಸಾರಿಗೆ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲ­ರಾಗಿ­ದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಭಟನೆಯ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮನಗರ ಡಿಪೋ ವ್ಯವಸ್ಥಾಪಕ ಮಂಜುನಾಥ ನಾಯಕ್ ತಕ್ಷಣ ಸಂಚಾರಿ ನಿಯಂತ್ರಕರೊಬ್ಬರನ್ನು ನಿಯೋಜಿಸಿ, ಬಸ್‌ಗಳ ನಿಲುಗಡೆಗೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಇದಕ್ಕೆ ಸಮಾಧಾನಗೊಳ್ಳದ ವಿದ್ಯಾರ್ಥಿ­­­­ಗಳು ಈ ಹಿಂದೆಯೂ ಇದೇ ರೀತಿ ಟಿ.ಸಿ. ನೇಮಿಸಿದ್ದಿರಿ, ನಂತರ ಅವರನ್ನು ವಾಪಸು ಕರೆದುಕೊಂಡಿರಿ. ನಮ್ಮ ಸಮಸ್ಯೆ ಬಗೆಹರಿಸುವ ಕಾಳಜಿ ಅಧಿಕಾರಿಗಳಿಗೆ ಇಲ್ಲ ಎಂದು ವಿದ್ಯಾರ್ಥಿ­ಗಳು ಅಸಮಾಧಾನ ವ್ಯಕ್ತ­ಪಡಿಸಿ ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಬಂದು, ಸಮಸ್ಯೆ ಆಲಿಸದ ಹೊರತು ಪ್ರತಿಭಟನೆ ಹಿಂದಕ್ಕೆ ಪಡೆಯೊಲ್ಲ ಎಂದು ಪ್ರತಿಭಟನೆ ಮುಂದುವರೆಸಿದರು.ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ ಸಿದ್ದಪ್ಪ  ಪ್ರತಿ­ಭಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿ­ಗಳ ಅಹವಾಲನ್ನು ಸ್ವೀಕರಿಸಿ­ದರು. ಜಿಲ್ಲಾ­ಡಳಿತ ಮತ್ತು ಕೆ.ಎಸ್.­ಆರ್.­ಟಿ.ಸಿಯ ಹಿರಿಯ ಅಧಿಕಾರಿಗಳ ಬಳಿ ಮಾತ­ನಾಡು­ವುದಾಗಿ ನೀಡಿದ ಭರವಸೆ­ಯಿಂದ ವಿದ್ಯಾರ್ಥಿಗಳು ತಮ್ಮ ಪ್ರತಿ­ಭಟನೆಯನ್ನು ಹಿಂಪಡೆದುಕೊಂಡರು.ಎಬಿವಿಪಿ ಜಿಲ್ಲಾ ಸಂಚಾಲಕ ರಘುರಾಂ, ವಿದ್ಯಾರ್ಥಿಗಳಾದ ಶ್ರೀಕಾಂತ್, ಚವಾಣ್, ನಿರಂಜನ್, ಮನೋಹರ್, ನಿಸರ್ಗ, ಪ್ರಿಯಾಂಕ, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.