ಸೋಮವಾರ, ಏಪ್ರಿಲ್ 19, 2021
32 °C

ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ: ಸಿದ್ದಪ್ಪ-ತಿಪ್ಪವ್ವ ಬಂಗಾರದ ಬೇಟೆ

ಪ್ರವೀಣ ಕುಲಕರ್ಣಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ:  ಕೃಷ್ಣೆಯ ಹಿನ್ನೀರ ತಟದಲ್ಲಿ ಭಾನುವಾರ ನೂರಾರು ಜನ ಪೊಲೀಸರಿಂದ ಸವಾಲು ಎದುರಾದರೂ ದೂರದ ಮುಂಬೈನಿಂದ ಬಂದಿದ್ದ ಸಿದ್ದಪ್ಪ ಶಿವನೂರು ಅವರ `ಬಂಗಾರದ ಓಟ~ಕ್ಕೆ ಒಂದಿನಿತೂ ಚ್ಯುತಿ ಬರಲಿಲ್ಲ. ಹದಿನೈದು ದಿನಗಳ ಹಿಂದಷ್ಟೇ ರಾಮನಗರದಲ್ಲಿ ಚಿನ್ನದ ನಗು ಹೊರಸೂಸಿದ್ದ ನೈಋತ್ಯ ರೈಲ್ವೆಯ ತಿಪ್ಪವ್ವ ಸಣ್ಣಕ್ಕಿ ಮತ್ತೊಂದು ಚಿನ್ನದ ಪದಕವನ್ನು ಕೊರಳಿಗೆ ಹಾಕಿಸಿಕೊಂಡು ಮಂದಹಾಸ ಬೀರಿದರು.ಭಾನುವಾರ ಇಲ್ಲಿ ಆಯೋಜಿಸಲಾಗಿದ್ದ ಡೆಕ್ಕನ್ ಅಥ್ಲೆಟಿಕ್ಸ್ ಕ್ಲಬ್ ಆಶ್ರಯದ `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿದ ಉತ್ಸಾಹ ಕಂಡುಬಂತು. ಸಿದ್ದಪ್ಪ ಹಾಗೂ ತಿಪ್ಪವ್ವ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಸ್ಥಳೀಯ ಪೊಲೀಸ್ ತರಬೇತಿ ಶಾಲೆಗೆ ಸೇರಿದ 117 ಜನ ಯುವ ಪೇದೆಗಳು ಸಮವಸ್ತ್ರದಲ್ಲಿ ಪಾಲ್ಗೊಂಡು ಗಮನ ಸೆಳೆದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಪ್ರಮುಖ ದೂರದ ಓಟಗಾರರಿಂದ ಪೈಪೋಟಿ ಕಾವು ಪಡೆದುಕೊಂಡಿತ್ತು. ಆರಂಭದಿಂದಲೇ ಅತ್ಯಂತ ವಿಶ್ವಾಸದಿಂದ ಓಡಿದ ಸಿದ್ದಪ್ಪ (39.07:69 ನಿಮಿಷ), 12 ಕಿ.ಮೀ ದೂರದ ಗುರಿಯನ್ನು ಆರಾಮವಾಗಿಯೇ ತಲುಪಿದರು.ಎರಡು ನಿಮಿಷ ತಡವಾಗಿ ವಿಜಯದ ಗೆರೆ ತುಳಿದ ಧಾರವಾಡದ ಕೃಷ್ಣಪ್ಪ ಎಸ್. ಸಂತಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರೆ, `ಸ್ಥಳೀಯ ಹುಡುಗ~ ಅಪ್ಪಾಸಾಬ್ ಕಡಪಟ್ಟಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಧಾರವಾಡದ ಸಿದ್ದಪ್ಪ ಸದ್ಯ ಮುಂಬೈನಲ್ಲಿ ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪುಣೆಯಲ್ಲಿ ನಡೆದ ಮ್ಯಾರಾಥಾನ್‌ನ ಭಾರತೀಯ ವಿಭಾಗದಲ್ಲಿ ಮೊದಲಿಗರಾಗಿದ್ದರು.ಮಿಂಚಿದ ತಿಪ್ಪವ್ವ: ಬೀಳಗಿ ತಾಲ್ಲೂಕು ಶಿವಾಪುರ ಗ್ರಾಮದ ತಿಪ್ಪವ್ವ ಮೈಸೂರಿನಲ್ಲಿ ನೈಋತ್ಯ ರೈಲ್ವೆ ಉದ್ಯೋಗಿ. ತವರು ಕ್ರೀಡಾಭಿಮಾನಿಗಳ ಮುಂದೆ ಉತ್ಸಾಹದಿಂದ ಓಡಿ, 21.05 ನಿಮಿಷದಲ್ಲಿ ಗುರಿ ತಲುಪಿದರು. ಮೈಸೂರಿನ ಶ್ರದ್ಧಾರಾಣಿ ದೇಸಾಯಿ ರಜತ ಸಂಭ್ರಮ ಆಚರಿಸಿಕೊಂಡರೆ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಿ. ಸ್ಮಿತಾ ಮೂರನೇ ಸ್ಥಾನ ಗಳಿಸಿದರು.ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಎನ್.ಎಸ್. ಶಿವಲಿಂಗ ಮತ್ತು ಮೈಸೂರು ಡಿವೈಎಸ್‌ಎಸ್‌ನ ಸಿ.ಪೂರ್ಣಿಮಾ ಕ್ರಮವಾಗಿ ಬಾಲಕ-ಬಾಲಕಿಯರ ವಿಭಾಗದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳ -ಅದರಲ್ಲೂ ಲಂಬಾಣಿ ಸಮುದಾಯದ- ಅಧಿಕ ಸಂಖ್ಯೆಯ ಸ್ಪರ್ಧಿಗಳು ಓಟದಲ್ಲಿ ಪಾಲ್ಗೊಂಡಿದ್ದರು.ಫಲಿತಾಂಶ: ಪುರುಷರು (12 ಕಿ.ಮೀ): ಸಿದ್ದಪ್ಪ ಶಿವನೂರು -1, ಕೃಷ್ಣಪ್ಪ ಸಂತಿ (ಇಬ್ಬರೂ ಧಾರವಾಡ)-2, ಬಸವರಾಜ ಎಂ.ಟಿ. (ಹುಬ್ಬಳ್ಳಿ)-3, ಅಪ್ಪಾಸಾಬ್ ಕಡಪಟ್ಟಿ (ಬಾಗಲಕೋಟೆ)-4, ಚನ್ನಬಸಪ್ಪ ಪಿ.ಜೆ. (ಧಾರವಾಡ)-5, ಪ್ರದೀಪ್ ಎಂ.ಎನ್. (ಆಳ್ವಾಸ್ ಮೂಡುಬಿದಿರೆ)-6, ಕಾಲ: 39.07:69 ನಿಮಿಷ;ಮಹಿಳೆಯರು (6 ಕಿ.ಮೀ): ತಿಪ್ಪವ್ವ ಸಣ್ಣಕ್ಕಿ (ನೈಋತ್ಯ ರೈಲ್ವೆ, ಮೈಸೂರು)-1, ಶ್ರದ್ಧಾರಾಣಿ ದೇಸಾಯಿ (ಡಿವೈಎಸ್‌ಎಸ್, ಮೈಸೂರು)-2, ಸ್ಮಿತಾ ಸಿ. (ಆಳ್ವಾಸ್-ಮೂಡುಬಿದಿರೆ)-3, ಯಶಸ್ವಿನಿ ಕೆ.-4, ಪ್ರಿಯಾಂಕಾ ವಿ.-5, ನವ್ಯಶ್ರೀ ಸಿ. (ಮೂವರೂ ಡಿವೈಎಸ್‌ಎಸ್, ಮೈಸೂರು)-6, ಕಾಲ: 21.05 ನಿಮಿಷ.ಬಾಲಕರು (2.5 ಕಿ.ಮೀ): ಶಿವಲಿಂಗ ಎನ್.ಎಸ್. (ಆಳ್ವಾಸ್ ಮೂಡುಬಿದಿರೆ)-1, ನಾಗೇಶ್ ಬಿ.ಕೆ. (ಬಾಗಲಕೋಟೆ)-2, ದೇವರಾಜ್ ಬಿ.ಎನ್. (ಆಳ್ವಾಸ್ ಮೂಡುಬಿದಿರೆ)-3, ಮಂಜುನಾಥ್ ಕೆ. (ಹಾಸನ)-4, ಗೌತಮ್ ಕವಳಗಿ (ವಿಜಾಪುರ)-5, ಪ್ರವೀಣ ಪಾಟೀಲ (ಬಾಗಲಕೋಟೆ)-6, ಕಾಲ: 7.16.94 ನಿಮಿಷ;ಬಾಲಕಿಯರು (2.5 ಕಿ.ಮೀ): ಪೂರ್ಣಿಮಾ ಸಿ. (ಡಿವೈಎಸ್‌ಎಸ್, ಮೈಸೂರು)-1, ಮಲ್ಲೇಶ್ವರಿ ರಾಠೋಡ್ (ವಿಜಾಪುರ)-2, ರಾಜೇಶ್ವರಿ ಡುಳ್ಳಿ (ಬಾಗಲಕೋಟೆ)-3, ತಾರಾಮಣಿ ಎಚ್.ಆರ್. (ಡಿವೈಎಸ್‌ಎಸ್, ಮೈಸೂರು)-4, ಸರೋಜಾ ಚವ್ಹಾಣ (ಬಾಗಲಕೋಟೆ)-5, ಸರಸ್ವತಿ ತಪರೇಸಿ (ತುಳಸಿಗೇರಿ)-6, ಕಾಲ: 8.44.63 ನಿಮಿಷ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.