ಭಾನುವಾರ, ಆಗಸ್ಟ್ 25, 2019
28 °C

ಕೆಐಎಡಿಬಿಗೆ ಕಡಿಮೆ ಬೆಲೆಗೆ ಜಮೀನು ಹಂಚಿಕೆ: ಆರೋಪ

Published:
Updated:

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಹಾಸನ ನಗರದ ಹೊರ ವಲಯದಲ್ಲಿ ನಿರ್ಮಿಸಿರುವ ಕೈಗಾರಿಕಾ ಪ್ರದೇಶದಲ್ಲಿ ಹತ್ತು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಜಮೀನನ್ನು ಅಕ್ರಮವಾಗಿ ಕೇವಲ 48 ಲಕ್ಷ ರೂಪಾಯಿಗೆ ಹಂಚಿಕೆ ಮಾಡಲಾಗಿದೆ ಎಂದು ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರು ಬುಧವಾರ ವಿಧಾನಸಭೆಯಲ್ಲಿ ಆರೋಪಿಸಿದರು.ಸದನದ ಕಲಾಪ ಆರಂಭ ಆಗುತ್ತಿದ್ದಂತೆ ಈ ವಿಷಯ ಪ್ರಸ್ತಾಪಿಸಿದ ರೇವಣ್ಣ ಅವರು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಇಂತಹ ವಿಷಯಗಳನ್ನು ನಿಲುವಳಿ ಸೂಚನೆ ರೂಪದಲ್ಲಿ ಪ್ರಸ್ತಾಪಿಸಲು ಅವಕಾಶ ಇಲ್ಲ ಎಂದು ವಾದಿಸಿದರು. ಬಳಿಕ ನಿಯಮ 69ರ ಅಡಿಯಲ್ಲಿ ವಿಷಯ ಮಂಡನೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಅವಕಾಶ ನೀಡಿದರು.ಕೈಗಾರಿಕಾ ಪ್ರದೇಶದ 221ನೇ ಸಂಖ್ಯೆಯ ನಿವೇಶನವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆಗಾಗಿ (ಸಿ.ಎ) ಮೀಸಲಿಡಲಾಗಿತ್ತು. ಯೋಜನೆಗೆ ಜಮೀನು ನೀಡಿದ್ದ ನಿಂಗಮ್ಮ ಎಂಬುವರು ಈ ನಿವೇಶನದಲ್ಲಿ 10 ಗುಂಟೆ ಜಮೀನನ್ನು ಬದಲಿ ನಿವೇಶನವನ್ನಾಗಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಿ.ಎ  ನಿವೇಶನ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ಮಂಡಳಿ ತಿರಸ್ಕರಿಸಿತ್ತು. 2013ರ ಫೆಬ್ರುವರಿ 27ರಂದು ಜಗದೀಶ್ ಎಂಬುವರು ಇದೇ ನಿವೇಶನದಲ್ಲಿ ಒಂದು ಎಕರೆ ಜಮೀನನ್ನು ಕೈಗಾರಿಕೆ ಸ್ಥಾಪನೆಗೆ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು ಎಂದು ರೇವಣ್ಣ ವಿವರಿಸಿದರು.`ಕೇವಲ ಮೂರು ತಿಂಗಳ ಅವಧಿಯಲ್ಲಿ ಜಗದೀಶ್ ಅವರಿಗೆ 1.38 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಎಕರೆಗೆ 28 ಲಕ್ಷ ರೂಪಾಯಿ ದರದಲ್ಲಿ ಜಮೀನು ಹಂಚಿಕೆ ಮಾಡಲಾಗಿದೆ. ಆದರೆ, ವಾಸ್ತವವಾಗಿ ಈ ಜಮೀನಿನ ಮಾರುಕಟ್ಟೆ ದರ ಹತ್ತು ಕೋಟಿ ರೂಪಾಯಿಗಿಂತಲೂ ಜಾಸ್ತಿ ಇದೆ. ಕೆಐಎಡಿಬಿ ಅಧಿಕಾರಿಗಳು ಜಗದೀಶ ಅವರೊಂದಿಗೆ ಶಾಮೀಲಾಗಿ ಅಕ್ರಮ ಎಸಗಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.ಚರ್ಚಿಸಿ ಕ್ರಮ: ಈ ಕುರಿತು ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, `ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮಂದಿಗೆ ಚರ್ಚೆ ನಡೆಸುತ್ತೇನೆ. ಯಾವುದೇ ರೀತಿಯ ಲೋಪಗಳು ಆಗಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ' ಎಂದು ರೇವಣ್ಣ ಅವರಿಗೆ ಭರವಸೆ ನೀಡಿದರು.

Post Comments (+)