ಸೋಮವಾರ, ಏಪ್ರಿಲ್ 19, 2021
30 °C

ಕೆಐಎಡಿಬಿ ಆದೇಶ: ಆನೆ ಕಾರಿಡಾರ್‌ಗೆ ಕಂಟಕ

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಕೆಐಎಡಿಬಿ ಆದೇಶ: ಆನೆ ಕಾರಿಡಾರ್‌ಗೆ ಕಂಟಕ

ಚಾಮರಾಜನಗರ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಮೀನು ಹಸ್ತಾಂತರದ ಆದೇಶದಿಂದ ಜಿಲ್ಲೆಯ ಬಿಆರ್‌ಟಿ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯ ಆನೆ ಕಾರಿಡಾರ್‌ಗೆ ಕಂಟಕ ಎದುರಾಗಿದೆ. ಕೊಳ್ಳೇಗಾಲ ತಾಲ್ಲೂಕು ಲೊಕ್ಕನಹಳ್ಳಿ ಹೋಬಳಿಯ ಮೊಡಹಳ್ಳಿ ಬಳಿ ಕೆಐಎಡಿಬಿಯಿಂದ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ಪ್ರದೇಶ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಪಕ್ಕದಲ್ಲಿದೆ. ಗುಂಡಾಲ್ ಜಲಾಶಯದ ಅಕ್ಕಪಕ್ಕದ ಜಮೀನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಕೆಐಎಡಿಬಿ ಮುಂದಾಗಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

 

ಸುಪ್ರೀಂ ಕೋರ್ಟ್ ಆದೇಶದನ್ವಯ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ರಕ್ಷಿತಾರಣ್ಯದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಅರಣ್ಯೇತರ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. ಕೈಗಾರಿಕೆ ಸ್ಥಾಪನೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ವನ್ಯಜೀವಿಗಳಿಗೆ  ಧಕ್ಕೆಯಾಗುವ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುವುದು ಅಕ್ಷಮ್ಯ ಅಪರಾಧ.

 

ಪ್ರಸ್ತುತ ಕೆಐಎಡಿಬಿಯಿಂದ ಬಣ್ಣಾರಿ ಅಮ್ಮನ್ ಷುಗರ್ ಕಂಪೆನಿಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸಲು 410.44 ಎಕರೆ ಜಮೀನು ಹಸ್ತಾಂತರಿಸಲಾಗಿದೆ. ಕಂಪೆನಿಗೆ ನೀಡಿರುವ ಜಮೀನು ಹುಲಿ ರಕ್ಷಿತಾರಣ್ಯದ ಒಂದು ಕಿ.ಮೀ. ವ್ಯಾಪ್ತಿಯಲ್ಲಿಯೇ ಇದೆ. ಜತೆಗೆ, ಈ ಪ್ರದೇಶ ಆನೆಗಳು ಸಂಚರಿಸುವ ಮೊಗಸಾಲೆಯಾಗಿದೆ. ಇಲ್ಲಿ ಕೈಗಾರಿಕೆ ಸ್ಥಾಪನೆಗೊಂಡರೆ ಆನೆ ಸಂಚಾರಕ್ಕೆ ಅಡ್ಡಿಯಾಗಲಿದೆ. ಅಲ್ಲದೇ, ಕಂಪೆನಿಗೆ ಜಮೀನು ಹಸ್ತಾಂತರ ಮಾಡಿರುವುದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ ಎಂಬುದು ಪರಿಸರವಾದಿಗಳ ದೂರು.

 

ಈಗಾಗಲೇ, ಹಸ್ತಾಂತರಿಸಿರುವ ಜಮೀನಿನಲ್ಲಿ ಜೆಸಿಬಿ ಯಂತ್ರ ಬಳಸಿ ಕಂಪೆನಿಯ ಸಿಬ್ಬಂದಿ ಗಿಡಗಂಟೆ ಕಿತ್ತುಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ನಿಗದಿಪಡಿಸಿರುವ ಜಮೀನಿಗಿಂತಲೂ ಹೆಚ್ಚುವರಿಯಾಗಿ ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಆದರೆ, ಕೆಲವು ರೈತರು ಫಲವತ್ತಾದ ಕೃಷಿ ಜಮೀನು ಬಿಟ್ಟುಕೊಡಲು ವಿರೋಧ ವ್ಯಕ್ತಪಡಿಸಿದ್ದಾರೆ.

 

ಹುಲಿ ರಕ್ಷಿತಾರಣ್ಯ, ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಿಗದಿತ ಸೀಮಾರೇಖೆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಉನ್ನತ ಸಮಿತಿಯಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ಸಮಿತಿ ರಚನೆಯಾಗಿದೆ. ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅನುಮತಿ ನೀಡುವ ಯಾವುದೇ ಅಧಿಕಾರವಿಲ್ಲ. ಕಾಡು ಪ್ರಾಣಿಗಳಿಗೆ ಕುತ್ತಾಗುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಮಿತಿಯ ಅನುಮತಿಯೂ ಸಿಗುವುದಿಲ್ಲ.

 

‘ರಕ್ಷಿತಾರಣ್ಯದ ಪಕ್ಕದಲ್ಲಿ ಕಾರ್ಖಾನೆ ಸ್ಥಾಪಿಸಲು ಅವಕಾಶವಿದೆಯೇ? ಎಂಬ ಬಗ್ಗೆ ಬಣ್ಣಾರಿ ಅಮ್ಮನ್ ಷುಗರ್ ಕಂಪೆನಿಯ ಅಧಿಕಾರಿಗಳು ವಿವರಣೆ ಕೋರಿದ್ದರು. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಉನ್ನತ ಸಮಿತಿಯ ಅನುಮತಿ ಇಲ್ಲದೇ ಯಾವುದೇ ಕಾರ್ಯ ಕೈಗೆತ್ತಿಕೊಳ್ಳಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಲಾಗಿದೆ’ ಎಂದು ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.