ಕೆಐಎಡಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ

7
ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿ ಮಾರಾಟ ಆರೋಪ

ಕೆಐಎಡಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ

Published:
Updated:

ಹುಬ್ಬಳ್ಳಿ: ವಿಮಾನ ನಿಲ್ದಾಣದ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಖಾಸಗಿಯವರಿಗೆ ಮಾರಾಟ ಮಾಡಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಲಾಗಿದೆ.ಇಲ್ಲಿನ ಕನ್ನಡಪರ ಮಹಾಮಂಡಳದ ಅಧ್ಯಕ್ಷ ಡಿ.ಗೋವಿಂದರಾವ್ ಹಾಗೂ ವಿಮಾನ ನಿಲ್ದಾಣದ ವಿಸ್ತರಣೆಗೆ ಎಂದು ಗೋಕುಲ ಗ್ರಾಮದ ವ್ಯಾಪ್ತಿಯಲ್ಲಿ ಕೆಐಎಡಿಬಿಗೆ ಜಮೀನು ಬಿಟ್ಟುಕೊಟ್ಟಿರುವ ದಶರಥ ಭೋಜಗಾರ್ ಮತ್ತು ಕೃಷ್ಣಪ್ಪ ಬೆಳ್ಳೇರಿ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.ರೈತರಿಂದ ಜಮೀನು ಸ್ವಾಧೀನಪಡಿಸಿಕೊಂಡಿದ್ದ ಕೆಐಎಡಿಬಿ ಹಾಗೂ ಮಂಡಳಿಯ ಧಾರವಾಡದ ಅಭಿವೃದ್ಧಿ ಅಧಿಕಾರಿ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಮೀನು ಖರೀದಿಸಿರುವ ಇನ್‌ಫೋಸಿಸ್ ಲಿಮಿಟೆಡ್, ದೇಶಪಾಂಡೆ ಫೌಂಡೇಶನ್ ಮತ್ತು ಅನಂತ ರೆಸಿಡೆನ್ಸಿ ಮಾಲಿಕರನ್ನು ಪ್ರತಿವಾದಿಗಳಾಗಿ ಪರಿಗಣಿಸಲು ಅರ್ಜಿಯಲ್ಲಿ ಕೋರಲಾಗಿದೆ.ಅಗತ್ಯಕ್ಕಿಂತ ಹೆಚ್ಚು ಭೂಮಿ ಖರೀದಿ: ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಮಾಸ್ಟರ್ ಪ್ಲಾನ್ ರೂಪಿಸಿದ್ದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) 658 ಎಕರೆ ಭೂಮಿ ಸ್ವಾಧೀನಪಡಿಸಿಕೊಡುವಂತೆ 2007ರ ಮಾರ್ಚ್ 20ರಂದು ರಾಜ್ಯ ಸರ್ಕಾರವನ್ನು ಕೋರಿದೆ.ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಸೂಚನೆಯಂತೆ ಗೋಕುಲ ರೈತರಿಂದ ಭೂಸ್ವಾಧೀನಕ್ಕೆ ಮುಂದಾದ ಕೆಐಎಡಿಬಿ ಎಕರೆಗೆ 26 ಲಕ್ಷ ರೂಪಾಯಿ ಪರಿಹಾರ ನೀಡಿ 707.4 ಎಕರೆ ಜಮೀನು ವಶಪಡಿಸಿಕೊಂಡಿದೆ. ಎಎಐನ ಬೇಡಿಕೆಗಿಂತ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡ ಕೆಐಎಡಿಬಿ ಅದರಲ್ಲಿ 599.21 ಎಕರೆ ಮಾತ್ರ ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ನೀಡಿದೆ.ಎಎಐಗೆ ನೀಡಿ ಉಳಿದ 107.23 ಎಕರೆ ಜಮೀನಿನಲ್ಲಿ ಇನ್‌ಫೋಸಿಸ್ ಲಿಮಿಟೆಡ್‌ಗೆ 50 ಎಕರೆ, ದೇಶಪಾಂಡೆ ಫೌಂಡೇಶನ್‌ಗೆ 12.26 ಎಕರೆ ಹಾಗೂ ಅನಂತ ರೆಸಿಡೆನ್ಸಿ ಹೋಟೆಲ್ ಮಾಲಿಕ ರಮೇಶ್ ಶೆಟ್ಟಿ ಅವರಿಗೆ 1.39 ಎಕರೆ ಭೂಮಿಯನ್ನು ಎಕರೆಗೆ 50 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬುದರ ಬಗ್ಗೆ ಅರ್ಜಿದಾರರು ಕೊರ್ಟ್‌ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ.ನಿಯಮಾವಳಿ ಉಲ್ಲಂಘನೆ: ವಿಮಾನ ನಿಲ್ದಾಣದ ವಿಸ್ತರಣೆಯ ಉದ್ದೇಶಕ್ಕೆ ಎಂದು ಭೂಮಿ ಪಡೆದು ಖಾಸಗಿಯವರಿಗೆ ಮಾರಾಟ ಮಾಡಿರುವುದು ಕೆಐಎಡಿಬಿ ಕಾಯ್ದೆ 1966ರ 28(8) ಸೆಕ್ಷನ್‌ನ ಸ್ಪಷ್ಟ ಉಲ್ಲಂಘನೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಪಡೆದ ಜಮೀನಿನಲ್ಲಿ ಉದ್ದೇಶ ಈಡೇರದಿದ್ದಲ್ಲಿ ಮರಳಿ ಮೂಲ ಮಾಲೀಕರಿಗೆ ಜಮೀನು ಒಪ್ಪಿಸಬೇಕಿದೆ. ಇಲ್ಲಿ ಆ ಕೆಲಸ ನಡೆದಿಲ್ಲ ಬದಲಿಗೆ ಲಾಭಕ್ಕೆ ಮಾರಿಕೊಳ್ಳಲಾಗಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.ಭೂಮಿ ಮಾರಾಟ ಪ್ರಕ್ರಿಯೆಯನ್ನು ರದ್ದುಗೊಳಿಸಿ ಎಎಐಗೆ ಕೊಟ್ಟು ಉಳಿದ ಜಮೀನನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಲು ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿರುವ ಕೃಷ್ಣಪ್ಪ ಬೆಳ್ಳೇರಿ ಅವರಿಗೆ ಸೇರಿದ ಗೋಕುಲ ಗ್ರಾಮದ ಸರ್ವೆ ನಂ 238ರಲ್ಲಿನ 11.9 ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಫಕ್ಕೀರಪ್ಪ ಭೋಜಗಾರ ಅವರ ಪತ್ನಿ ರುಕ್ಮಿಣಿ ಬಾಯಿ ಅವರ ಹೆಸರಿನಲ್ಲಿ ಸರ್ವೆ ನಂ 246/1ರಲ್ಲಿ ಎಂಟು ಎಕರೆ ಜಮೀನು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಸ್ವಾಧೀನಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry