ಕೆಒಎಗೆ ದೂರು; ಅಥ್ಲೆಟಿಕ್ ಸಂಸ್ಥೆಗೆ ಆಕ್ಷೇಪದ ಬಿಸಿ

7

ಕೆಒಎಗೆ ದೂರು; ಅಥ್ಲೆಟಿಕ್ ಸಂಸ್ಥೆಗೆ ಆಕ್ಷೇಪದ ಬಿಸಿ

Published:
Updated:

ಬೆಂಗಳೂರು: ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅಥ್ಲೀಟ್‌ಗಳನ್ನು ಆಯ್ಕೆಮಾಡಲು ಟ್ರಯಲ್ಸ್ ನಡೆಸುವುದು ಅಗತ್ಯ. ಆದರೆ ಕೂಟ ಹತ್ತಿರವಿದ್ದಾಗ ಅವಸರದಲ್ಲಿ ತಂಡ ರಚಿಸಿ, ಅದಕ್ಕೇ ಒಪ್ಪಿಗೆ ನೀಡಬೇಕೆಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ(ಕೆಎಎ)ಯು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಮುಂದೆ ರಾಜ್ಯದ 41 ಸ್ಪರ್ಧಿಗಳ ಪಟ್ಟಿ ಇಟ್ಟಿದ್ದೇ ಆಕ್ಷೇಪದ ಧ್ವನಿ ಏಳಲು ಕಾರಣವಾಗಿದೆ.

ರಾಂಚಿಯಲ್ಲಿ ಫೆಬ್ರುವರಿ 12ರಿಂದ ರಾಷ್ಟ್ರೀಯ ಕ್ರೀಡಾಕೂಟವು ನಡೆಯಲಿದ್ದು, ಅದಕ್ಕಾಗಿ ರಾಜ್ಯದ ಅಥ್ಲೀಟ್‌ಗಳನ್ನು ಸಾಮರ್ಥ್ಯ ಪರೀಕ್ಷೆ ನಂತರ ಆಯ್ಕೆ ಮಾಡಿಲ್ಲ, ಆಯ್ಕೆ ಟ್ರಯಲ್ಸ್  ನಡೆಸುವ ಗೊಡವೆಗೇ ಹೋಗದ ಕೆಎಎ ನೇರವಾಗಿ ತಂಡವನ್ನು ಪ್ರಕಟಿಸಿದೆ. ಸ್ಥಿತಿ ಹೀಗಿರುವಾಗ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳು ಬರಬೇಕೆಂದು ನಿರೀಕ್ಷಿಸುವುದು ಸಾಧ್ಯವಿಲ್ಲವೆಂದು ಅರ್ಜುನ ಪ್ರಶಸ್ತಿ ವಿಜೇತ ಅಥ್ಲೀಟ್ ಹಾಗೂ ಅನುಭವಿ ಕೋಚ್ ಎಸ್.ಡಿ.ಈಶನ್ ಕಿಡಿಕಾರಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಉಪಾಧ್ಯಕ್ಷರೂ ಆಗಿರುವ ಈಶನ್ ಅವರು ಈ ವಿಷಯವಾಗಿ ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. ‘ಕೆಒಎ ಪ್ರತಿನಿಧಿಗಳ ಸಮಕ್ಷಮದಲ್ಲಿಯೇ ಕಡ್ಡಾಯವಾಗಿ ಆಯ್ಕೆ ಟ್ರಯಲ್ಸ್ ನಡೆಸುವ ಮೂಲಕ ಅರ್ಹರಿಗೆ ಅವಕಾಶ ಸಿಗುವಂತೆ ಮಾಡಬೇಕು. ಪ್ರತಿಯೊಂದ ಸ್ಪರ್ಧೆಗೆ ಅರ್ಹತಾ ಮಟ್ಟವನ್ನು ನಿಗದಿ ಮಾಡಿ; ಅದನ್ನು ಮುಟ್ಟುವವರಿಗೆ ಮಾತ್ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

2007ರಲ್ಲಿ ಗುವಾಹಟಿಯಲ್ಲಿ ನಡೆದ ಕೂಟದಲ್ಲಿ ಕರ್ನಾಟಕಕ್ಕೆ ಪದಕ ಬಂದಿದ್ದು ಕೇವಲ ಎರಡು. ಪುರುಷರ ವಿಭಾಗದಲ್ಲಿ ಯಾರೂ ವಿಜಯ ವೇದಿಕೆ ಏರಲಿಲ್ಲ. ಒಂದು ಚಿನ್ನ (100 ಮೀ. ಹರ್ಡಲ್ಸ್) ಹಾಗೂ ಬೆಳ್ಳಿ (ಹೈಜಂಪ್) ಬಂದಿದ್ದು ಮಹಿಳೆಯರ ವಿಭಾಗದಲ್ಲಿ ಮಾತ್ರ. ಹೀಗೆ ಆಗಲು ಕಾರಣ; ಅಥ್ಲೀಟ್‌ಗಳನ್ನು ಟ್ರಯಲ್ಸ್ ಮೂಲಕ ಆಯ್ಕೆ ಮಾಡದಿದ್ದದ್ದು. ಈ ಬಾರಿಯೂ ಕೆಎಎ ತನ್ನ ಇಚ್ಛೆಯಂತೆ ಅಥ್ಲೀಟ್‌ಗಳನ್ನು ಆಯ್ಕೆ ಮಾಡಿದೆ. ಯಾವುದೇ ಮಾನದಂಡವನ್ನೂ ಇಟ್ಟುಕೊಂಡಿಲ್ಲ ಎಂದು ಈಶನ್ ದೂರಿದ್ದಾರೆ.

ಕರ್ನಾಟಕ ಒಲಿಂಪಿಕ್ ಸಂಸ್ಥೆಗೆ ರಾಜ್ಯ ಅಥ್ಲೆಟಿಕ್ ಸಂಸ್ಥೆಯು ನೀಡಿರುವ ಅಥ್ಲೀಟ್‌ಗಳ ಪಟ್ಟಿ ಇಂತಿದೆ: ಪುರುಷರು: ಬಿ.ಜಿ.ನಾಗರಾಜ್ (100 ಮೀ. ಓಟ, 4ಷ100 ರಿಲೆ), ಜಿ.ಎನ್.ಬೋಪಣ್ಣ (100 ಮೀ. , 200 ಮೀ. ಓಟ, 4ಷ100 ರಿಲೆ), ವಿಲಾಸ್ ನೀಲಗುಂದ್ (4ಷ100 ಮೀ. ರಿಲೆ), ಚಂದ್ರಶೇಖರ್ (110 ಮೀ. 400 ಮೀ. ಹರ್ಡಲ್ಸ್), ಸ್ಟೀಫನ್ (4ಷ100 ಮೀ. ರಿಲೆ), ಎಸ್.ಭರತ್ (400 ಮೀ. ಓಟ), ಕೆ.ರಂಜನ್ ಕಾರಿಯಪ್ಪ (800 ಮೀ, 1500 ಮೀ. ಓಟ), ವಿ.ರೋಹಿತ್ (800 ಮೀ. ಓಟ), ಕೆ.ಎಲ್.ಗಿರೀಶ್ (3000 ಮೀ. ಸ್ಟೀಪಲ್ ಚೇಸ್), ಬಸವರಾಜ್ (5000 ಮೀ, 10,000 ಮೀ. ಓಟ), ಆರ್.ಎಸ್.ಬಜಂತ್ರಿ (5000 ಮೀ., 10,000 ಮೀ. ಓಟ), ಎಸ್.ಸುಪ್ರೀತ್ (ಹೈಜಂಪ್), ಎಸ್.ಹರ್ಷಿತ್ (ಹೈಜಂಪ್), ಆನಂದ್ (ಜಾವೆಲಿನ್ ಥ್ರೋ), ಪಿ.ಜೆ.ಪುರಂದರ್ (ಜಾವೆಲಿನ್ ಥ್ರೋ), ಸಂಜಯ್ ಯಾದವ್ (ಪೋಲ್‌ವಾಲ್ಟ್), ಸುರೇಂದ್ರ ಕುಮಾರ್ (ಹ್ಯಾಮರ್ ಥ್ರೋ), ದಿನೇಶ್ ಕುಮಾರ್ (ನಡಿಗೆ), ಸುಬ್ರಮಣಿ (ನಡಿಗೆ), ಕಾರ್ಲ್ ಡೆನ್ನಿಸ್ ಬ್ರಿಟ್ಟೊ (ಟ್ರಿಪಲ್ ಜಂಪ್), ನಟರಾಜ್ (ಟ್ರಿಪಲ್ ಜಂಪ್); ಕೋಚ್: ವಿ.ಮಂಜುನಾಥ್; ಮ್ಯಾನೇಜರ್: ಎಚ್.ಜಯರಾಮಯ್ಯ.

ಮಹಿಳೆಯರು: ಎಚ್.ಎಂ.ಜ್ಯೋತಿ (100 ಮೀ., 200 ಮೀ. ಓಟ), ರೆಬೆಕ್ಕಾ ಜೋಸ್ (100 ಮೀ. ಓಟ), ನಿರುಪಮಾ ಸುಂದರ್‌ರಾಜ್ (200 ಮೀ. ಓಟ), ಎ.ಸಿ.ಅಶ್ವಿನಿ (400 ಮೀ. ಓಟ, 400 ಮೀ. ಹರ್ಡಲ್ಸ್), ಎಂ.ಆರ್.ಪೂವಮ್ಮ (400 ಮೀ. ಓಟ), ಸಿ.ಶಿಜಿ ಜಾನ್ (400 ಮೀ. ಹರ್ಡಲ್ಸ್), ಬಿ.ಇ.ಇಂದಿರಾ (800 ಮೀ., 1500 ಮೀ. ಓಟ), ಕೆ.ಸಿ.ಶ್ರುತಿ (800 ಮೀ., 1500 ಮೀ. ಓಟ), ತಿಪ್ಪವ್ವ ಸಣ್ಣಕ್ಕಿ (5000 ಮೀ., 10,000 ಮೀ. ಓಟ), ಜಾಯ್ಲಿನ್ ಎಂ.ಲೊಬೊ (ಟ್ರಿಪಲ್ ಜಂಪ್), ಕ್ಯಾಥಿ (ಪೋಲ್‌ವಾಲ್ಟ್), ಸಹನಾ ಕುಮಾರಿ (ಹೈಜಂಪ್), ಕೆ.ಸಿ.ಚಂದನಾ (ಹೈಜಂಪ್), ಕಾವ್ಯಾ ಮುತ್ತಣ್ಣ (ಹೈಜಂಪ್), ಪ್ರೀತಿ ಎಲ್.ರಾವ್ (ಮ್ಯಾರಥಾನ್), ಶಿಲ್ಪಾ ಸುಂದರ್ (ಲಾಂಗ್‌ಜಂಪ್, ಹೆಪ್ಟಥ್ಲಾನ್), ಪ್ರಮೀಳಾ ಅಯ್ಯಪ್ಪ (ಲಾಂಗ್‌ಜಂಪ್, ಹೆಪ್ಟಥ್ಲಾನ್), ಮಂಜುಶ್ರೀ (ಹೆಪ್ಟಥ್ಲಾನ್), ಶಹಜಾಹನಿ (ಜಾವೆಲಿನ್ ಥ್ರೋ); ಕೋಚ್: ಡಾ.ರಾಧಾಕೃಷ್ಣ; ಮ್ಯಾನೇಜರ್: ಎಚ್.ತಿಮ್ಮ ರೆಡ್ಡಿ.

ಕೆಎಎ ಆತಂತರಿಕ ವಿಚಾರವಿದು. ಯಾವುದು ಒಳಿತು ಎನ್ನುವುದನ್ನು ಅವರೇ (ಕೆಎಎ) ನಿರ್ಧರಿಸಲಿ. ಸಂಪೂರ್ಣವಾಗಿ ನನಗೆ ಮಾಹಿತಿ ಬಂದ ನಂತರವಷ್ಟೇ ಸ್ಪಷ್ಟವಾದ ವಿವರಣೆ ನೀಡಲು ಸಾಧ್ಯ.  - ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್

ಭಾರತ ಅಥ್ಲೆಟಿಕ್ ಫೆಡರೇಷನ್ ನಿರ್ದೇಶನದಂತೆ 2010ರಲ್ಲಿ ನಡೆದ ವಿವಿಧ ಕೂಟಗಳಲ್ಲಿ ನೀಡಿದ ಸಮಗ್ರ ಪ್ರದರ್ಶನವನ್ನು ಪರಿಗಣಿಸಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅಥ್ಲೀಟ್‌ಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಟ್ರಯಲ್ಸ್ ನಡೆಸುವುದಕ್ಕೆ ನಮಗೆ ಸಮಯಾವಕಾಶವನ್ನೂ ನೀಡಲಾಗಲಿಲ್ಲ.  - ಕೆಎಎ ಕಾರ್ಯದರ್ಶಿ ಸತ್ಯನಾರಾಯಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry