ಕೆಜಿಎಫ್‌ಗೆ ರೈಲು ವಿಸ್ತರಣೆ: ಅಸಮಾಧಾನ

7

ಕೆಜಿಎಫ್‌ಗೆ ರೈಲು ವಿಸ್ತರಣೆ: ಅಸಮಾಧಾನ

Published:
Updated:
ಕೆಜಿಎಫ್‌ಗೆ ರೈಲು ವಿಸ್ತರಣೆ: ಅಸಮಾಧಾನ

ಬಂಗಾರಪೇಟೆ: ಪಟ್ಟಣದಿಂದ ಬೆಂಗಳೂರಿಗೆ ಹೊರಡುವ ಎರಡು ರೈಲುಗಳನ್ನು ಕೆಜಿಎಫ್‌ಗೆ ವಿಸ್ತರಿಸುವ ರೈಲ್ವೆ ಇಲಾಖೆ ನಿರ್ಧಾರ ಪಟ್ಟಣದ ಜನತೆಯಲ್ಲಿ ಅಸಮಾಧಾನವನ್ನುಂಟು ಮಾಡಿದೆ.



ಪಟ್ಟಣ ಜಂಕ್ಷನ್ ಎಂದು ಹೆಸರು ಪಡೆದಿದ್ದರೂ; ಪಟ್ಟಣದಿಂದ ಪ್ರಯಾಣ ಆರಂಭಿಸುವ ಯಾವುದೇ ರೈಲು ಇರಲಿಲ್ಲ. ಚೆನ್ನೈ, ಜೋಲಾರಪೇಟೆ, ಕೆಜಿಎಫ್ ಮೊದಲಾದ ಕಡೆಗಳಿಂದ ಬರುತ್ತಿದ್ದ ರೈಲುಗಳಲ್ಲಿಯೇ ಪಟ್ಟಣದ ಮಂದಿ ಬೆಂಗಳೂರಿಗೆ ಪ್ರಯಾಣ ಮಾಡಬೇಕಾಗಿತ್ತು. ಅದರಿಂದ ಬಂಗಾರಪೇಟೆ ಪ್ರಯಾಣಿಕರಿಗೆ ಬೆಂಗಳೂರಿನವರೆವಿಗೂ ಕುಳಿತುಕೊಳ್ಳಲು ಸೀಟು ಸಿಗುತ್ತಿರಲಿಲ್ಲ. ತುಂಬಿ ತುಳುಕುವ ರೈಲಿನಲ್ಲಿ ಹೆಂಗಸರು, ಮಕ್ಕಳು ಪ್ರಯಾಣ ಮಾಡುವುದು ಅಸಾಧ್ಯವಾಗಿತ್ತು.



ಈ ದಿಸೆಯಲ್ಲಿ ಪಟ್ಟಣದ ಪ್ರಯಾಣಿಕರ ಕೋರಿಕೆ ಮೇರೆಗೆ ಪಟ್ಟಣದಿಂದಲೇ ಆರಂಭವಾಗುವ ಎರಡು ರೈಲುಗಳನ್ನು ರೈಲ್ವೆ ಇಲಾಖೆ ಈಚೆಗೆ ಆರಂಭಿಸಿತ್ತು. ಪುಷ್‌ಪುಲ್ ಎಂದು ಕರೆಯಲ್ಪಡುವ ಈ ರೈಲು ಮಧ್ಯಾಹ್ನ 12.40ಕ್ಕೆ ಮತ್ತು 3ಕ್ಕೆ ಬಂಗಾರಪೇಟೆ ಬಿಟ್ಟು ಬೆಂಗಳೂರಿಗೆ ತೆರಳುತ್ತಿತ್ತು. ಅದರಿಂದ ಪಟ್ಟಣದ ಜನತೆಗೆ ರೈಲು ಪ್ರಯಾಣ ಕೊಂಚ ನಿರಾಳವೆನಿಸಿತ್ತು. ಅಲ್ಲದೆ ಸದರಿ ರೈಲಿನಲ್ಲಿ ಬೆಂಗಳೂರಿಗೆ 13 ರೂಪಾಯಿಗಳಾದರೆ, ಬಸ್ಸಿನಲ್ಲಿ 65 ರೂಪಾಯಿಗಳಾಗುತ್ತಿತ್ತು. ಬಸ್ಸಿನ ಪ್ರಯಾಣ ಸುಮಾರು ಎರಡೂವರೆಯಿಂದ ಮೂರು ಗಂಟೆಯಾದರೆ, ರೈಲು ಪ್ರಯಾಣ ಸುಮಾರು ಒಂದೂವರೆ ಗಂಟೆಯಾಗುತ್ತಿತ್ತು.



ಈ ಕಾರಣಗಳಿಂದ ಜನತೆ ರೈಲಿನ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದರು. ಸನ್ನಿವೇಶ ಹೀಗಿರುವಾಗ ರೈಲನ್ನು ಕೆಜಿಎಫ್‌ಗೆ ವಿಸ್ತರಿಸುವುದು ಪಟ್ಟಣದ ಜನತೆಗೆ ಅಘಾತವನ್ನುಂಟು ಮಾಡಿದೆ. ಏಕೆಂದರೆ ಈ ವಿಸ್ತರಣೆ ಪರಿಣಾಮವಾಗಿ ರೈಲು ಈಗಿನಂತೆ ಬಂಗಾರಪೇಟೆ ಬದಲು ಕೆಜಿಎಫ್‌ನಿಂದ ಪ್ರಯಾಣ ಆರಂಭಿಸುತ್ತದೆ. ಆಗ ಮತ್ತೆ ಸೀಟು ದೊರಕದ ಸಮಸ್ಯೆಯನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ.



ಈ ಹಿಂದೆ ಬೆಳಿಗ್ಗೆ 8.30ಕ್ಕೆ ಪಟ್ಟಣದಿಂದ ಹೊರಡುವ ರೈಲನ್ನು ಕಾಲ ಕ್ರಮೇಣ ಕೆಜಿಎಫ್‌ಗೆ ವಿಸ್ತರಿಸಿದ ಕಾರಣ, ಈಗ ಆ ರೈಲಿನಲ್ಲಿ ಬಂಗಾರಪೇಟೆ ಜನತೆಗೆ ಸೀಟು ಸಿಗುತ್ತಿಲ್ಲ. ಬಂಗಾರಪೇಟೆ- ಬೆಂಗಳೂರು ನಡುವೆ ಇದ್ದ ರೈಲೊಂದನ್ನು ಜೋಲಾರಪೇಟೆಗೆ ವಿಸ್ತರಿಸಲಾಯಿತು. ಹೀಗೆ ಬಂಗಾರಪೇಟೆ ಜನತೆಗೆ ರೈಲು ಸೌಕರ್ಯದ ಬಗ್ಗೆ ನಿರಾಶೆ ಉಂಟಾಗುತ್ತಿದೆ ಎಂದು ದಿನನಿತ್ಯ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.



ಕೆಜಿಎಫ್‌ನಿಂದ ಬೆಂಗಳೂರಿಗೆ ಪ್ರತಿದಿನ ಹತ್ತಾರು ಸಾವಿರ ಜನ ಪ್ರಯಾಣ ಮಾಡುತ್ತಾರೆ. ಅಲ್ಲಿಂದ ಬರುವ ರೈಲಿನಲ್ಲಿ ಕಾಲಿಡಲು ಸಹ ಜಾಗವಿರುವುದಿಲ್ಲ. ಹೀಗಿರುವಾಗ ಪಟ್ಟಣದ ಜನತೆ ಹೇಗೆ ರೈಲು ಹತ್ತುವುದು ಎಂಬುದು ಚಿಂತೆಯಾಗಿದೆ. ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಗೂ ರೈಲ್ವೆ ಖಾತೆ ಸಚಿವರಾಗಿರುವುದರಿಂದ ಹೊಸ ಎರಡು ರೈಲುಗಳನ್ನು ಕೆಜಿಎಫ್‌ಗೆ ನೀಡಲಿ. ಆದರೆ ಬಂಗಾರಪೇಟೆ ಜನತೆ ಅನುಕೂಲಕ್ಕಗಾಗಿಯೇ ಇದ್ದ ರೈಲನ್ನು ಕೆಜಿಎಫ್‌ಗೆ ವಿಸ್ತರಿಸಬಾರದು ಎಂಬುದು ಜನರ ಬೇಡಿಕೆ.



ಪಟ್ಟಣದ ಜನತೆ ಬಯಕೆ ತಿರಸ್ಕರಿಸಿದರೆ ಹೋರಾಟದ ಹಾದಿ ಹಿಡಿಯಲು ಕೆಲವು ಸಂಘಟನೆಗಳು ಈಗಾಗಲೇ ನಿರ್ಧರಿಸಿವೆ. ಕೆಜಿಎಫ್‌ಗೆ ವಿಸ್ತರಿಸಲಾಗುವ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುವುದು. ಹೆಚ್ಚುವರಿ ಬೋಗಿಗಳನ್ನು ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಮಾತ್ರ ತೆರೆಯಲು ಪ್ರಸ್ತಾವನೆ ಇದೆ ಎಂದು ಪುರಸಭೆ ಅಧ್ಯಕ್ಷ ಚಂದ್ರಾರೆಡ್ಡಿ ತಿಳಿಸಿದ್ದಾರೆ.



ಸಚಿವ ಮುನಿಯಪ್ಪ ಜತೆ ಮಾತನಾಡಿ ಬಂಗಾರಪೇಟೆಯಿಂದ ಕೆಲವು ಬೋಗಿ ಸೇರಿಸಬೇಕು ಎಂದು ಮನವಿ ಮಾಡಲಾಗುವುದು. ಬಂಗಾರಪೇಟೆ ಜನತೆಗೆ ಅನ್ಯಾಯವಾಗಬಾರದು ಎಂದು ಶಾಸಕ ಎಂ.ನಾರಾಯಣಸ್ವಾಮಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry