ಬುಧವಾರ, ಏಪ್ರಿಲ್ 14, 2021
29 °C

ಕೆಜಿಎಫ್, ಶ್ರೀನಿವಾಸಪುರ: ಜೆಡಿಎಸ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್/ಶ್ರೀನಿವಾಸಪುರ: ಕೆಜಿಎಫ್ ಮತ್ತು ಶ್ರೀನಿವಾಸಪುರ ನಗರಸಭೆಗಳ ತಲಾ ಒಂದು ಸ್ಥಾನಕ್ಕೆ ಈಚೆಗೆ ನಡೆದ ಉಪಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಎರಡೂ ಸ್ಥಾನಗಳನ್ನು ಜೆಡಿಎಸ್ ತನ್ನದಾಗಿಸಿಕೊಂಡಿದೆ.ಕೆಜಿಎಫ್‌ನಲ್ಲಿ ವಿಜಯಲಕ್ಷ್ಮಿ ಮತ್ತು ಶ್ರೀನಿವಾಸಪುರದಲ್ಲಿ ವಿ.ಶಂಕರ್ ಗೆಲುವಿನ ನಗುಬೀರಿದ್ದಾರೆ.ವಿಜಯಲಕ್ಷ್ಮಿಗೆ ಜಯ

ಕೆಜಿಎಫ್: ರಾಬರ್ಟ್‌ಸನ್‌ಪೇಟೆ ನಗರಸಭೆಯ 23ನೇ ವಾರ್ಡ್‌ಗೆ ಈಚೆಗೆ ನಡೆದ ಮರು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿಜಯಲಕ್ಷ್ಮೀ 74 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಕಳೆದ 5ರಂದು ನಡೆದಿದ್ದ ಮಸೀದಿ ವಾರ್ಡ್ (ವಾರ್ಡ್ 23) ಮರು ಚುನಾವಣೆಯ ಎಣಿಕೆ ಬುಧವಾರ ನಾಡಕಚೇರಿಯಲ್ಲಿ ನಡೆಯಿತು.ಜೆಡಿಎಸ್ ಅಭ್ಯರ್ಥಿ ವಿಜಯಲಕ್ಷ್ಮೀ ತಮ್ಮ ಸಮೀಪದ ಎದುರಾಳಿ ಪಕ್ಷೇತರ ಅಭ್ಯರ್ಥಿ ಅಜಮತ್ ಫಾತಿಮ ಅವರನ್ನು 74 ಮತಗಳ ಅಂತರದಿಂದ ಸೋಲಿಸಿದರು. ವಿಜಯಲಕ್ಷ್ಮೀ ಅವರಿಗೆ 699 ಮತಗಳು ಬಂದಿದ್ದವು.ಅಜಮತ್ ಫಾತಿಮ 625 ಮತಗಳನ್ನು ಗಳಿಸಿದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸೆಲ್ವಿ 488 ಮತಗಳನ್ನು ಗಳಿಸಿ ಮೂರನೇ ಸ್ಥಾನ ಗಳಿಸಿದರು. ಕಾಂಗ್ರೆಸ್‌ನ ನಾಜಿಮ ಬೇಗಂ 347 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತರಾದರು.ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮರು ಚುನಾವಣೆಯನ್ನು ಎಲ್ಲ ರಾಜಕೀಯ ಪಕ್ಷಗಳು ಗಂಭೀರವಾಗಿ ತೆಗೆದುಕೊಂಡಿದ್ದವು. ನಗರಸಭೆ ಅವಧಿ ಕೆಲವೇ ತಿಂಗಳುಗಳಲ್ಲಿ ಮುಗಿಯಲಿದೆ ಎಂದು ತಿಳಿದಿದ್ದರೂ, ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆಗೆ ಬುನಾದಿ ಹಾಕಲು ಯತ್ನಿಸಿದ್ದವು.ಈಗಾಗಲೇ ರಾಬರ್ಟ್‌ಸನ್‌ಪೇಟೆ ನಗರಸಭೆಯ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ಜೆಡಿಎಸ್‌ಗೆ ಈ ಗೆಲುವಿನಿಂದ ಆತ್ಮವಿಶ್ವಾಸ ಇಮ್ಮಡಿಸಿದೆ.`ಚುನಾವಣೆಯಲ್ಲಿ ಗೆಲವು ಸಾಧಿಸಲು ಇತರ ಪಕ್ಷಗಳು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದವು. ಮತದಾರರಿಗೆ ಹಲವು ಕೊಡುಗೆಗಳನ್ನು ನೀಡಿದರು. ಆದರೆ ಮತದಾರರು ಇದ್ಯಾವುದನ್ನೂ ಪರಿಗಣಿಸದೆ ನಮ್ಮ ಸಾಧನೆಗೆ ಮಾತ್ರ ಮನ್ನಣೆ ನೀಡಿದರು ಎಂದು ಮಾಜಿ ಶಾಸಕ ಎಂ.ಭಕ್ತವತ್ಸಲಂ ಅಭಿಪ್ರಾಯಪಟ್ಟರು.ಚುನಾವಣೆ ಸಂದರ್ಭದ ಕೊನೆಯ ಎರಡು ದಿನ ಸಾಕಷ್ಟು ಓಡಾಡಿದ ಶಾಸಕ ವೈ.ಸಂಪಂಗಿ, ಚುನಾವಣೆ ದಿಕ್ಕನ್ನು ಬದಲಾಯಿಸಬಲ್ಲರೇನೋ ಎಂಬ ಆತಂಕ ಇತರ ಪಕ್ಷಗಳಲ್ಲಿಯೂ ಮೂಡಿತ್ತು. ಆದರೆ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿದಿರುವುದು ಕಾರ್ಯಕರ್ತರಿಗೆ ಅಘಾತವುಂಟು ಮಾಡಿದೆ.ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಸೋಲು ಅನುಭವಿಸಿರುವುದು ಕಾಂಗ್ರೆಸ್‌ಗೆ ಮುಜುಗರವನ್ನುಂಟು ಮಾಡಿದೆ.ಕಳೆದ ನಗರಸಭೆ ಚುನಾವಣೆಯಲ್ಲಿ ಇದೇ ವಾರ್ಡ್‌ನಲ್ಲಿ ಪಕ್ಷೇತರನಾಗಿ ನಿಂತು ಎರಡನೇ ಸ್ಥಾನ ಗಳಿಸಿ ಸೋತಿದ್ದ ಮುಖಂಡ ನೂರುಲ್ಲಾರವರ ಕುಟುಂಬದ ಸದಸ್ಯೆ ಈ ಬಾರಿಯೂ ಎರಡನೇ ಸ್ಥಾನ ಗಳಿಸಿದ್ದಾರೆ.ನೂರುಲ್ಲಾ ಪರವಾಗಿ ನಗರಸಭೆಯ ಮಾಜಿ ಅಧ್ಯಕ್ಷ ದಾಸ್ ಚಿನ್ನಸವರಿ ಪ್ರಚಾರ ನಡೆಸಿದ್ದರು. ಹಲವು ಅತೃಪ್ತ ಬಿಜೆಪಿ ನಾಯಕರು ಸಹ ಪಕ್ಷೇತರ ಅಭ್ಯರ್ಥಿ ಪರವಾಗಿ ಮತ ಯಾಚನೆ ಮಾಡಿದ್ದರು.ಚುನಾವಣಾಧಿಕಾರಿ ಭೀಮನೇಡಿ ವಿಜೇತ ಅಭ್ಯರ್ಥಿ ವಿಜಯಲಕ್ಷ್ಮೀಯವರಿಗೆ ಪ್ರಮಾಣ ಪತ್ರ ನೀಡಿದರು.

ಶಂಕರ ವಿಜಯಶ್ರೀನಿವಾಸಪುರ: ಇಲ್ಲಿನ ಪುರಸಭೆಯ ಒಂದನೇ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನ ವಿ.ಶಂಕರ್ 116 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ವಿ.ಶಂಕರ್ 347 ಮತಗಳನ್ನು ಪಡೆದಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮುನಿಕೃಷ್ಣ 231 ಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಜಯಪ್ರಕಾಶ್ ನಾರಾಯಣ್ 35 ಮತದೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮತ ಎಣಿಕೆ ಬುಧವಾರ ನಡೆಯಿತು.ಜೆಡಿಎಸ್ ಸದಸ್ಯ ಎನ್.ವೆಂಕಟೇಶ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮರು ಚುನಾವಣೆ ನಡೆದಿತ್ತು. ಕಾಂಗ್ರೆಸ್, ಬಿಜೆಪಿ ಪಕ್ಷಗಳೂ ಸಹ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಚಾರ ನಡೆಸಿದ್ದವು.ಬುಧವಾರ ಬೆಳಿಗ್ಗೆ 8ಕ್ಕೆ ಪ್ರಾರಂಭವಾದ ಮತ ಎಣಿಕೆಯಲ್ಲಿ ಜೆಡಿಎಸ್‌ನ ವಿ.ಶಂಕರ್ 347 ಮತಗಳನ್ನು ಪಡೆದು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಹಿಂದಕ್ಕೆ ಹಾಕಿದರು.ಈ ಹಿಂದೆ ಇದೇ ಜೆಡಿಎಸ್ ಅಭ್ಯರ್ಥಿ ದಿವಂಗತ ಅಂಚೆ ವೆಂಕಟೇಶ್ 38 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಕೃಷ್ಣ ಅವರನ್ನು ಮಣಿಸಿದ್ದರು. ಮರು ಚುನಾವಣೆಯಲ್ಲಿ ವಿ.ಶಂಕರ್ ಗೆಲುವಿನ ಅಂತರವನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ.ಫಲಿತಾಂಶ ಹೊರ ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ವಿಜೇತ ಅಭ್ಯರ್ಥಿ ವಿ.ಶಂಕರ್ ಅವರನ್ನು ಮೆರವಣಿಗೆಯಲ್ಲಿ ಕೊಂಡೊಯ್ದು, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಶಂಕರ್ ತಮ್ಮ ಅಧಿಕಾರದ ಅವಧಿ ಕಡಿಮೆ ಇದ್ದರೂ ಸಹ ಕ್ಷೇತ್ರದಲ್ಲಿನ ಮೂಲ ಭೂತ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ತಮಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಅರ್ಪಿಸಿದರು.ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಗೆದ್ದು, ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತಿರುವ ಕೆಲವು ಸದಸ್ಯರು ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಹಲವು ಪ್ರಯತ್ನ ಮಾಡಿದರು. ಆದರೆ ಜನ ಕೈ ಬಿಡಲಿಲ್ಲ ಎಂದು ಹೇಳಿದರು.ಮುಖಂಡರಾದ ರಾಘವರೆಡ್ಡಿ, ಕೆ.ನಾರಾಯಣಸ್ವಾಮಿ, ವೇಣು, ವೇಣುಗೋಪಾಲ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.