ಶುಕ್ರವಾರ, ನವೆಂಬರ್ 22, 2019
23 °C

ಕೆಜೆಪಿ ಅಧಿಕಾರಕ್ಕೆ: ಬಿಎಸ್‌ವೈ ವಿಶ್ವಾಸ

Published:
Updated:
ಕೆಜೆಪಿ ಅಧಿಕಾರಕ್ಕೆ: ಬಿಎಸ್‌ವೈ ವಿಶ್ವಾಸ

ಜೇವರ್ಗಿ: `ಪ್ರಸಕ್ತ ಸಾರ್ವತ್ರಿಕ ಚುನಾವಣೆಯ ನಂತರ ರಾಜ್ಯದಲ್ಲಿ ಕೆಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಜೇವರ್ಗಿ ಕ್ಷೇತ್ರದ ಮತದಾರರು ಕೆಜೆಪಿ ಅಭ್ಯರ್ಥಿ ಮಲ್ಲಿನಾಥಗೌಡ ಪಾಟೀಲ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕು' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.

ಅವರು ಮಂಗಳವಾರ ತಾಲ್ಲೂಕಿನ ಯಡ್ರಾಮಿ ಪಟ್ಟಣದಲ್ಲಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಮಲ್ಲಿನಾಥಗೌಡ ಪಾಟೀಲ್ ಪರ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಕರ್ನಾಟಕ ರಾಜ್ಯದ ನೆಲ,ಜಲ,ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯಲ್ಲಿ ಒಂದು ಮಾದರಿ ರಾಜ್ಯವನ್ನು ನಿರ್ಮಿಸುವ ನನ್ನ ಶಪಥಕ್ಕೆ ನಾನು ಬದ್ಧನಾಗಿದ್ದೇನೆ. ನೆಮ್ಮೇಲ್ಲರ ಬೆಂಬಲ ಇರಲಿ. ಬಿಜೆಪಿ ಪಕ್ಷದ ಕೆಲ ನಾಯಕರ ಚಿತಾವಣೆಯಿಂದ ನಾನು ಕಟ್ಟಿ ಬೆಳೆಸಿದ ಪಕ್ಷವನ್ನು ಬಿಡುವಂತಾಯಿತು. ಈ ರಾಜ್ಯದ ಅಭಿವೃದ್ಧಿ ಮತ್ತು ಇಲ್ಲಿಯ ಜನರ ಪ್ರೀತಿ-ವಿಶ್ವಾಸವನ್ನು ಬಿಟ್ಟಿರದ ನಾನು ಸದಾ ನಿಮ್ಮ ಸೇವೆಗಾಗಿ ಹೊಸ ಪಕ್ಷ ಕಟ್ಟಿದೇನೆ ಎಂದರು.ಕ್ಷೇತ್ರದ ಅಭ್ಯರ್ಥಿ ಮಲ್ಲಿನಾಥಗೌಡರನ್ನು ಭಾರಿ ಅಂತರದಿಂದ ಚುನಾಯಿಸಿದರೆ ಜೇವರ್ಗಿ ತಾಲ್ಲೂಕನ್ನು ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಅವರು ವಾಗ್ದಾನ ಮಾಡಿದರು. ಅನೇಕ ಧೀಮಂತ ಹಾಗೂ ಪ್ರಾಮಾಣಿಕ ನಾಯಕರು ಕೆಜೆಪಿಗೆ ಸೇರ್ಪಡೆಯಾಗಿದ್ದರಿಂದ ಪಕ್ಷಕ್ಕೆ ಆನೆ ಬಲ ಬಂದಿದೆ. ನಾಯಕನಾದವನಿಗೆ ಧೈರ್ಯ, ಜನಬೆಂಬಲ ಮತ್ತು ಹೃದಯ ವೈಶಾಲ್ಯತೆ ಇರಬೇಕು.

ಕಳೆದ ನಾಲ್ಕು ದಶಕಗಳಿಂದ ಹೈದರಾಬಾದ್- ಕರ್ನಾಟಕ ಭಾಗದಲ್ಲಿ ಅಧಿಕಾರ ನಡೆಸಿದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ಪ್ರದೇಶವನ್ನು ಅಭಿವೃದ್ಧಿಪಡಿಸಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದಾಗ ಗುಲ್ಬರ್ಗದಲ್ಲಿ ಎರಡು ಬಾರಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ.

ಗುಲ್ಬರ್ಗ-ಬೀದರ ಜಿಲ್ಲೆಗಳನ್ನು ಮಾದರಿ ಜಿಲ್ಲೆಗಳನ್ನಾಗಿ ಮಾಡಿದ್ದೇನೆ. 3,500 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಕೆಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಬಲೀಕರಣಕ್ಕೆ 2ಸಾವಿರ ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 2ಸಾವಿರ ಕೋಟಿ ಅನುದಾನ ಮೀಸಲಿಡಲಾಗುವುದು. ತಾವು ಮುಖ್ಯಮಂತ್ರಿ ಇದ್ದಾಗ ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.ಕೆಜೆಪಿ ಅಭ್ಯರ್ಥಿ ಮಲ್ಲಿನಾಥಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಹಿರಂಗ ಸಭೆಯಲ್ಲಿ ಶಿವಾನಂದ ಮಾನಕರ್, ಅಪ್ಪಾಸಾಬ್ ಪಾಟೀಲ್ ರದ್ದೇವಾಡಗಿ, ಕೆಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಸಜ್ಜನ್, ಅಬ್ದುಲ್ ಸತ್ತಾರಸಾಬ್ ಗಿರಣಿ, ಬಸವರಾಜ ಗುಳಗಿ, ಶಿವಣ್ಣಗೌಡ ಹಂಗರಗಿ, ಮಲ್ಲಿಕಾರ್ಜುನ ಕುಸ್ತಿ, ಬಸವರಾಜ ಕುಕನೂರ, ಅಪ್ಪಣ್ಣಗೌಡ ಪಾಟೀಲ್ ಹರವಾಳ, ಗಿರೀಶಗೌಡ ಇನಾಮದಾರ, ಶಿವಲಿಂಗಪ್ಪ ಬಿರಾದಾರ, ಬಿ.ಎನ್.ಪಾಟೀಲ್ ಚನ್ನೂರ, ಅಬ್ದುಲ್ ಮಾಜೀದ ಗಿರಣಿ,ಶಿವರಾಜ ಪಾಟೀಲ್, ರತನಸಿಂಗ್ ರಾಠೋಡ, ಬಸವಂತರಾಯ ಗೌನಳ್ಳಿ, ಅಬ್ದುಲ್ ವಾಹೀದ ಗಿರಣಿ, ಸಿದ್ದು ದ್ಯಾಮಾ, ಶರಣಗೌಡ ಯಲಗೋಡ, ಲಕ್ಷ್ಮೀಕಾಂತ ಕುಲಕರ್ಣಿ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)