ಕೆಜೆಪಿ `ಜಾತ್ರೆ'ಯಲ್ಲಿ ಜನಪ್ರವಾಹ

7

ಕೆಜೆಪಿ `ಜಾತ್ರೆ'ಯಲ್ಲಿ ಜನಪ್ರವಾಹ

Published:
Updated:
ಕೆಜೆಪಿ `ಜಾತ್ರೆ'ಯಲ್ಲಿ ಜನಪ್ರವಾಹ

ಹಾವೇರಿ: ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಮೈದಾನದ ಮೇಲೆ ಭಾನುವಾರ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರ ಹೊತ್ತ ಬಲೂನು ಹಾರಾಡುತ್ತಿದ್ದರೆ, ಕೆಳಗೆ ಅವರ ಬೆಂಬಲಿಗರು ಹುಚ್ಚೆದ್ದು ಕುಣಿಯುತ್ತಿದ್ದರು.ಕೆಜೆಪಿ ಸಮಾವೇಶಕ್ಕೆ ಹರಿದು ಬಂದ ಜನಪ್ರವಾಹ ಭರಿಸಲಾಗದೆ ನಗರದ ಇಕ್ಕಟ್ಟಾದ ರಸ್ತೆಗಳೆಲ್ಲ `ಕುಯ್ಯ್ ಮರ‌್ರೊ' ಎಂದು ಕಿರುಗುಡುತ್ತಿದ್ದವು. ರಾಜ್ಯದ ಮೂಲೆ- ಮೂಲೆಗಳಿಂದ ಬಂದಿದ್ದ ಜನ, `ಏಲಕ್ಕಿ ನಾಡು' ಹಿಂದೆಂದೂ ಕಂಡರಿಯದಂತಹ ದೊಡ್ಡ ಜಾತ್ರೆಗೆ ಸಾಕ್ಷಿಯಾದರು. ಎಲ್ಲರೂ ಕೂಡಿ ಯಡಿಯೂರಪ್ಪ ಅವರ ಅಭಿಮಾನದ ತೇರು ಎಳೆದರು.ಜಾಂ ಪಥಕ್ ಹಾಗೂ ಹಲಗೆ ಮೇಳಗಳ ಮಧ್ಯೆ ಹತ್ತಾರು ಜನ `ಯಡಿಯೂರಪ್ಪ'ನವರು ನಡೆದು ಬಂದು ಬೆಂಬಲಿಗರಲ್ಲಿ ಉತ್ಸಾಹದ ಅಲೆ ಎಬ್ಬಿಸಿದರು. ಶಿವಮೊಗ್ಗದ ಅಭಿಮಾನಿಗಳು ತಮ್ಮ ನಾಯಕನ ಕಟೌಟ್ ಹಿಡಿದು ಓಡಾಡಿದರು.

ಎತ್ತರದ ಕಟ್ಟಡದ ಮೇಲೆ ನಿಂತು ಎತ್ತ ಕಣ್ಣು ಹಾಯಿಸಿದರೂ ಜನಸಾಗರವೇ ಕಾಣುತ್ತಿತ್ತು. ಅದರ ನಡುವೆ ಆಗಾಗ ಕೆಜೆಪಿ ಬಾವುಟ ಅಲೆ ಏಳುತ್ತಿತ್ತು.

ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದು ಸಮಾವೇಶದ ವಿಶೇಷವಾಗಿತ್ತು. ತಮ್ಮ ಸಾಂಪ್ರದಾಯಿಕ ಶೈಲಿಯ ಉಡುಪು ಧರಿಸಿ ಬಂದಿದ್ದ ಅವರು, ಯಡಿಯೂರಪ್ಪ ಪರ ಘೋಷಣೆ ಹಾಕುತ್ತಿದ್ದರು.

ಬೆಳಿಗ್ಗೆ 11ರ ಹೊತ್ತಿಗೆ ಸಮಾವೇಶದ ಸ್ಥಳಕ್ಕೆ ತೆರಳಿದಾಗ ಅಷ್ಟಾಗಿ ಜನ ಸೇರಿರಲಿಲ್ಲ. ಹೊತ್ತು ಏರಿದಂತೆ ಜನಪ್ರವಾಹ ಉಕ್ಕಿ ಹರಿಯಿತು. ಮಧ್ಯಾಹ್ನ 2.50ರ ಸುಮಾರಿಗೆ ಯಡಿಯೂರಪ್ಪ ಭಾಷಣ ಮಾಡಲು ಎದ್ದು ನಿಂತಾಗಲೂ ದೂರದ ಊರುಗಳಿಂದ ಜನ ಬರುತ್ತಲೇ ಇದ್ದರು.ಸಮಾವೇಶಕ್ಕೆ ಜನರನ್ನು ಹೊತ್ತು ತಂದ ಸಾವಿರಾರು ವಾಹನಗಳ ಒತ್ತಡ ತಾಳಲಾರದೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗಂಟೆಗಳ ಕಾಲ ಸ್ತಬ್ಧಗೊಂಡಿತು. ರಸ್ತೆ ಪಕ್ಕದ ಹೊಲಗಳಿಗೆ ನುಗ್ಗಿದ ವಾಹನಗಳು ಸಿಕ್ಕ-ಸಿಕ್ಕಲ್ಲಿ ನಿಂತವು. ಸಂಚಾರ ವ್ಯವಸ್ಥೆಯನ್ನು ಸುಸ್ಥಿತಿಗೆ ತರಲು ವಿಫಲರಾದ ಪೊಲೀಸರು ಕೈಚೆಲ್ಲಿ ನಿಂತರು. ಸಮಾವೇಶದ ಇಡೀ ಚಿತ್ರಣವನ್ನು ಸೆರೆ ಹಿಡಿಯಲು ಹೆಲಿಕಾಪ್ಟರೊಂದು ಮೈದಾನದ ಮೇಲೆ ಗಿರಕಿ ಹೊಡೆಯುತ್ತಿತ್ತು. ಕೆಳಹಂತದಲ್ಲಿ ಹಾರಾಡುತ್ತ ಭಾರಿ ದೂಳು ಎಬ್ಬಿಸುತ್ತಿತ್ತು. ಜೋರಾಗಿ ಬೀಸುತ್ತಿದ್ದ ಗಾಳಿ ಹಾಗೂ ಜನರ ಓಡಾಟದಿಂದ ದೂಳು ಮತ್ತಷ್ಟು ಹೆಚ್ಚಿ ಉಸಿರುಗಟ್ಟುವ ವಾತಾವರಣ ಉಂಟಾಗಿತ್ತು.ಬಯಲು ಪ್ರದರ್ಶನ: ಮೈದಾನ ಪಕ್ಕದ ರಾಷ್ಟ್ರೀಯ ಹೆದ್ದಾರಿಯನ್ನೇ ಸಂಘಟಕರು ಬಯಲು ಪ್ರದರ್ಶನ ಕೇಂದ್ರವನ್ನಾಗಿ ಮಾರ್ಪಡಿಸಿದ್ದರು. ಯಡಿಯೂರಪ್ಪ ಅವರ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಆರ್ಥಿಕ ಸಾಧನೆ `ಕಥೆ' ಹೇಳುವ ದೊಡ್ಡದಾದ ಭಿತ್ತಿಚಿತ್ರಗಳ್ನು ಅಲ್ಲಿ ಸಾಲಾಗಿ ಹಾಕಲಾಗಿತ್ತು. ಸಚಿವರಾದ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಉಮೇಶ ಕತ್ತಿ, ಮುರುಗೇಶ ನಿರಾಣಿ, ರೇವು ನಾಯಕ ಬೆಳಮಗಿ ಮತ್ತಿತರರು ಆ ಚಿತ್ರಗಳಲ್ಲಿ ರಾರಾಜಿಸುತ್ತಿದ್ದರು.

ಚೂಡಿದಾರ ಧರಿಸಿ ನಿಂತಿದ್ದ ಶೋಭಾ ಅವರ ಚಿತ್ರ ಭಾರಿ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಿತು. ಕಟೌಟ್‌ನಲ್ಲಿ ಬರೆದಿದ್ದ `ನಾಟಿ ಅರ್ಥಶಾಸ್ತ್ರಜ್ಞ ಯಡಿಯೂರಪ್ಪ' ಎಂಬ ಸಾಲು ಕಚಗುಳಿ ಇಡುತ್ತಿತ್ತು. ಜನಸಾಗರವನ್ನು ಕಂಡ ಮಧುಗಿರಿಯಿಂದ ಬಂದಿದ್ದ ಕೆ.ಮಲ್ಲೇಶ್ ಎಂಬ ಕೆಜೆಪಿ ಬೆಂಬಲಿಗ `ಇನ್ನೇನು ಅಸೆಂಬ್ಲಿ ಚಿಂದಿ ಆಯ್ತದೆ' ಎಂದು ಖುಷಿಯಿಂದ ಹೇಳುತ್ತಿದ್ದರು.ಮಾಧ್ಯಮ ದಂಡು: ಸಮಾವೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಬಂದಿದ್ದರು. ಅಧಿವೇಶನ ನಡೆದಿರುವ ಬೆಳಗಾವಿ, ರಾಜಧಾನಿ ಬೆಂಗಳೂರು ಮತ್ತು ಪಕ್ಕದ ಹುಬ್ಬಳ್ಳಿಗಳಿಂದ ಬಸ್ಸುಗಳಲ್ಲಿ ಪತ್ರಕರ್ತರನ್ನು ಕರೆತರಲಾಗಿತ್ತು. ವೇದಿಕೆ ಪಕ್ಕವೇ ಮಾಧ್ಯಮ ಕೇಂದ್ರ ತೆರೆಯಲಾಗಿತ್ತು.

70 ಟನ್ ಅಕ್ಕಿ, 12 ಸಾವಿರ ಲೀಟರ್ ಎಣ್ಣೆ!ಹಾವೇರಿ: 70 ಟನ್ ಅಕ್ಕಿ, 50 ಕ್ವಿಂಟಲ್ ಈರುಳ್ಳಿ, ತಲಾ 25 ಕ್ವಿಂಟಲ್ ಸೌತೆಕಾಯಿ, ಕ್ಯಾರೆಟ್, ನವಿಲುಕೋಸು, 15 ಕ್ವಿಂಟಲ್ ಬೆಳ್ಳುಳ್ಳಿ, 5 ಕ್ವಿಂಟಲ್ ಹುಣಸೆಹಣ್ಣು, 12,000 ಲೀಟರ್ ಅಡುಗೆ ಎಣ್ಣೆ! ಏನು ಇದೆಲ್ಲ ಎನ್ನುವಿರಾ? ಭಾನುವಾರ ನಡೆದ ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ಮಧ್ಯಾಹ್ನದ ಊಟಕ್ಕೆ ಪುಲಾವ್ ಸಿದ್ಧಪಡಿಸಲು ಬಳಸಿದ ಸಾಮಗ್ರಿಗಳು ಇವು.ಪುಲಾವ್ ತಯಾರಿಸಲು ನೂರಕ್ಕೂ ಅಧಿಕ ಒಲೆಗಳು  ಉರಿದವು. ರಸ್ತೆ ಪಕ್ಕದಲ್ಲಿ ನಿರ್ಮಿಸಿದ್ದ ಚರಂಡಿಯನ್ನೇ ಒಲೆಯಾಗಿ ಪರಿವರ್ತಿಸಲಾಗಿತ್ತು. 1,200 ಜನ ಊಟದ ತಯಾರಿಯಲ್ಲಿ ತೊಡಗಿದ್ದರು. ತಿಂಡಿಗೆ ಉಪ್ಪಿಟ್ಟು- ಶಿರಾ ಮಾಡಲಾಗಿತ್ತು. 200 ಕ್ವಿಂಟಲ್ ರವೆ ಬಳಸಲಾಗಿದೆ ಎಂದು ಊಟದ ಉಸ್ತುವಾರಿ ವಹಿಸಿದ್ದ ಎಂ.ಎಸ್. ಮುಂದಿನಮನಿ ಮತ್ತು ಉಮರ್ ರಜಾಕ್ ಎಂದರು.ಹತ್ತು ಟ್ಯಾಂಕರ್‌ಗಳು ಎಡೆಬಿಡದೆ ನೀರನ್ನು ತಂದು ಸುರಿಯುತ್ತಿದ್ದವು. ಕೈತೊಳೆಯಲು ಅಲ್ಲಲ್ಲಿ ನೂರಾರು ತಾತ್ಕಾಲಿಕ ನಲ್ಲಿಗಳನ್ನು ಹಾಕಲಾಗಿತ್ತು. ಕಾಲೇಜಿನ ನಾಲ್ಕೈದು ಕೋಣೆಗಳಲ್ಲಿ ನೀರಿನ ಪ್ಯಾಕೆಟ್‌ಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಹುಬ್ಬಳ್ಳಿ, ದಾವಣಗೆರೆ ಮತ್ತು ಶಿವಮೊಗ್ಗಗಳಿಂದ ತರಕಾರಿ ಮತ್ತು ಪಾತ್ರೆಗಳನ್ನು ತರಿಸಲಾಗಿತ್ತು.

ಮೊಬೈಲ್ ಜಾಮ್

ಸಮಾವೇಶದಲ್ಲಿ ಸೇರಿದ್ದ ಲಕ್ಷಾಂತರ ಮಂದಿ, ಮೊಬೈಲ್ ಬಳಸಲು ಮುಂದಾದ ಕಾರಣ ಸಂಪರ್ಕ ಜಾಲ 3 ಗಂಟೆಗೂ ಅಧಿಕ ಕಾಲ ಜಾಮ್ ಆಗಿತ್ತು. ಸಂಪರ್ಕ ಸಾಧಿಸಲು ಜನ ಸಿಕ್ಕಾಪಟ್ಟೆ ಪರದಾಡಿದರು. ಎಸ್‌ಎಂಎಸ್ ಕಳಿಸಲೂ ಸಾಧ್ಯವಾಗಲಿಲ್ಲ. ಸಮಾವೇಶ ಮುಗಿದ ಮೇಲೆ ತಮ್ಮ ಊರಿನವರನ್ನು ಸಂಪರ್ಕಿಸಲು ಪ್ರಯಾಣದ ಜವಾಬ್ದಾರಿ ಹೊತ್ತವರು ಹೆಣಗಾಡಿದರು. ಮಾಧ್ಯಮ ಪ್ರತಿನಿಧಿಗಳಿಗೂ ಸಮಾವೇಶದ ಮಾಹಿತಿ ಕೊಡಲು ಸುಲಭವಾಗಿ ಸಾಧ್ಯವಾಗಲಿಲ್ಲ.ಗೃಹ ಸಚಿವರ ಮೇಲೆ ಸಿಟ್ಟು

ಸಮಾವೇಶ ನಡೆದ ಸಭಾಂಗಣದಲ್ಲಿ ಪೊಲೀಸರು ಎಷ್ಟೇ ಪ್ರಯತ್ನ ಮಾಡಿದರೂ ಜನರನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ. ವೇದಿಕೆ ಮುಂಭಾಗದಲ್ಲಿ ಸಿಕ್ಕಾಪಟ್ಟೆ ಜನ ಸೇರಿಕೊಂಡರು. ನಾಯಕರು ಓಡಾಡುವುದೂ ಕಷ್ಟವಾಯಿತು.

`ಸಮಾವೇಶ ಯಶಸ್ವಿ ಆಗಬಾರದು ಎಂಬ ದುರುದ್ದೇಶದಿಂದ ಗೃಹ ಸಚಿವ ಆರ್. ಅಶೋಕ ಜನರನ್ನು ನಿಯಂತ್ರಣ ಮಾಡದಿರಲು ಪೊಲೀಸರಿಗೆ ಸೂಚಿಸಿದ್ದಾರೆ' ಎಂದು ಕೆಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.ಸಮಾವೇಶದಲ್ಲಿ ಬಿಎಸ್‌ವೈ ಕುಟುಂಬ

ಕೆಜೆಪಿ ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪನವರ ಪುತ್ರ-ಪುತ್ರಿಯರು ಒಳಗೊಂಡಂತೆ ಕುಟುಂಬದ ಬಹುಪಾಲು ಸದಸ್ಯರು ಕಾಣಿಸಿಕೊಂಡರು. ವೇದಿಕೆ ಮೇಲೆ ಬಿ.ವೈ. ವಿಜಯೇಂದ್ರ ಮಾತ್ರ ಇದ್ದರು.

ಊಟೋಪಚಾರದ ಮೇಲುಸ್ತುವಾರಿಯನ್ನೂ ಕುಟುಂಬದ ಸದಸ್ಯರೇ ನೋಡಿಕೊಂಡರು. ಯಡಿಯೂರಪ್ಪನವರ ಸೊಸೆಯಂದಿರು, ಪುತ್ರಿ ಅರುಣಾದೇವಿ ವೇದಿಕೆ ಮುಂಭಾಗದಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರೊಂದಿಗೆ ಇದ್ದರು. ನಟಿ ಪೂಜಾಗೆ `ಹೂಬಾಣ'

ನಟಿ ಪೂಜಾ ಗಾಂಧಿ ವೇದಿಕೆ ಮೇಲೆ ಬಂದಾಗ ಕೆಜೆಪಿ ಕಾರ್ಯಕರ್ತರು ಕೇಕೆ ಸಿಳ್ಳುಗಳ ಮೂಲಕ ಸ್ವಾಗತಿಸಿದರು.

ಪೂಜಾ ಭಾಷಣಕ್ಕೆ ಎದ್ದುಬಂದಾಗ ಚೆಂಡು ಹೂವುಗಳನ್ನು ಅವರತ್ತ ತೂರಿಬಿಟ್ಟರು. ಅವರು ಬೇಡ ಎಂದು ಕೈಸನ್ನೆ ಮಾಡಿದರೂ ಕೇಳದ ಕಾರ್ಯಕರ್ತರು ಹೂವುಗಳನ್ನು ಎಸೆಯುತ್ತಲೇ ಇದ್ದರು. ತಮ್ಮ ಭಾಷಣದಲ್ಲಿ ಅವರು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ಕೊಟ್ಟು ಮಾತನಾಡಿದರು.

ಯಡಿಯೂರಪ್ಪ ಅವರನ್ನು ಕೆಚ್ಚೆದೆಯ ಸ್ವಾಭಿಮಾನಿ ಎಂದು ಬಣ್ಣಿಸಿದರು. ಕೆಜೆಪಿ, ಅನುಭವ ಮಂಟಪ ಆಗಬೇಕು ಎಂದು ಹಾರೈಸಿದರು.ಹಳೇ ಪಾತ್ರೆ, ಹಳೇ ಕಬ್ಬಿಣ...

ಬ್ಯಾಡಗಿ ಶಾಸಕ ಸುರೇಶಗೌಡ ಪಾಟೀಲ ಸಮಾವೇಶದಲ್ಲಿ `ಹಳೇ ಪಾತ್ರೆ, ಹಳೇ ಕಬ್ಬಿಣ' ಎಂಬ ಕನ್ನಡ ಚಲನಚಿತ್ರ ಗೀತೆಯನ್ನು ಹಾಡುವ ಮೂಲಕ ಗಮನಸೆಳೆದರು.

ಯಡಿಯೂರಪ್ಪ ಇಲ್ಲದ ಬಿಜೆಪಿ ಸ್ಥಿತಿ ಈ ರೂಪದಲ್ಲಿ ಬೀದಿಗೆ ಬರುತ್ತದೆ ಎಂದು ಸಮೀಕರಿಸಿ ಈ ಹಾಡು ಹೇಳಿದರು.ವಿದ್ಯುತ್‌ಗಾಗಿ ಶೋಭಾಗೆ ಮೊರೆ

ಸಮಾವೇಶದ ನೇರ ಪ್ರಸಾರವನ್ನು ಜನ ನೋಡಬಾರದು ಎಂದು ಹಾಸನ ಜಿಲ್ಲೆಯಲ್ಲಿ ಸರ್ಕಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎಂದು ಸಕಲೇಶಪುರದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಮಧ್ಯ ಪ್ರವೇಶಿಸಿ ವಿದ್ಯುತ್ ಸಂಪರ್ಕವನ್ನು ಮತ್ತೆ ಒದಗಿಸಬೇಕು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry