ಕೆಜೆಪಿ ಸಮಾವೇಶ ; ಪ್ರಚಾರದಲ್ಲೂ ದಾಖಲೆ

7

ಕೆಜೆಪಿ ಸಮಾವೇಶ ; ಪ್ರಚಾರದಲ್ಲೂ ದಾಖಲೆ

Published:
Updated:

ಹಾವೇರಿ:  ನಗರದ ಜಿ.ಎಚ್.ಕಾಲೇಜು ಮೈದಾನದಲ್ಲಿ ಇದೇ 9 ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಸಮಾವೇಶದ ಪ್ರಚಾರಕ್ಕೂ ದಾಖಲೆ ಪ್ರಮಾಣದ ಪರಿಕರಗಳನ್ನು ಬಳಕೆ ಮಾಡಲಾಗುತ್ತಿದೆ.ಚುನಾವಣಾ ಆಯೋಗದಿಂದ ಕೆಜೆಪಿಗೆ ಇನ್ನೂ ಅಧಿಕೃತ ಚಿಹ್ನೆ ದೊರೆತಿಲ್ಲ. ಆದರೂ ಯಡಿಯೂರಪ್ಪ ಅವರ ಚಿತ್ರವನ್ನು ಮಧ್ಯದಲ್ಲಿ ಬಳಸಿಕೊಂಡು ಹಳದಿ, ಬಿಳಿ ಹಾಗೂ ಹಸಿರು ಬಣ್ಣದ ಧ್ವಜವನ್ನು ಅಧಿಕೃತ ಧ್ವಜವೆಂದು ಪಕ್ಷ ರೂಪಿಸಿಕೊಂಡಿದೆ. ಈಗ ಅದನ್ನೇ ಬಳಸಿಕೊಂಡು ಧ್ವಜದ ಬಂಟಿಂಗ್ಸ್, ಗೋಡೆ ಹಾಗೂ ವಾಹನಗಳಿಗೆ ಅಂಟಿಸುವ ಸಣ್ಣ ಹಾಗೂ ದೊಡ್ಡ ಸ್ಟಿಕ್ಕರ್‌ಗಳು ಅಲ್ಲದೇ ಯಡಿಯೂರಪ್ಪ ಹಾಗೂ ಪಕ್ಷದ ಹೆಸರು ಇರುವ ಫ್ಲೆಕ್ಸ್ ಹಾಗೂ ಬೃಹತ್ ಕಟೌಟ್‌ಗಳನ್ನು ಪ್ರಚಾರಕ್ಕೆ ಬಳಸಲಾಗುತ್ತಿದೆ.ಸಮಾವೇಶ ನಡೆಯಲಿರುವ ಹಾವೇರಿ ಜಿಲ್ಲೆಯಲ್ಲಿ ಪ್ರಚಾರದ ಭರಾಟೆ ಹೆಚ್ಚಾಗಿಯೇ ಇದೆ. ತಾಲ್ಲೂಕು ಕೇಂದ್ರ ಹಾಗೂ ಪ್ರಮುಖ ಗ್ರಾಮೀಣ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು 12 ್ಡ 25 ಚ.ಅಡಿ ಕಟೌಟ್‌ಗಳನ್ನು ಅಳವಡಿಸಲಾಗಿದೆ.ಹಾವೇರಿ ನಗರವೊಂದರಲ್ಲಿ ಸುಮಾರು 200ಕ್ಕೂ ಹೆಚ್ಚು ಕಟೌಟ್‌ಗಳನ್ನು ಹಾಕಲಾಗಿದ್ದು, ನಗರದೊಳಗೆ ಬರುವ ರಾಷ್ಟ್ರೀಯ ಹೆದ್ದಾರಿ-4 ಬೈಪಾಸ್‌ನಿಂದ ಹಿಡಿದು ತೋಟದ ಯಲ್ಲಾಪುರ ಬಳಿಯ ಬೈಪಾಸ್‌ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕಟೌಟ್, ಬಂಟಿಂಗ್ಸ್ ಹಾಕಲಾಗಿದೆ. ಹೆದ್ದಾರಿಯ ವಿಭಜಕದಗುಂಟ ಸಣ್ಣ ಸಣ್ಣ ಫ್ಲೆಕ್ಸ್ ಗಳನ್ನು ಹಾಕಲಾಗಿದೆ. ಸಮಾವೇಶ ಸ್ಥಳದಲ್ಲಿ ಕೂಡಾ ನಾಯಕರ ಕಟೌಟ್‌ಗಳನ್ನು ಅಳವಡಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಸಮಾವೇಶದ ಪ್ರವೇಶದಲ್ಲಿ ಬೃಹತ್ ದ್ವಾರಗಳನ್ನು ನಿರ್ಮಿಸಿ ಕೆಜೆಪಿ ಸಮಾವೇಶಕ್ಕೆ ಸ್ವಾಗತ ಎನ್ನುವ ಕಮಾನು ಅಳವಡಿಸಲಾಗಿದೆ.ನೂರು ಕಿ.ಮೀ. ಫ್ಲೆಕ್ಸ್:  ಈ ಸಮಾವೇಶಕ್ಕೆ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಒಟ್ಟು 100 ಕಿ.ಮೀ ಉದ್ದದಷ್ಟು ಫ್ಲೆಕ್ಸ್‌ಗಳನ್ನು ಮುದ್ರಿಸಲಾಗಿದೆ. ಅದೇ ರೀತಿ ಸುಮಾರು ಐದು ಲಕ್ಷ ಸಣ್ಣ ಹಾಗೂ ದೊಡ್ಡ ಸ್ಟಿಕ್ಕರ್‌ಗಳನ್ನು ಹಾಗೂ ಕೆಜೆಪಿ ಬೃಹತ್ ಸಮಾವೇಶ ಹಾವೇರಿ ಎನ್ನುವ ಹತ್ತು ಲಕ್ಷಕ್ಕೂ ಹೆಚ್ಚಿನ ಕರಪತ್ರಗಳನ್ನು ಮುದ್ರಿಸಲಾಗಿದೆ. ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೂ ಪ್ರಚಾರ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುತ್ತಾರೆ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಯಾದ ಭಾಗ್ಯಲಕ್ಷ್ಮಿ, 108 ಅಂಬುಲೆನ್ಸ್ ಸೇವೆ, ಉಚಿತ ಸೈಕಲ್ ವಿತರಣೆ, ಹಾಲಿಗೆ 2 ರೂ ಪ್ರೋತ್ಸಾಹ ಧನ ವಿತರಣೆ ಸೇರಿದಂತೆ ಸುವರ್ಣ ಸೌಧ ಹಾಗೂ ಇತರ ಹೊಸ ಕಟ್ಟಡಗಳ ನಿರ್ಮಾಣ ಸಾಧನೆಗಳನ್ನೇ ಫ್ಲೆಕ್ಸ್‌ಗಳಲ್ಲಿ ಚಿತ್ರ ಸಮೇತ ಮುದ್ರಿಸಲಾಗಿದೆ. ಜತೆಗೆ  `ಹೊಸ ಹುಟ್ಟು ಪಡೆಯೋಣ...ಹೊಸ ನಾಡು ಕಟ್ಟೋಣ...' ಎನ್ನುವ ಘೋಷವಾಕ್ಯ ಬಳಸಲಾಗಿದೆ.ಫ್ಲೆಕ್ಸ್‌ಗಳಿಗೆ ಅಳವಡಿಸುವ ಫ್ರೇಮ್ ತಯಾರಿಕೆಗಾಗಿಯೇ ಶಿವಮೊಗ್ಗದಿಂದ ಎರಡು ಲಾರಿ ಲೋಡು ಅಡಿಕೆ ಮರ ತರಿಸಲಾಗಿದೆ. ಸುಮಾರು 30 ಮಂದಿ ಎರಡು ದಿನಗಳಿಂದ ಫ್ರೇಮ್ ತಯಾರಿಕೆಯಲ್ಲಿ ತೊಡಗಿದ್ದಾರೆ.  ಫ್ಲೆಕ್ಸ್ ಅಳವಡಿಕೆ ಕಾರ್ಯದಲ್ಲಿ 50ಕ್ಕೂ ಹೆಚ್ಚು ಜನರು ನಿರತರಾಗಿದ್ದಾರೆ ಎನ್ನುತ್ತಾರೆ ಎಂದು ಶಿವಮೊಗ್ಗದ ಯೋಗೇಶ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry