ಕೆಜೆಪಿ ಸೇರಿದ ಔಚಿತ್ಯಕ್ಕೆ ಪ್ರಶ್ನೆಯ ಸುರಿಮಳೆ

7
ಚಂಪಾರೊಂದಿಗೆ ಮುಕ್ತ ಸಂವಾದ

ಕೆಜೆಪಿ ಸೇರಿದ ಔಚಿತ್ಯಕ್ಕೆ ಪ್ರಶ್ನೆಯ ಸುರಿಮಳೆ

Published:
Updated:

ಮೈಸೂರು: `ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಆಯ್ಕೆಯ ಪ್ರಶ್ನೆ ಎದುರಾಯಿತು. ಜಾತ್ಯತೀತ ಪ್ರಾದೇಶಿಕ ಪಕ್ಷವೊಂದನ್ನು ಬೆಂಬಲಿಸಲು ನಿರ್ಧರಿಸಿದೆ. ಇದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ಜನತಾ ಪಕ್ಷಕ್ಕೆ (ಕೆಜೆಪಿ) ಆಹ್ವಾನಿಸಿದರು. ಪಕ್ಷಕ್ಕೆ ಸೇರುವ ಮುನ್ನ ಪ್ರಜ್ಞಾಪೂರಕವಾಗಿಯೇ ತೀರ್ಮಾನ ಕೈಗೊಂಡಿದ್ದೇನೆ'.ರಾಜಕೀಯ ಪ್ರವೇಶಿಸಿದ ಕುರಿತು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ವಿವರಣೆ ನೀಡಿದ್ದು ಹೀಗೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಮಾನಸಗಂಗೋತ್ರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಕೆಜೆಪಿ ಸೇರಿರುವ ಕುರಿತು  ಚಂಪಾ ನೀಡಿದ ವಿವರಣೆ ಇದು.`ಜೈಲಿಗೆ ಹೋಗಿ ಬಂದ ರಾಜಕಾರಣಿಯ ಪಕ್ಷ ಸೇರಿದ ಔಚಿತ್ಯವೇನು' ಎಂದು ಪ್ರೇಕ್ಷಕರೊಬ್ಬರು ಪ್ರಶ್ನಿಸಿದರು. `ನಾನೂ ಜೈಲಿಗೆ ಹೋಗಿ ಬಂದವನೇ' ಎಂದು ಚಂಪಾ ಹಾಸ್ಯಮಿಶ್ರಿತವಾಗಿ ಉತ್ತರಿಸಿದರು. `ನೀವು (ಚಂಪಾ) ಜೈಲಿಗೆ ಹೋದ ಸಂದರ್ಭ, ಅವರು (ಯಡಿಯೂರಪ್ಪ) ಜೈಲಿಗೆ ಹೋದ ಕಾರಣ ಬೇರೆ. ಇದಕ್ಕೆ ಗಂಭೀರವಾಗಿ ಉತ್ತರಿಸಬೇಕು' ಎಂದು ಪ್ರಾಧ್ಯಾಪಕರೊಬ್ಬರು ಸಲಹೆ ನೀಡಿದರು.ಆಗ ಮಾತನಾಡಿದ ಚಂಪಾ, `ಬಿಜೆಪಿಯಿಂದ ಹೊರ ಬಂದ ಬಳಿಕ ಯಡಿಯೂರಪ್ಪ ನನ್ನನ್ನು ಸಂಪರ್ಕಿಸಿದರು. ಕೋಮುವಾದಿ ಪಕ್ಷದ ಸಿದ್ಧಾಂತಕ್ಕೆ ಮರಳದೇ ಪ್ರಾದೇಶಿಕ ಪಕ್ಷ ಕಟ್ಟುವ ಭರವಸೆ ನೀಡಿ, ಆಹ್ವಾನ ಇತ್ತರು. ದಲಿತ, ಬಂಡಾಯ ಚಳವಳಿಯ ಹಿನ್ನೆಲೆಯಿಂದ ಬಂದವರಿಗೆ ಕೋಮುವಾದಿಗಳು ವಿರೋಧಿಗಳೇ. ಆದರೆ, ಯಡಿಯೂರಪ್ಪ ಜಾತ್ಯತೀತ ಪಕ್ಷ ಹುಟ್ಟುಹಾಕುವ ಯೋಜನೆ ಮುಂದಿಟ್ಟರು. ಲೋಹಿಯಾ, ಸಮಾಜವಾದಿಗಳಾದ ಎಸ್.ಕೆ. ಕಾಂತ, ವೈಜನಾಥ ಪಾಟೀಲರು ಆಗಲೇ ಕೆಜೆಪಿ ಸೇರಿದ್ದರು.ಅಲ್ಲದೇ, ಪಕ್ಷದ ಸಲಹಾ ಸಮಿತಿಯಲ್ಲಿ ಗುರುತಿಸಿಕೊಳ್ಳಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ, ಪ್ರೊ.ಹಂಪಾ ನಾಗರಾಜಯ್ಯ ಹಾಗೂ ಡಾ.ನಲ್ಲೂರು ಪ್ರಸಾದ್ ಅವರು ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ತಿಳಿಯಿತು. ಆದರೆ, ಕೊನೆಯಲ್ಲಿ ಪಕ್ಷ ಸೇರಿದ್ದು ನಾನು ಮಾತ್ರ' ಎಂದರು.`ಜಗತ್ತಿನ ಮೂರು ಪ್ರಮುಖ ಧರ್ಮಗಳು ಬೌದ್ಧ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮಾತ್ರ. ಜಗತ್ತಿನ ಪರಮಗುರುವಾದ ಬುದ್ಧನ ಧರ್ಮ ನಮ್ಮ ಪರಂಪರೆಯಾಗಬೇಕಿತ್ತು. ವಿಶ್ವದಲ್ಲಿ ಅತಿ ವೇಗವಾಗಿ ಹರಡಿದ್ದು ಬೌದ್ಧ ಧರ್ಮ. ಸಾಯಲಿಕ್ಕಾಗಿಯೇ ಹುಟ್ಟಿದ್ದು ವೈದ್ದಿಕ ಧರ್ಮ. ಸಾವಿರಾರು ವರ್ಷಗಳ ಹಿಂದೆ ಅವತರಿಸಿದ ಧರ್ಮ ರೋಗಪಿಡಿತ ಸ್ಥಿತಿಯಲ್ಲಿದೆ. ತನ್ನೊಳಗಿನ ವೈರುದ್ಯಗಳಿಂದ ಅದು ಅವಸಾನ ಹೊಂದುತ್ತದೆ' ಎಂದು ಅಭಿಪ್ರಾಯಪಟ್ಟರು.ಕವಿ ಡಾ.ಸರಜೂ ಕಾಟ್ಕರ್, ಲೇಖಕ ಪ್ರೊ.ಕಾಳೇಗೌಡ ನಾಗವಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿದರು.ಅಕಡೆಮಿಕ್ ದಾಂಪತ್ಯ!

ಚಂಪಾ ಅವರು ಮಾತನಾಡಿದ ಬಳಿಕ ಸಂವಾದ ಆರಂಭವಾಯಿತು. ಮೊದಲಿಗೆ ಸಾಹಿತ್ಯ, ಸಾಮಾಜಿಕ ಸಮಸ್ಯೆಯ ಕುರಿತು ಪ್ರಶ್ನೆಗಳು ಎದ್ದವು. ಬಳಿಕ ಚರ್ಚೆಯ ದಿಕ್ಕು ಬದಲಾಯಿತು. ಚಂಪಾ ಅವರು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರಿದ ಕುರಿತು ಪ್ರಶ್ನೆಗಳ ಮಳೆ ಸುರಿದವು. ಕೆಲ ಸಭಿಕರಿಂದ ಭಾವಾವೇಶದ ಮಾತುಗಳು ಹೊರಬರತೊಡಗಿದವು. ಆಗ ಮಧ್ಯಪ್ರವೇಶಿಸಿದ ಪ್ರಾಧ್ಯಾಪಕರೊಬ್ಬರು `ಇದು ಅಕಡೆಮಿಕ್ ಚರ್ಚೆ. ಈ ರೀತಿಯ ಭಾವಾವೇಶಕ್ಕೆ ಅವಕಾಶವಿಲ್ಲ. ಪ್ರಶ್ನೆಗಳು ಸಭ್ಯತೆಯ ಎಲ್ಲೆ ಮೀರಬಾರದು' ಎಂದು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಚಂಪಾ, `ಸಿಟ್ಟು ಯುವಕರಿಗಲ್ಲದೇ ಮುದುಕರಿಗೆ ಬರುವುದಿಲ್ಲ. ಯುವ ಸಮೂಹ ಆಕ್ರೋಶ ಭರಿತವಾಗಿ ಮಾತನಾಡಬೇಕು. ವಿಶ್ವವಿದ್ಯಾನಿಲಯದ ಅಕಡೆಮಿಕ್ ಚೌಕಟ್ಟಿಗೆ ಸಂವಾದ ಕಟ್ಟುಬೀಳುವುದು ಬೇಡ. ಇಲ್ಲಿ ದಾಂಪತ್ಯವೂ ಅಕಾಡೆಮಿಕ್ ಆಗಿಯೇ ಇರುತ್ತದೆ' ಎಂದಾಗ ಸಭಾಂಗಣದಲ್ಲಿ ನಗೆಯ ಚಿಲುಮೆ ಉಕ್ಕಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry