ಗುರುವಾರ , ಮೇ 28, 2020
27 °C

ಕೆಟ್ಟ ಹವ್ಯಾಸ ಬಿಡಿಸುವ ನೆಪದಲ್ಲಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಕ್ಕಳ ಕೆಟ್ಟ ಹವ್ಯಾಸಗಳನ್ನು ದೂರ ಮಾಡುತ್ತೇವೆ ಎಂದು ಹೇಳಿಕೊಂಡು ಹಲವು ನಕಲಿ ಸಂಸ್ಥೆಗಳು ಹಣ ದೋಚುತ್ತಿವೆ. ಇಂತಹ ಸಂಸ್ಥೆಗಳಿಂದ ಪಾಲಕರು ದೂರವಿರಬೇಕು’ ಎಂದು ಮನೋರೋಗ ತಜ್ಞ ಡಾ.ಸಿ.ಆರ್. ಚಂದ್ರಶೇಖರ್ ಎಚ್ಚರಿಕೆ ನೀಡಿದರು. ನಗರದಲ್ಲಿ ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‌ನ ಡಿಸ್ಟ್ರಿಕ್ಟ್ 324 ಡಿ6 ಭಾನುವಾರ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ 8ನೇ ವಿಭಾಗೀಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.‘ಯಾವುದೇ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದೇ, ಮಕ್ಕಳಿಗೆ ದೈಹಿಕವಾಗಿ ಹಿಂಸಿಸಿ ಕೆಟ್ಟ ಹವ್ಯಾಸಗಳನ್ನು ಬಿಡಿಸಲು ಅವರು ಮುಂದಾಗುತ್ತಾರೆ. ಇಂತಹ ಸಂಸ್ಥೆಗಳಿಂದ ದೂರವಿರುವುದು ಒಳಿತು’ ಎಂದು ಸಲಹೆ ನೀಡಿದರು.‘ಪಾಲಕರು ಮಕ್ಕಳನ್ನು ಸರಿಯಾಗಿ ಅರ್ಥೈಸಿಕೊಂಡರೆ ಅರ್ಧದಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಆದರೆ, ಇಂದು ‘ಹಣ ತಗೋ, ಖುಷಿ ಪಡು’ ಎನ್ನುವ ಪಾಲಕರ ಧೋರಣೆಯ ಪರಿಣಾಮ ಮಕ್ಕಳ ಮಾನಸಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ’ ಎಂದು ಅವರು ಹೇಳಿದರು.‘ಮಕ್ಕಳು ತಪ್ಪು ಮಾಡಿದರೆ ತಿದ್ದಿ ಬುದ್ಧಿಹೇಳಿ, ಒಳ್ಳೆಯ ಕೆಲಸಗಳನ್ನು ಮಾಡಿದರೆ ಬೆನ್ನು ತಟ್ಟಿ. ಇದು ಮಕ್ಕಳ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ನೈತಿಕ ಬೆಂಬಲ ತುಂಬುವ ಕೆಲಸ ಮಾಡಬೇಕು’ ಎಂದು ಅವರು ನುಡಿದರು.ಮನೋರೋಗ ತಜ್ಞೆ ಜ್ಯೋತಿ ಶರ್ಮಾ ಮಾತನಾಡಿ,  ‘ಕೌಟುಂಬಿಕ ಹಾಗೂ ಸುತ್ತಲಿನ ಸಾಮಾಜಿಕ ವ್ಯವಸ್ಥೆಯು ಮಕ್ಕಳ ಮೇಲೆ ಅತಿಯಾಗಿ ಪ್ರಭಾವ ಬೀರುತ್ತದೆ. ಮಕ್ಕಳು ತಮ್ಮಲ್ಲಿರುವ ಅಸಮಾಧಾನವನ್ನು ಹೊರಹಾಕಲು ಧೂಮಪಾನ, ಮದ್ಯ, ಮಾದಕ ಪದಾರ್ಥಗಳಿಗೆ ದಾಸರಾಗುತ್ತಾರೆ’ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು 8ನೇ ವಿಭಾಗೀಯ ಅಧ್ಯಕ್ಷ ಲಯನ್ ಎಚ್.ಟಿ. ಸೀತಾರಾಮ ವಹಿಸಿದ್ದರು. ಆಯೋಜಕ ಸಮಿತಿಯ ಅಧ್ಯಕ್ಷ ಕೆ.ರಮೇಶ್ ರಾವ್, ಆಯೋಜಕ ಸಮಿತಿಯ ವಲಯ 1ರ ಕಾರ್ಯದರ್ಶಿ ಎಂ.ದೇವರಾಜ್, ವಲಯ 2ರ ಖಜಾಂಚಿ ಬಿ.ಮೋಹನ್ ಹಾಗೂ ವಲಯ 3ರ ಜೆ.ಭವಾನಿ ಪ್ರಸಾದ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.