ಕೆಣಕಿದವರಿಗೆ ಯಾವುದೇ ಕಾರಣಕ್ಕೂ ಬಗ್ಗಲ್ಲ : ಬಿ.ಎಸ್. ಯಡಿಯೂರಪ್ಪ

7

ಕೆಣಕಿದವರಿಗೆ ಯಾವುದೇ ಕಾರಣಕ್ಕೂ ಬಗ್ಗಲ್ಲ : ಬಿ.ಎಸ್. ಯಡಿಯೂರಪ್ಪ

Published:
Updated:

ಶಿಕಾರಿಪುರ: ಪ್ರತಿಹಂತದಲ್ಲೂ ನನ್ನ ಕಾಲೆಳೆಯುವ ಪ್ರಯತ್ನವನ್ನು ನಮ್ಮ ಪಕ್ಷದವರೇ ಮಾಡುತ್ತಿದ್ದು, ನನ್ನನ್ನು ಕೆಣಕಿದವರಿಗೆ ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಮಂಗಳವಾರ ಪುರಸಭೆ, ಕರ್ನಾಟಕ ಕೊಳಗೇರಿ ಮಂಡಳಿ ಹಾಗೂ ಕರ್ನಾಟಕ ಗೃಹ ಮಂಡಳಿ ಆಶ್ರಯದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾನು ಮುಖ್ಯಮಂತ್ರಿ ಆದ ಮೊದಲನೇ ವರ್ಷದಿಂದಲೂ ಪ್ರತಿ ಪಕ್ಷಗಳಿಗಿಂತ ನನ್ನ ಪಕ್ಷದವರೇ ಪ್ರತಿ ನಿಮಿಷಕ್ಕೂ ನನ್ನನ್ನು ತುಳಿದರು. ಇವರ ಮಧ್ಯೆ ನಾನು ಇರಬೇಕೋ ಬೇಡವೋ ಎಂಬ ಬಗ್ಗೆ ಇಡೀ ರಾಜ್ಯ ಪ್ರವಾಸ ಮಾಡಿ ಜನರ ಅಪ್ಪಣೆ ಕೇಳುತ್ತೇನೆ. ಜನತೆ ನಾನು ಸ್ವಾತಂತ್ರವಾಗಿರಬೇಕು ಎಂದ ಬಯಸಿದರೆ ಅವರ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.ಶಿವಮೊಗ್ಗದಲ್ಲಿರುವ ಗಾಂಧಿ ಪಾರ್ಕ್‌ಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ಕೋಟ್ಯಂತರ ರೂಪಾಯಿ ಅನುದಾನ ನೀಡಿ ಅಭಿವೃದ್ದಿ ಪಡಿಸಿದ್ದೆ. ಆದರೆ, ಇಂದು ಗಾಂಧಿ ಜಯಂತಿ ದಿನ ನನ್ನ ಕೈನಿಂದ ಉದ್ಘಾಟನೆ ಆಗಬಾರದು ಎಂಬ ಕಾರಣಕ್ಕೆ ಒಬ್ಬ ಪುಣ್ಯಾತ್ಮ ಪಾರ್ಕ್‌ನ ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾನೆ ಎಂದರು.ಶೀಘ್ರದಲ್ಲಿ ಜನತೆಯ ಅಭಿಪ್ರಾಯ ಪಡೆದು ಇಂತವರ ಕಪಿಮುಷ್ಠಿಯಿಂದ ಹೊರಬಂದು ರಾಜ್ಯದ ಅಭಿವೃದ್ಧಿ ಬಗ್ಗೆ ಶ್ರಮಿಸುತ್ತೇನೆ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲ್ಲೂಕಾಗಿದ್ದ ಶಿಕಾರಿಪುರ, ಇಂದು ರಾಜ್ಯದಲ್ಲೇ ಮೊದಲ ಮಾದರಿ ತಾಲ್ಲೂಕು ಆಗಿ ಬದಲಾಗಿದೆ. ಇದೇ ರೀತಿ ರಾಜ್ಯದ ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಗೃಹ ಮಂಡಳಿಗೆ ಜಮೀನು ನೀಡಿದವರಿಗೆ ಜನವರಿ ತಿಂಗಳೊಳಗೆ ನಿವೇಶನವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಶಯದಂತೆ ಗೃಹ ಮಂಡಳಿಗೆ 1 ಎಕರೆಗೂ ಕಡಿಮೆ ಜಮೀನು ನೀಡಿದವರಿಗೆ 20-30 ಆಳತೆಯ ನಿವೇಶನವನ್ನು ಮಂಡಳಿಯಿಂದ ಮುಫ್ತಾಗಿ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು.ಸಂಸತ್ ಸದಸ್ಯ ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನ ಪರಿಷತ್ತು ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಭಾರತಿ ಶೆಟ್ಟಿ, ಶಾಸಕ ಎಂ.ಪಿ. ಕುಮಾರಸ್ವಾಮಿ, `ಕಾಡಾ~ ಅಧ್ಯಕ್ಷ ಕೆ. ಶೇಖರಪ್ಪ, ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಅಮ್ಜದ್ ಹುಸೇನ್ ಕರ್ನಾಟಕಿ, ಮಾಜಿ ಶಾಸಕ ಜಿ. ಬಸವಣ್ಯಪ್ಪ, ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಹಾಮಂಡಳಿ ಉಪಾಧ್ಯಕ್ಷ ಚೂಡಾನಾಯ್ಕ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ,  ಜ್ಯೋತಿ ರಮೇಶ್,  ಜಬೀನಾ ರಹಮತ್‌ವುಲ್ಲಾ, ಮುಖ್ಯಾಧಿಕಾರಿ ಮನೋಹರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry