ಕೆನೆಡಿಯನ್ ಶಾಲೆಯಲ್ಲಿ ಪದವಿ ಸ್ವೀಕಾರ ಸಮಾರಂಭ

7

ಕೆನೆಡಿಯನ್ ಶಾಲೆಯಲ್ಲಿ ಪದವಿ ಸ್ವೀಕಾರ ಸಮಾರಂಭ

Published:
Updated:
ಕೆನೆಡಿಯನ್ ಶಾಲೆಯಲ್ಲಿ ಪದವಿ ಸ್ವೀಕಾರ ಸಮಾರಂಭ

`ಶಾಲೆಯನ್ನೇನೋ ಬಿಟ್ಟು ಹೋಗಬಹುದು, ಆದರೆ ನೆನಪುಗಳನ್ನಲ್ಲ. ಶಾಲೆಯೊಂದಿಗಿನ ಭಾವನಾತ್ಮಕ ಸಂಬಂಧ ಶಾಶ್ವತವಾಗಿರುತ್ತದೆ...~

ಕೆನೆಡಿಯನ್ ಇಂಟರ್‌ನ್ಯಾಶನಲ್ ಶಾಲೆಯ ಇಬ್ರಾಹಿಂ ಮುರಾತ್ ತಾನು ಓದಿದ ಶಾಲೆಯ ಬಗ್ಗೆ ಹೀಗೆ ಮಾತನಾಡುತ್ತಿದ್ದರೆ ನೆರೆದವರ ಕಣ್ಣಾಲಿಗಳು ತೇವಗೊಂಡಿದ್ದವು. ಅಂದು ಶಾಲೆಯ ಪದವಿ ಸ್ವೀಕಾರ ದಿನಾಚರಣೆ ಹಾಗೂ ಬೀಳ್ಕೊಡುಗೆ ಸಮಾರಂಭ. ಅಷ್ಟು ಹೊತ್ತೂ ಸಂಭ್ರಮ ಹಂಚಿಕೊಂಡು ಖುಷಿಯಿಂದ ಓಡಾಡಿಕೊಂಡಿದ್ದ ಅಷ್ಟೂ ಮಂದಿ ವಿದ್ಯಾರ್ಥಿಗಳ ಕೆಲ ಮಾತು ಕೇಳಿ ಗದ್ಗದಿತರಾದರು.

ಸಮಾರಂಭದ ಸಮಾರೋಪ ಭಾಷಣದಲ್ಲಿ, ಗೆಳೆಯರೊಂದಿಗೆ ಸಿಐಎಸ್‌ನಲ್ಲಿ ಕಳೆದ ಕ್ಷಣಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರು. `ನಾವು ಬೇರೆ ಭಾಷೆಗಳನ್ನು ಪ್ರೀತಿಸಬಲ್ಲೆವು ಎಂದು ಮಾತ್ರ ತಿಳಿದಿದ್ದೆವು. ಆದರೆ ಈಗ ಬೇರೆ ಭಾಷೆಗಳನ್ನೂ ಆಳಬಲ್ಲೆವು ಎಂಬ ಧೈರ್ಯ ಬಂದಿದೆ~ ಎಂದು ಹೇಳಿದರು.

`ತರಗತಿಯ ನೆನಪುಗಳು ಎಂದಿಗೂ ಜೀವಂತ. ಈ ದಿನ ಸಂತಸ ಹಾಗೂ ಬೇಸರ ಎರಡನ್ನೂ ನೀಡುತ್ತಿದೆ. ಎಲ್ಲಾ ಕಿರಿಯ ಮಿತ್ರರನ್ನು ಬಿಟ್ಟು ಹೋಗಬೇಕೆಂಬ ಬೇಸರ ಒಂದಡೆಯಾದರೆ, ಉನ್ನತ ಶಿಕ್ಷಣದೆಡೆ ದಾಪುಗಾಲಿಡುವ ಸಂತಸ ಇನ್ನೊಂದೆಡೆಗಿದೆ~ ಎಂದು ಹೇಳಿದ ಆಂಟೊನಿ ಅಲೆನ್ ಅಕ್ಷರ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅತಿಥಿಗಳಾಗಿ ಆಗಮಿಸಿದ್ದರು. `ಬೇರೆಯವರ ಭ್ರಷ್ಟಾಚಾರ ಎತ್ತಿ ತೋರುವ ಬದಲು ತಮ್ಮಲ್ಲಿರುವ ನ್ಯೂನತೆಗಳನ್ನು ತಿದ್ದಿಕೊಳ್ಳುವತ್ತ ಗಮನ ಹರಿಸಬೇಕು~ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಲೆಯ ಕಾರ್ಯಕಾರಿ ನಿರ್ದೇಶಕಿ ಶ್ವೇತಾ ಶಾಸ್ತ್ರಿ `ಜಗತ್ತಿನ ಭಾವೀ ಮುಖಂಡರಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವಲ್ಲಿ ನಾವು ನಿರಂತರವಾಗಿ ನಿರತರಾಗಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಬದುಕಿನಲ್ಲಿ ಯಶ ಕಾಣಲಿ~ ಎಂದು ಶುಭ ಹಾರೈಸಿದರು.

ಶಾಲೆಯ ಮುಖ್ಯಸ್ಥ ಶೇನ್ ಕೆಲ್ಸ್ ಶಾಲೆಯಲ್ಲಿ ಶೈಕ್ಷಣಿಕ ಉತ್ಕೃಷ್ಟತೆ ಹಾಗೂ ಧನಾತ್ಮಕ ಶೈಕ್ಷಣಿಕ ನಡವಳಿಕೆ ಪ್ರಶಸ್ತಿಯನ್ನು ಹೇಯ್ ಜಂಗ್ ಅವರಿಗೆ ನೀಡಿದರು. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸ್ಥಿರವಾದ ಹಾಗೂ ಅತ್ಯುತ್ತಮ ಶೈಕ್ಷಣಿಕ ಅಭಿವೃದ್ಧಿ ಪರಿಗಣಿಸಿ ಪ್ರಶಸ್ತಿ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry