ಶುಕ್ರವಾರ, ಅಕ್ಟೋಬರ್ 18, 2019
28 °C

ಕೆನೆಪದರದವರು ಮೀಸಲಾತಿ ನಿರಾಕರಿಸಬೇಕು

Published:
Updated:

ಬಳ್ಳಾರಿ: ಮೀಸಲಾತಿ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾದ ಕೆನೆಪದರದ ದಲಿತ ಬಾಂಧವರು ಮೀಸಲಾತಿ ನಿರಾಕರಿಸಿದರೆ ಸಮಾಜದ ಎಲ್ಲ ದಲಿತರ ಉದ್ಧಾರ ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ ಕ್ಯಾತನ್ ಅಭಿಪ್ರಾಯ ಪಟ್ಟರು.ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕೆನೆಪದರದ ವರ್ಗದಲ್ಲಿದ್ದವರೂ ಮೀಸಲಾತಿ ಸೌಲಭ್ಯ ಪಡೆಯುತ್ತಿರುವು ದರಿಂದ ಅನೇಕ ದಲಿತರು ಆರ್ಥಿಕವಾಗಿ ಬದಲಾವಣೆ ಕಾಣದೆ, ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಹೀಗಾಗಿ ಆರ್ಥಿಕ ಅಭಿವೃದ್ದಿ ಹೊಂದಿದ ದಲಿತರು ಮೀಸಲಾತಿಸ ಸೌಲಭ್ಯ ನಿರಾಕರಿಸಬೇಕು ಎಂದು ಅವರು ಸಲಹೆ ನೀಡಿದರು.ಮೀಸಲಾತಿ ಸೌಲಭ್ಯವನ್ನು ಕೆಲವರು ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳು ತ್ತಿದ್ದಾರೆ. ಈ ಕುರಿತು ಸಮಾಜ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.ಎ.ಮಾನಯ್ಯ ಮಾತನಾಡಿ, ದಲಿತ ಸಮುದಾಯದಲ್ಲಿ ಹೋರಾಟದ ಕಿಚ್ಚನ್ನು ಹೊತ್ತಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟವನ್ನು ಮುಂದುವರೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ ಎಂದರು.ದಲಿತರು ಆರ್ಥಿಕವಾಗಿ ಮುಂದೆ ಬರಬೇಕಾದರೆ ಸರ್ಕಾರವು ಭೂ ಸುಧಾರಣೆ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೆ ತರಬೇಕು ಎಂದು ಪ್ರಾಂತ ರೈತ ಸಂಘದ ಮುಖಂಡ ವಿ.ಎಸ್. ಶಿವಶಂಕರ್ ಒತ್ತಾಯಿಸಿದರು.ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಫ್ ಪುರಸ್ಕೃತರಾದ ಎಚ್.ಬಿ. ಗಂಗಪ್ಪ ಹಾಗೂ ದಲಿತ ಕವಿ ಡಾ. ಜಯಸಿಂಗ್ ಅಲ್ವಾರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಜಿಲ್ಲಾ ಸಂಚಾಲಕ ಎಸ್.ಕೆಂಚಪ್ಪ, ಸುರೇಶ್ ಶೆಟ್ಟಿ, ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಲ್.ಮಾರೆಣ್ಣ, ಕಾಂಗ್ರೆಸ್ ಮುಖಂಡ ಮಾರುತಿ, ಬಿ ಶ್ರೀನಿವಾಸಮೂರ್ತಿ, ಸರಳಾದೇವಿ ಕಾಲೇಜಿನ ಪ್ರಾಧ್ಯಾಪಕ ಡಾ. ಹೊನ್ನೂರ್ ಅಲಿ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಟಿ.ದುರ್ಗಪ್ಪ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.  ಹುಸೇನಪ್ಪ ಸ್ವಾಗತಿಸಿದರು.

Post Comments (+)