ಕೆನೆಪದರ ಮಿತಿ ರೂ 3.5 ಲಕ್ಷಕ್ಕೆ ಹೆಚ್ಚಳ

7

ಕೆನೆಪದರ ಮಿತಿ ರೂ 3.5 ಲಕ್ಷಕ್ಕೆ ಹೆಚ್ಚಳ

Published:
Updated:

ಬೆಂಗಳೂರು: ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಪ್ರಮುಖ ಮಾನದಂಡವಾಗಿರುವ `ಕೆನೆಪದರ~ ಆದಾಯ ಮಿತಿಯನ್ನು 2 ಲಕ್ಷ ರೂಪಾಯಿಯಿಂದ ಮೂರೂವರೆ ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲು ಗುರುವಾರ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.ಹಿಂದುಳಿದ ವರ್ಗಗಳ ಕೆನೆಪದರ ಮಿತಿ ಹೆಚ್ಚಳ ಕುರಿತ ಪ್ರಸ್ತಾವ ದೀರ್ಘ ಕಾಲದಿಂದ ಸರ್ಕಾರದ ಮುಂದಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಹೊಸ ಮಿತಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 2ಎ, 2ಬಿ, 3ಎ ಮತ್ತು 3ಬಿ ಪ್ರವರ್ಗಗಳ ಅಡಿಯಲ್ಲಿ ಬರುವ 120ಕ್ಕೂ ಹೆಚ್ಚು ಜಾತಿಗಳ ಜನರಿಗೆ ಈ ನಿರ್ಣಯದಿಂದ ಅನುಕೂಲವಾಗಲಿದೆ.ಈವರೆಗೂ ಕೆನೆಪದರದ ಮಿತಿ ರೂ 2 ಲಕ್ಷ ಇತ್ತು. ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಅವಕಾಶ ಇರಲಿಲ್ಲ. ಮಧ್ಯಮ ವರ್ಗದ ಆದಾಯದ ಮಟ್ಟದಲ್ಲಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಕೆನೆಪದರದ ಮಿತಿಯನ್ನು 4.5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿ 2008ರಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯದಲ್ಲೂ ಇದೇ ರೀತಿ ಮಿತಿಯನ್ನು ರೂ 4.5 ಲಕ್ಷಕ್ಕೆ ಹೆಚ್ಚಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್.ದ್ವಾರಕಾನಾಥ್ ಶಿಫಾರಸು ಮಾಡಿದ್ದರು.ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಒಮ್ಮೆ ಈ ಪ್ರಸ್ತಾವ ಸಚಿವ ಸಂಪುಟ ಸಭೆಯ ಮುಂದೆ ಬಂದಿತ್ತು. ಆದರೆ, ಕೆನೆಪದರ ಮಿತಿ ಹೆಚ್ಚಿಸುವುದರಿಂದ ಹಿಂದುಳಿದ ವರ್ಗಗಳಲ್ಲಿ ಇರುವ ಕಡುಬಡವರಿಗೆ ಅನ್ಯಾಯವಾಗುತ್ತದೆ ಎಂದು ಕೆಲ ಸಚಿವರೇ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿತ್ತು.ಮೊಕದ್ದಮೆ ವಾಪಸ್: ಬಳ್ಳಾರಿ ವಿಮಾನ ನಿಲ್ದಾಣಕ್ಕಾಗಿ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಅಲ್ಲಿನ ಸಿರವಾರ ಗ್ರಾಮದ 40 ರೈತರ ವಿರುದ್ಧ ಹರಮದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಎರಡು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಜಮೀನಿನ ಸರ್ವೆ ನಡೆಸಲು ಹೋದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದ ರೈತರ ವಿರುದ್ಧ ಸರ್ಕಾರ ಈ ಮೊಕದ್ದಮೆ ದಾಖಲಿಸಿತ್ತು.ಕಾಯ್ದೆ ತಿದ್ದುಪಡಿ: ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 9ಕ್ಕೆ ತಿದ್ದುಪಡಿ ಪ್ರಸ್ತಾವಕ್ಕೂ ಸಂಪುಟ ಅನುಮೋದನೆ ನೀಡಿದೆ. ಈ ತಿದ್ದುಪಡಿಯ ಪ್ರಕಾರ ಯಾವುದೇ ಸಾರ್ವಜನಿಕ ನೌಕರನ ವಿರುದ್ಧ ದೂರು ದಾಖಲಾದರೆ ಅದರ ಪ್ರತಿಯನ್ನು ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಬೇಕಾಗುತ್ತದೆ. ಆರೋಪ ಎದುರಿಸುವ ಸಾರ್ವಜನಿಕ ನೌಕರನಿಗೆ ಮಾತ್ರ ಪ್ರತಿ ಕಳುಹಿಸುವ ವ್ಯವಸ್ಥೆ ಈಗ ಇದೆ. ಬಹುತೇಕ ಸಂದರ್ಭಗಳಲ್ಲಿ ದೂರಿನ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿಯೇ ಇರುವುದಿಲ್ಲ. ಈ ಲೋಪವನ್ನು ಸರಿಪಡಿಸಲು ತಿದ್ದುಪಡಿ ತರಲಾಗುತ್ತಿದೆ.ಮತ್ತೆರಡು ಖಾಸಗಿ ವಿ.ವಿ: ರಾಜ್ಯದಲ್ಲಿ ಇನ್ನೂ ಎರಡು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಮಣಿಪಾಲ ಸಮೂಹದಿಂದ ದೊಡ್ಡಬಳ್ಳಾಪುರ ಸಮೀಪ `ಮಣಿಪಾಲ ಖಾಸಗಿ ವಿಶ್ವವಿದ್ಯಾಲಯ~ ಸ್ಥಾಪನೆಗೆ ಒಪ್ಪಿಗೆ ದೊರೆತಿದೆ. ಕನಕಪುರ ತಾಲ್ಲೂಕಿನ ಜಕ್ಕಸಂದ್ರದಲ್ಲಿ `ಅರ್ಕ ವಿ.ವಿ~ ಎಂಬ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೂ ಸಂಪುಟ ಅನೋದನೆ ನೀಡಿದೆ.ಸರ್ಕಾರಿ ಔಷಧ ವಿಜ್ಞಾನ ಕಾಲೇಜುಗಳ ಬೋಧಕ ಸಿಬ್ಬಂದಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ವೇತನ ಶ್ರೇಣಿ ಜಾರಿ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ಒದಗಿಸಲು ರೂ 5 ಕೋಟಿ ಅನುದಾನ ಸೇರಿದಂತೆ ಹಲವು ಪ್ರಸ್ತಾವಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry