ಕೆಪಿಎಸ್‌ಸಿ ಅಕ್ರಮ ಕೃಷ್ಣ ಬಂಧನ

7

ಕೆಪಿಎಸ್‌ಸಿ ಅಕ್ರಮ ಕೃಷ್ಣ ಬಂಧನ

Published:
Updated:

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ಸ್‌ ಅಕ್ರಮ ನೇಮಕಾತಿ ಪ್ರಕರಣದ ಅರೋಪದ ಮೇಲೆ ರಾಜ್ಯ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣ ಅವರನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಅವರನ್ನು ನಗರದ ಎಂಟನೇ ಎಸಿಎಂಎಂ ನ್ಯಾಯಾಲಯಕ್ಕೆ ಮಧ್ಯಾಹ್ನ ಹಾಜರುಪಡಿಸಲಾಯಿತು. ಕೃಷ್ಣ ಅವರ ದತ್ತು ಪುತ್ರಿಯ ವಿವಾಹ ಸಮಾರಂಭ ಸೋಮವಾರ (ಅ.10) ಇರುವುದರಿಂದ ಜಾಮೀನು ನೀಡಬೇಕೆಂದು ಅವರ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಅ.12ರವರೆಗೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದರು. ಅ.12ರಂದು ಕೃಷ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.1998, 1999 ಮತ್ತು 2004ರಲ್ಲಿ ನಡೆದಿದ್ದ ಗೆಜೆಟೆಡ್ ಪ್ರೊಬೇಷನರ್ಸ್‌ (ಗ್ರೂಪ್ ಎ ಮತ್ತು ಬಿ) ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಖಲೀಲ್ ಅಹಮ್ಮದ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಈ ಮಧ್ಯೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದ ರಾಜ್ಯ ಸರ್ಕಾರ ಅಕ್ರಮದ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದಾಗಿ ಹೇಳಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಕಳೆದ ಡಿ.16ರಂದು ಆದೇಶ ಹೊರಡಿಸಿತ್ತು. ಪ್ರಕರಣದ ತನಿಖೆಯನ್ನು ಡಿಐಜಿ ದರ್ಜೆಯ ಅಧಿಕಾರಿಯೇ ನಡೆಸಬೇಕು ಎಂಬ ಸೂಚನೆಯನ್ನು ಸಹ ನೀಡಿತ್ತು.ಹೈಕೋರ್ಟ್ ಆದೇಶ ನೀಡಿದ ನಂತರವೂ ಸಿಐಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರಲಿಲ್ಲ. ಇದಕ್ಕೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತ್ತು. ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ವಹಿಸಬೇಕೆಂದು ಸಹ ನ್ಯಾಯಾಲಯ ಸೂಚನೆ ನೀಡಿತ್ತು. ಅದರಂತೆ ನ್ಯಾ. ಮಹಮ್ಮದ್ ಅನ್ವರ್ ಅವರು ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.ತನಿಖೆ ಆರಂಭಿಸಿದ್ದ ಸಿಐಡಿ ಪೊಲೀಸರು ಕಳೆದ ಆ.7ರಂದು ಕೃಷ್ಣ, ಕೆಎಎಸ್ ಅಧಿಕಾರಿಗಳಾದ ಆಶಾ ಪರ್ವೀನ್, ವೈ.ಬಿ.ಅರ್ಚನಾ ಹಾಗೂ ಸಲ್ಮಾ ಫಿರ್ದೋಸ್ ಅವರ ವಿರುದ್ಧ ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಕಲಿ ಜಾತಿ ಪ್ರಮಾಣ ಪತ್ರ ನೀಡಿಕೆ, ವಂಚನೆ, ನಕಲಿ ದಾಖಲೆ ಸೃಷ್ಟಿ, ಫೋರ್ಜರಿ ಮಾಡಿದ ಆರೋಪವನ್ನು ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಯಲ್ಲಿ ದಾಖಲಿಸಲಾಗಿತ್ತು.ತನಿಖೆ ಮುಂದುವರೆಸಿದ ಸಿಐಡಿ ಅಧಿಕಾರಿಗಳು ನೂರಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು. ಪ್ರಕರಣದ ತನಿಖಾಧಿಕಾರಿ ಆಗಿರುವ ಪದ್ಮನಯನ ಅವರು ಅ.4ರಂದು ವಿಚಾರಣೆಗೆ ಹಾಜರಾಗುಂತೆ ಕೃಷ್ಣ ಅವರಿಗೆ ನೋಟಿಸ್ ನೀಡಿದ್ದರು. ಆದರೆ ಅಂದು ಖಾಸಗಿ ಕೆಲಸ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕೃಷ್ಣ ಅವರು ಹೇಳಿದ್ದರು. ಆದ್ದರಿಂದ ಶುಕ್ರವಾರ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಬೆಳಿಗ್ಗೆ 10.30ರ ಸುಮಾರಿಗೆ ಕೃಷ್ಣ ಅವರು ಪದ್ಮನಯನ ಅವರ ಕಚೇರಿಯಲ್ಲಿ ಹಾಜರಾಗಿದ್ದರು. ಆ ನಂತರ ಅವರನ್ನು ಬಂಧಿಸಲಾಯಿತು.ನೇಮಕಾತಿಯ ಭಾರಿ ಹಗರಣ: 2006ರ ನ.26ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿದ್ದ `ಪ್ರಜಾವಾಣಿ~ ಪತ್ರಿಕೆಯು ನೇಮಕಾತಿಯ ಭಾರಿ ಹಗರಣವನ್ನು ಬಯಲಿಗೆಳೆದಿತ್ತು. ಒಟ್ಟು ನೇಮಕಾತಿಯಲ್ಲಿ ಒಂದೇ ಜಾತಿಯ ಹೆಚ್ಚಿನ ಅಭ್ಯರ್ಥಿಗಳ ಆಯ್ಕೆ, ಸಾಮಾನ್ಯ ವರ್ಗದ ಕೋಟಾವನ್ನು 3ಎಗೆ ಪರಿವರ್ತಿಸಿ ನೇಮಕ ಮಾಡಿದ ವಿಷಯವನ್ನು ಬಹಿರಂಗಗೊಳಿಸಿತ್ತು.1998ರಲ್ಲಿ ಮೊದಲು 415 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಆದರೆ ಆ ನಂತರ ಹುದ್ದೆಯ ಸಂಖ್ಯೆಯನ್ನು 383ಕ್ಕೆ ಇಳಿಸಲಾಗಿತ್ತು. 1999ರಲ್ಲಿ ಒಟ್ಟು 190 ಹುದ್ದೆಗೆ ಅರ್ಜಿ ಕರೆದು 191ಕ್ಕೆ ಏರಿಸಲಾಗಿತ್ತು. 2004ರಲ್ಲಿ 169 ಹುದ್ದೆಗಳನ್ನು 152ಕ್ಕೆ ಇಳಿಸಿದ್ದ ವಿಷಯವನ್ನು ಖಲೀಲ್ ಅಹಮ್ಮದ್ ಅವರು ಹೈಕೋರ್ಟ್ ಗಮನಕ್ಕೆ ತಂದಿದ್ದರು.5.98 ಲಕ್ಷ ಜಪ್ತಿ

`ಕೃಷ್ಣ ಅವರ ವಿರುದ್ಧದ ಕೆಲ ಆರೋಪಗಳು ತನಿಖೆಯ ವೇಳೆ ರುಜುವಾತಾಗಿರುವುದರಿಂದ ಅವರನ್ನು ಬಂಧಿಸಲಾಯಿತು. ಕೃಷ್ಣ ಅವರ ಮನೆಯಲ್ಲಿ ಸಿಐಡಿ ಸಿಬ್ಬಂದಿ ತಪಾಸಣೆ ನಡೆಸಿದಾಗ ಐದು ಲಕ್ಷ ರೂಪಾಯಿ ನಗದು ಸಿಕ್ಕಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ತನಿಖೆಯನ್ನು ಚುರುಕುಗೊಳಿಸಲಾಗಿದೆ~

-ಶಂಕರ ಬಿದರಿ, ಸಿಐಡಿ ಡಿಜಿಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry