ಭಾನುವಾರ, ಜನವರಿ 19, 2020
23 °C

ಕೆಪಿಎಸ್‌ಸಿ: ನಾಮಕಾವಾಸ್ತೆ ಸಂದರ್ಶನ!

ಪ್ರಜಾವಾಣಿ ವಾರ್ತೆ / ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಕೆಪಿಎಸ್‌ಸಿ: ನಾಮಕಾವಾಸ್ತೆ ಸಂದರ್ಶನ!

ಬೆಂಗಳೂರು: ಕೆಎಎಸ್‌ ಮುಖ್ಯ ಪರೀಕ್ಷೆ ನಡೆಯುವ ಹೊತ್ತಿಗೆ ‘ಯಾರಿಗೆ ಕೆಲಸ ಕೊಡಬೇಕು’ ಎನ್ನುವುದು ಬಹುತೇಕ ನಿರ್ಧಾರ­ವಾಗಿರುತ್ತದೆ. ಹೀಗಾಗಿ ಸಂದರ್ಶನ ‘ಬರಿ ಔಪಚಾರಿಕ’ ಎನ್ನು­ವಂತಾಗಿದೆ. ತಮಗೆ ಬೇಕಾದವರಿಗೆ ಅಂಕಗಳನ್ನು ಹೆಚ್ಚಿಸುವುದಕ್ಕೆ ಸಂದರ್ಶನವೊಂದು  ಸಾಧನ ಎನ್ನುವಂತೆ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ನಡೆದು­ಕೊಂಡಿದ್ದಾರೆ ಎನ್ನುವುದನ್ನು ಸಿಐಡಿ ಪೊಲೀಸರು ತಮ್ಮ ವರದಿಯಲ್ಲಿ ಸ್ಪಷ್ಟ­ವಾಗಿ ಹೇಳಿದ್ದಾರೆ. ಅದಕ್ಕೆ ತಕ್ಕ ದಾಖಲೆ­ಗಳನ್ನೂ ಸಂಗ್ರಹಿಸಿದ್ದಾರೆ. ವರದಿಯ ಜೊತೆ ಈ ಎಲ್ಲ ದಾಖಲೆಗಳೂ ಇವೆ.ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 1997ರ ಜುಲೈ 21ರಂದು ಹೊರ­ಡಿಸಿದ ಡಿಪಿಎಆರ್‌ 07 ಎಸ್‌­ಆರ್‌­ಆರ್‌ 94 ಅಧಿಸೂಚನೆ, ‘ಅಭ್ಯರ್ಥಿ ಯಾವ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾನೋ ಆ ಹುದ್ದೆಗೆ ಆತ ವೈಯಕ್ತಿಕವಾಗಿ ಸಮರ್ಥನಿದ್ದಾನೋ ಇಲ್ಲವೋ ಎನ್ನು­ವುದನ್ನು ಸಂದರ್ಶನದ ಸಂದರ್ಭದಲ್ಲಿ ಅಳೆಯಬೇಕು.ಮಾನಸಿಕ ಸಾಮರ್ಥ್ಯ, ವಿಮರ್ಶಾ ಸಾಮರ್ಥ್ಯ, ಸ್ಪಷ್ಟ ಹಾಗೂ ತಾರ್ಕಿಕ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ, ನಾಯಕತ್ವ, ಸಾಮಾಜಿಕ ಬದ್ಧತೆ ಮುಂತಾದವುಗಳನ್ನು ಅಳೆಯ­ಬೇಕು’ ಎಂದು ಹೇಳುತ್ತದೆ. ಆದರೆ, 2011ರ ಗೆಜೆಟೆಡ್‌ ಅಧಿಕಾರಿಗಳ ನೇಮ­ಕಾತಿ ಸಂದರ್ಭದಲ್ಲಿ ನಡೆದ ಸಂದರ್ಶನ­ದಲ್ಲಿ ಈ ರೀತಿಯ ಕಸರತ್ತನ್ನು ಯಾವುದೇ ಸದಸ್ಯರು ಮಾಡಿಲ್ಲ. ಕೇವಲ 3–4 ನಿಮಿಷದಲ್ಲಿ ಸಂದರ್ಶನವನ್ನು ಮುಗಿಸಲಾಗಿದೆ. ಒಂದೆರಡು ವೈಯಕ್ತಿಕ ಸರಳ ಪ್ರಶ್ನೆಗಳನ್ನು ಕೇಳಿ ಬೇಕಾಬಿಟ್ಟಿ ಅಂಕ ನೀಡಲಾಗಿದೆ ಎಂದು ಸಿಐಡಿ ಅಭಿಪ್ರಾಯಪಟ್ಟಿದೆ.ಇದಕ್ಕೆ ಸಂಬಂಧಿಸಿದಂತೆ ಸಿಐಡಿ ವರದಿಯಲ್ಲಿ 25 ಮಂದಿಯ ಸಂದ­ರ್ಶನದ ವಿವರಗಳನ್ನು ಪಟ್ಟಿ ಮಾಡ­ಲಾಗಿದೆ. ಹೀಗೆ ಸಂದರ್ಶನ ಬೇಗ ಮುಗಿಸಿದ ಅಭ್ಯರ್ಥಿಗಳಿಗೆ 80ಕ್ಕಿಂತ ಹೆಚ್ಚು ಅಂಕ ನೀಡಿಲ್ಲ. ಕೆಪಿಎಸ್‌ಸಿ ಸದಸ್ಯರಾದ ಡಾ.­ಮಂಗಳಾ ಶ್ರೀಧರ್‌, ಕೃಷ್ಣಪ್ರಸಾದ್‌, ಮಹಾದೇವ ಮತ್ತು ದಯಾಶಂಕರ್‌ ಅವರು ಡಾ.  ಎಚ್‌.ಪಿ.ಎಸ್‌.ಮೈತ್ರಿ ಅವರ ಮೌಖಿಕ ಸಂದರ್ಶನವನ್ನು  3– 4 ನಿಮಿಷಗಳಲ್ಲಿ ಮುಗಿಸಿದ್ದಾರೆ. ನೀಡಿದ ಅಂಕ 75. ಅದೇ ರೀತಿ ಚಿದಾನಂದ­ಸ್ವಾಮಿ ಎಂಬ ಅಭ್ಯರ್ಥಿಯನ್ನು ಕನಿರಾಂ, ರಾಮಕೃಷ್ಣ, ಡಾ.ಮಂಗಳಾ ಶ್ರೀಧರ್‌ 3 ರಿಂದ 4 ನಿಮಿಷಗಳ ಕಾಲ ಸಂದರ್ಶನ ಮಾಡಿದ್ದಾರೆ.

ನೀಡಿದ ಅಂಕ 50. ಚಂದ್ರಶೇಖರ ಗಾಲಿ ಅವರನ್ನು ರಾಮ­ಕೃಷ್ಣ, ಕನಿರಾಂ, ಮಂಗಳಾ ಶ್ರೀಧರ್‌ ಅವರು 3ರಿಂದ 4 ನಿಮಿಷ ಸಂದರ್ಶನ ಮಾಡಿದ್ದಾರೆ. ನೀಡಿದ ಅಂಕ 50. ಪ್ರೀತಿ ಚಂದ್ರಶೇಖರ್‌ ಅವರನ್ನು ಕನಿರಾಂ ಮತ್ತು ಇತರರು 3ರಿಂದ 4 ನಿಮಿಷಗಳ ಕಾಲ ಸಂದರ್ಶನ ಮಾಡಿದ್ದಾರೆ. ನೀಡಿದ ಅಂಕ 65. ಡಾ.ಡಿ.ಎ.ನವೀನ್‌ಕುಮಾರ್‌ ಅವರನ್ನು ಗೋನಾಳ ಭೀಮಪ್ಪ ಮತ್ತು ಇತರರು 10 ನಿಮಿಷ ಸಂದರ್ಶನ ಮಾಡಿದ್ದಾರೆ.

ನೀಡಿದ ಅಂಕ 75. ಎಂ.ಎಸ್‌. ಪರಮೇಶ್ವರ ಅವರನ್ನು ಕೃಷ್ಣ­ಪ್ರಸಾದ್‌, ರಂಗಮೂರ್ತಿ ಮುಂತಾದ­ವರು 10 ನಿಮಿಷ ಸಂದರ್ಶನ ಮಾಡಿದ್ದು ನೀಡಿದ ಅಂಕ 60. ಜಿ.ಅಜೇಯ್‌ ಅವರನ್ನು ಕೃಷ್ಣಪ್ರಸಾದ್‌ ಮತ್ತು ರಂಗಮೂರ್ತಿ ಹಾಗೂ ಇತರರು 4ರಿಂದ 5 ನಿಮಿಷ ಸಂದರ್ಶನ ಮಾಡಿದ್ದು ನೀಡಿದ ಅಂಕ 55. ಪ್ರದೀಪ­ಕುಮಾರ್‌ ಅವರನ್ನು ಮಹಾದೇವ್‌, ದಯಾ ಶಂಕರ್‌ ಇತರರು 4ರಿಂದ 5 ನಿಮಿಷ ಸಂದರ್ಶನ ಮಾಡಿ ನೀಡಿದ ಅಂಕ 50.  ‘ಹೀಗೆ ಬಹುತೇಕ ಅಭ್ಯರ್ಥಿಗಳಿಗೆ ಅವರ ವೈಯಕ್ತಿಕ ವಿಷಯ, ಸ್ವಂತ ಊರು ಮುಂತಾದವುಗಳ ಬಗ್ಗೆ ಸರಳ ಪ್ರಶ್ನೆಗಳನ್ನು ಕೇಳಿ ಸಾಗಿಹಾಕಲಾಗಿದೆ. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ಕಾನೂನು ಬಾಹಿರ ಬೇಡಿಕೆಗಳಿಗೆ ಒಪ್ಪಿಗೆ ನೀಡದೇ ಇರುವ ಬಹುತೇಕ ಅಭ್ಯರ್ಥಿ­ಗಳಿಗೆ ಕಡಿಮೆ ಅಂಕ ನೀಡಲಾಗಿದೆ ಹಾಗೂ ಇಷ್ಟೇ ಅಂಕ ನೀಡಬೇಕು ಎನ್ನುವುದು ಮೊದಲೇ ನಿರ್ಧಾರವಾ­ಗಿತ್ತು.

ಹಣ ಕೊಟ್ಟ ಅಭ್ಯರ್ಥಿಗಳಿಗೆ ಮಾತ್ರ ಹೆಚ್ಚಿನ ಅಂಕ ನೀಡಲಾಗಿದೆ. ಯಾರಿಗೆ ಎಷ್ಟು ಅಂಕ ನೀಡಿದರೆ ಅವರಿಗೆ ಸಂಭವನೀಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ನೀಡಬಹುದು ಹಾಗೂ ಯಾರಿಗೆ ಕಡಿಮೆ ಅಂಕ ನೀಡಿದರೆ ತಮಗೆ ಬೇಕಾದ ಅಭ್ಯರ್ಥಿ­ಗಳಿಗೆ ತೊಂದರೆ ಆಗದಂತೆ ನೋಡಿ­ಕೊಳ್ಳಬಹುದು ಎನ್ನುವುದನ್ನು ಲೆಕ್ಕಾ­ಚಾರ ಮಾಡಿ ಅಂಕ ನೀಡ­ಲಾಗಿದೆ’ ಎನ್ನುವುದೂ ಸಿಐಡಿ ವರದಿ­ಯಲ್ಲಿದೆ.ಮೀಸಲಾತಿ, ಆದಾಯ ಪ್ರಮಾಣ ಪತ್ರ ಮುಂತಾದವುಗಳನ್ನು ಸಂದರ್ಶನದ ಸಂದರ್ಭದಲ್ಲಿ ಒದಗಿಸಿದ್ದರೂ ಅತ್ಯಂತ ಕ್ಷುಲ್ಲಕ ಕಾರಣ ನೀಡಿ ಅದನ್ನು ತಿರಸ್ಕರಿಸ­ಲಾಗಿದೆ. ಕೆಪಿಎಸ್‌ಸಿ ನಿಯಮ­ಗಳ ಪ್ರಕಾರ ಅವಕಾಶ ಇದ್ದರೂ ಆ ಅಭ್ಯರ್ಥಿ­ಗಳಿಗೆ ಸರಿಯಾದ ದಾಖಲೆಗ­ಳನ್ನು ಒದಗಿಸಲು ಸಮಯವನ್ನೇ ನೀಡಲಾ­ಗಿಲ್ಲ. ಅವರ ಕೋರಿಕೆಯನ್ನೂ ತಿರ­ಸ್ಕರಿಸ­ಲಾಗಿದೆ. ಅವರ ಕೆಟೆಗರಿಯನ್ನೂ ಬದಲಾ­ಯಿ­ಸಲಾಗಿದೆ. ಆದರೆ, ಮೊದಲೇ ಹೊಂದಾಣಿಕೆ ಮಾಡಿಕೊಂಡ ಅಭ್ಯರ್ಥಿಗಳ ದಾಖಲೆಗಳನ್ನು ಮರು ಮಾತನಾಡದೆ ಒಪ್ಪಿಕೊಳ್ಳಲಾಗಿದೆ. ಅವರಿಗೆ ಅರ್ಹತೆ ಇಲ್ಲದಿದ್ದರೂ ಸಂದರ್ಶನಕ್ಕೆ ಹಾಜರಾಗುವ ಅವಕಾಶ ಕಲ್ಪಿಸಲಾಗಿದೆ.ಮಂಜಾ ನಾಯ್ಕ್‌ ಎಂಬ ಅಭ್ಯರ್ಥಿ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಬೇರೆ ದಿನಾಂಕ ನಮೂದಾಗಿರುವ ಮೂಲ ಪ್ರತಿಯ ಜೊತೆ ಹಾಜರು ಪಡಿಸಿ­ದ್ದರೂ ಅವರ ಬೇಡಿಕೆ ತಿರಸ್ಕರಿಸ­ಲಾಗಿದೆ. ಆದರೆ, ಶಿಲ್ಪಾ ಭಜಂತ್ರಿ ಮತ್ತು ಡಿ.ಶಿಲ್ಪಾ ಅವರು ಇದೇ ರೀತಿಯ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಬೇರೆ ದಿನಾಂಕ ನಮೂದಾಗಿರುವ ಮೂಲ ಪ್ರತಿ­ಯೊಂದಿಗೆ ಸಲ್ಲಿಸಿದ್ದರೂ ಅವುಗ­ಳನ್ನು ಒಪ್ಪಿಕೊಳ್ಳಲಾಗಿದೆ.ಎಂ.ಎಸ್‌. ಚಿಕ್ಕಸಿದ್ದಯ್ಯ ಅವರು ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಿದ್ದರೂ ‘ಇದು ಕೊನೆಯ ದಿನಾಂಕದ ನಂತರ ನೀಡಿದ ನಿರಾಕ್ಷೇಪಣಾ ಪತ್ರ’ ಎಂದು ತಿರಸ್ಕರಿಸಲಾಗಿದೆ. ಆದರೆ, ಎಚ್‌.ಆರ್‌.­ಮೋಹನ್‌ಕುಮಾರ್‌ ಮತ್ತು ಬಿ.ಮಂಗಳಾ ಅವರು ಸಂದರ್ಶನದ ಸಮಯದಲ್ಲಿ ನಿರಾಕ್ಷೇಪಣಾ ಪತ್ರ ಸಲ್ಲಿಸಿದ್ದರೂ, ಅರ್ಜಿಯ ಜೊತೆಗೆ ಈ ಪತ್ರವನ್ನು ಲಗತ್ತಿಸದೇ ಇದ್ದರೂ ಅವರಿಗೆ ಅವಕಾಶ ನೀಡಲಾಗಿದೆ.27 ಅಭ್ಯರ್ಥಿ­ಗಳು ಸಂದರ್ಶನದ ಸಮಯದಲ್ಲಿ ಸಂಬಂಧಪಟ್ಟ ದಾಖಲಾತಿಗಳನ್ನು ಹಾಜರು ಪಡಿಸದೇ ಇದ್ದರೂ ಅವರಿಗೆ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಬರೀಷ್‌ (ನೋಂದಣಿ ಸಂಖ್ಯೆ 13406) ಎಂಬ ಅಭ್ಯರ್ಥಿ ವರ್ಗೀ­ಕರಣ–1ರ ಮೀಸಲಾತಿ ಪ್ರಮಾಣ ಪತ್ರವನ್ನು ಸಲ್ಲಿಸದೇ ಇದ್ದರೂ ಅವರಿಗೆ ಸಾಮಾನ್ಯ ವರ್ಗದಲ್ಲಿ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಇನ್ನೂ ಅಚ್ಚರಿಯ ವಿಷಯ ಎಂದರೆ ಅಂಬರೀಷ್‌ ಅವರಿಗೆ ಸಾಮಾನ್ಯ ವರ್ಗದಲ್ಲಿ ಮುಖ್ಯ ಪರೀಕ್ಷೆಯನ್ನು ಬರೆಯುವಷ್ಟು ಕಟಾಫ್‌ ಅಂಕವೇ ಇರಲಿಲ್ಲ. ಮುಖ್ಯ ಪರೀಕ್ಷೆ ಬರೆಯಲು ಅರ್ಹನಲ್ಲದ ಅಭ್ಯರ್ಥಿ­ಯೊಬ್ಬನಿಗೆ ಸಂದರ್ಶನಕ್ಕೂ ಅವಕಾಶ ನೀಡಿ ಅತಿ ಹೆಚ್ಚಿನ ಅಂಕ ನೀಡಲಾಗಿದೆ. ಇದು ಕಾನೂನು ಬಾಹಿರ ಹಾಗೂ ನಿಯಮಬಾಹಿರ ಎಂದು ಸಿಐಡಿ ವರದಿ­ಯಲ್ಲಿ ಹೇಳಲಾಗಿದೆ.

(ಈ ಬಾರಿಯೂ ನಡೆದಿದೆ ‘ತಾಳಿಭಾಗ್ಯ’: ನಾಳಿನ ಸಂಚಿಕೆಯಲ್ಲಿ)

ಪ್ರತಿಕ್ರಿಯಿಸಿ (+)