ಶುಕ್ರವಾರ, ಮೇ 14, 2021
25 °C

ಕೆಪಿಎಸ್‌ಸಿ ನೇಮಕಾತಿ ಪಟ್ಟಿಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ನಡೆಸಿದ ಸಂದರ್ಶನದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳ ಬಗ್ಗೆ ಉನ್ನತಮಟ್ಟ ತನಿಖೆಗೆ ಆದೇಶಿಸಲಾಗುವುದು. ತನಿಖೆ ಪೂರ್ಣಗೊಳ್ಳುವವರೆಗೂ ಆಯ್ಕೆ ಪಟ್ಟಿ ತಡೆಹಿಡಿಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.ಕೆಪಿಎಸ್‌ಸಿಯಲ್ಲಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌ನ ಎಂ.ಸಿ.ನಾಣಯ್ಯ ಮತ್ತು ಬಸವರಾಜ ಹೊರಟ್ಟಿ ಅವರು ನಿಯಮ 59ರ ಅಡಿಯಲ್ಲಿ ನಡೆಸಿದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ತನಿಖೆಯ ತೀರ್ಮಾನವನ್ನು ಘೋಷಿಸಿದರು. ಅಕ್ರಮ ನಡೆದಿರುವುದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆಯನ್ನೂ ನೀಡಿದರು.ಸಂದರ್ಶನದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಸಂದರ್ಶನಕ್ಕೆ ಹಾಜರಾದ ಹಲವು ಅಭ್ಯರ್ಥಿಗಳು ದೂರು ನೀಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಲ್ಲೂ ಈ ಕುರಿತು ಸಾಕಷ್ಟು ಮಾಹಿತಿ ಇದೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಏನೋ ನಡೆದಿದೆ ಎಂಬ ಸಂಶಯ ಸಾರ್ವಜನಿಕರಲ್ಲಿ ವ್ಯಾಪಕವಾಗಿದೆ. ಈ ಸಂಶಯವನ್ನು ಹೋಗಲಾಡಿಸದೇ ಇದ್ದರೆ ಆಯೋಗಕ್ಕೆ ಗೌರವವೇ ಇರುವುದಿಲ್ಲ ಎಂದರು.`ಭ್ರಷ್ಟಾಚಾರವನ್ನು ಯಾರೇ ಮಾಡಿದರೂ ನಮ್ಮ ಸರ್ಕಾರ ಸಹಿಸುವುದಿಲ್ಲ. ಕೆಪಿಎಸ್‌ಸಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದ ಕುರಿತು ಕೇವಲ ಮಾತನಾಡಿದರೆ ಸಾಲದು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಇರುವ ಅಧಿಕಾರವನ್ನು ಚಲಾಯಿಸಿ ನ್ಯಾಯ ದೊರಕಿಸುವ ಪ್ರಯತ್ನ ಮಾಡುತ್ತದೆ' ಎಂದು ಸದನಕ್ಕೆ ವಾಗ್ದಾನ ನೀಡಿದರು.ಕೆಪಿಎಸ್‌ಸಿ ಒಂದು ಸಾಂವಿಧಾನಿಕ ಸಂಸ್ಥೆ. ಅದರ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ. ಆದರೆ, ಭ್ರಷ್ಟಾಚಾರದಂತಹ ಪ್ರಕರಣಗಳು ಬಯಲಿಗೆ ಬಂದಾಗ ಸರ್ಕಾರ ಮೂಕ ಪ್ರೇಕ್ಷಕನಂತೆ ಇರಲು ಸಾಧ್ಯವಿಲ್ಲ. ಅಲ್ಲದೇ ಕೆಪಿಎಸ್‌ಸಿಯಲ್ಲಿಯ ಬೆಳವಣಿಗೆಗಳನ್ನು ಜನಸಾಮಾನ್ಯರು ಸರ್ಕಾರದ ಜೊತೆ ತಳಕು ಹಾಕಿ ನೋಡುತ್ತಾರೆ ಎಂದು ಅಭಿಪ್ರಾಯಪಟ್ಟರು.ಶೀಘ್ರದಲ್ಲಿ ತನಿಖೆಗೆ ಆದೇಶ: ಪ್ರಕರಣದ ಕುರಿತು ಅಡ್ವೊಕೇಟ್ ಜನರಲ್ ಅವರಿಂದ ಅಭಿಪ್ರಾಯ ಪಡೆಯಲಾಗಿದೆ. ಉನ್ನತಮಟ್ಟದ ಸಂಸ್ಥೆಯಿಂದ ಈ ಸಂಬಂಧ ತನಿಖೆಗೆ ಆದೇಶಿಸಲಾಗುವುದು. ಎರಡು ಅಥವಾ ಮೂರು ವಾರದೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕಾಲಮಿತಿ ವಿಧಿಸಲಾಗುವುದು. ಅಕ್ರಮ ನಡೆದಿರುವುದು ತನಿಖೆಯಲ್ಲಿ ಸಾಬೀತಾದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.`ಮೇ 27ಕ್ಕೆ ಸಂದರ್ಶನ ಪ್ರಕ್ರಿಯೆ ಮುಗಿದಿದೆ. ಈವರೆಗೂ ಕೆಪಿಎಸ್‌ಸಿ ಅಂತಿಮ ಆಯ್ಕೆಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿಲ್ಲ. ಪಟ್ಟಿ ಬಂದರೂ ತನಿಖೆ ಪೂರ್ಣಗೊಳ್ಳುವವರೆಗೆ ಅದನ್ನು ತಡೆ ಹಿಡಿಯಲಾಗುವುದು. ತನಿಖಾ ವರದಿ ಕೈಸೇರಿದ ಬಳಿಕವೇ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನಕ್ಕೆ ಬರಲಾಗುವುದು' ಎಂದು ತಿಳಿಸಿದರು.ಸಂದರ್ಶನಕ್ಕೆ 200 ಅಂಕಗಳನ್ನು ನಿಗದಿ ಮಾಡಿರುವುದರಿಂದ ಅಂಕಗಳ ಖರೀದಿಗೆ ಅವಕಾಶ ಇದೆ. ಸಂದರ್ಶನಕ್ಕೆ ನಿಗದಿ ಮಾಡುವ ಅಂಕಗಳನ್ನು ಕಡಿತ ಮಾಡಿದಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ಅಂಕ ಕಡಿತ ಸಾಧ್ಯತೆ ಕುರಿತು ಪರಿಶೀಲನೆ ನಡೆಸಲಾಗುವುದು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಸಂದರ್ಶನ ಮುಗಿದ ಬಳಿಕವೇ ಲಿಖಿತ ಪರೀಕ್ಷೆಯ ಅಂಕಗಳನ್ನು ಪ್ರಕಟಿಸಲಾಗುತ್ತದೆ. ಇದೇ ಮಾದರಿಯನ್ನು ಕೆಪಿಎಸ್‌ಸಿ ಅಳವಡಿ ಸಿಕೊಂಡರೆ ಅಕ್ರಮಕ್ಕೆ ಕಡಿವಾಣ ಬೀಳುತ್ತದೆ. ಈ ಬಗ್ಗೆಯೂ ಅಧ್ಯಯನ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾ ಗುವುದು ಎಂದರು.ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಇಬ್ಬರು ಎಂಜಿನಿಯರುಗಳು ಮತ್ತು ವಿಧಾನಮಂಡಲ ಸಚಿವಾಲಯದ ಒಬ್ಬ ನೌಕರ ಕೆಪಿಎಸ್‌ಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಗಳನ್ನು ಪ್ರತಿಪಕ್ಷ ಸದಸ್ಯರು ಸದನದಲ್ಲಿ ಪ್ರಸ್ತಾಪಿಸಿದರು. ಪರಿಶೀಲನೆ ನಡೆಸಿ ಶೀಘ್ರದಲ್ಲಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವ ಭರವಸೆ ಸಿಎಂ ನೀಡಿದರು.ಡಾ.ಮೈತ್ರಿ ಪ್ರಕರಣ ಪ್ರಸ್ತಾಪ: ವಿಷಯ ಪ್ರಸ್ತಾಪಿಸಿ ಮಾತನಾಡಿದ ನಾಣಯ್ಯ, ಲಿಖಿತ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಯರಲ್ಲಿ ಅತ್ಯಧಿಕ ಅಂಕ ಗಳಿಸಿದ್ದು, ಸಂದರ್ಶನದಲ್ಲಿ ಕಡಿಮೆ ಅಂಕ ದೊರೆತಿರುವ ಡಾ.ಮೈತ್ರಿ ಎಚ್.ಪಿ.ಎಸ್. ಅವರ ಪ್ರಕರಣ ಉಲ್ಲೇಖಿಸಿದರು.

ಈ ಪ್ರಕರಣದಲ್ಲಿ ಆಯೋಗದ ಸದಸ್ಯೆಯೊಬ್ಬರು ನೇರವಾಗಿ ಅಭ್ಯರ್ಥಿಯನ್ನು ತಮ್ಮ ಕಚೇರಿಗೆ ಕರೆಸಿಕೊಂಡು 70 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಸದಸ್ಯೆಯ ಆಪ್ತ ಕಾರ್ಯದರ್ಶಿ ಕೂಡ ನಿರಂತರವಾಗಿ ದೂರವಾಣಿ ಕರೆಮಾಡಿ ಹಣ ಕೇಳಿರುವುದಾಗಿ ಅಭ್ಯರ್ಥಿಯೇ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದರು.`ಹಣ ಕೇಳಿದ್ದ ಸದಸ್ಯೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲದಿಂದ ತಾನು ಆಯೋಗದ ಸದಸ್ಯರ ಹುದ್ದೆ ಪಡೆದಿರುವುದಾಗಿ ತನ್ನ ಬಳಿ ಹೇಳಿಕೊಂಡಿದ್ದರು ಎಂದು ಮೈತ್ರಿ ಹೇಳಿದ್ದಾರೆ. ಹಣ ನೀಡದೇ ಇದ್ದರೆ ಆರ್‌ಎಸ್‌ಎಸ್ ಹೇಳುವವರಿಗೆ ಉನ್ನತಮಟ್ಟದ ಹುದ್ದೆ ನೀಡುವುದಾಗಿಯೂ ತಿಳಿಸಿದ್ದರು ಎಂಬುದು ಬಹಿರಂಗವಾಗಿದೆ. ಈ ಎಲ್ಲ ವಿಷಯಗಳ ತನಿಖೆ ನಡೆಯಬೇಕು' ಎಂದರು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್, ಬೆಂಗಳೂರು ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ವಿಧಾನ ಮಂಡಲ ಸಚಿವಾಲಯದ ನೌಕರನೊಬ್ಬ ಈ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಬಗ್ಗೆ ಮಾಹಿತಿ ಇದೆ.ದೃಶ್ಯ ಮಾಧ್ಯಮಗಳು ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲೂ ಸಾಕ್ಷ್ಯಗಳು ದೊರೆತಿವೆ. ಸರ್ಕಾರ ತಕ್ಷಣವೇ ಈ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.