ಕೆಪಿಸಿಸಿ ಅಧ್ಯಕ್ಷರೊಂದಿಗೆ ಚಕಮಕಿ

7

ಕೆಪಿಸಿಸಿ ಅಧ್ಯಕ್ಷರೊಂದಿಗೆ ಚಕಮಕಿ

Published:
Updated:

ಪಿರಿಯಾಪಟ್ಟಣ:ಜಿ.ಪಂ.ಚುನಾವಣೆ ಯಲ್ಲಿ ಪಕ್ಷ ವಿರೋಧಿ ಚುಟವಟಿಕೆ ನಡೆಸಿರುವ ಕೆಪಿಸಿಸಿ ಸದಸ್ಯ ಎಚ್.ಡಿ. ಗಣೇಶ್‌ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸುವಂತೆ ಒತ್ತಾಯಿಸಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮತ್ತು ಸಂಸದ ಎಚ್. ವಿಶ್ವನಾಥ್‌ರೊಂದಿಗೆ ಕಾರ್ಯ ಕರ್ತರು ಮಾತಿನ ಚಕಮಕಿ ನಡೆಸಿದ ಘಟನೆ ಬುಧವಾರ ಜರುಗಿತು. ಮಡಿಕೇರಿಯಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಸೇರಿದಂತೆ ಹಲವು ಪದಾಧಿಕಾರಿಗಳು ಪಟ್ಟಣದಿಂದ ಹಾದು ಹೋಗುವ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ.ಮತ್ತು ತಾ.ಪಂ.ಚುನಾವಣೆ ಸಮಯದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಹಣ ನೀಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ಎಚ್.ಡಿ.ಗಣೇಶ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪರಾಜಿತ ಅಭ್ಯರ್ಥಿ ಮತ್ತು ಮಾಜಿ ಕೆಪಿಸಿಸಿ ಸದಸ್ಯ ಡಿ.ಎ.ಜವರಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಒತ್ತಾಯಿಸಿದರು.ಇಲ್ಲಿ ಅದನ್ನು ನಿರ್ಧರಿಸಲು ಸಾಧ್ಯವಿಲ್ಲ. ಸಮಿತಿ ರಚಿಸಿ ವರದಿ ತರಿಸಿಕೊಂಡು ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಮಾಜಾಯಿಷಿ ನೀಡಿದರು. ಇದರಿಂದ ತೃಪ್ತರಾಗದ ಕೆಲವು ಕಾರ್ಯಕರ್ತರು ಪಕ್ಷಕ್ಕೆ ಸೇರಿ ಆರು ತಿಂಗಳಾಗದಿದ್ದರೂ ಕೆಪಿಸಿಸಿ ಸದಸ್ಯರಾಗಿ ಮಾಡಲಾಯಿತು. ಇದು ಮೂಲ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಚ್.ಡಿ. ಗಣೇಶ್ ಪರ ವಕಾಲತ್ತು ವಹಿಸಿದ ಸಂಸದ ಎಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿದ ಕಾರ್ಯಕರ್ತರು ತಾಲ್ಲೂಕಿ ನಲ್ಲಿ ಪಕ್ಷ ಅಧೋಗತಿಗೆ ಇಳಿಯಲು ನೀವೇ ಕಾರಣ ಏಕ ವಚನದಲ್ಲಿ ತರಾಟೆಗೆ ತೆಗೆದು ಕೊಂಡರು.ಮಾಜಿ ಜಿ.ಪಂ.ಸದಸ್ಯ ಎಚ್.ಆರ್. ಗೋಪಾಲ್ ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೊಂದಿಗೆ ಶಾಸಕರಾದ ದಿನೇಶ್ ಗುಂಡುರಾವ್, ಹ್ಯಾರಿಸ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾನಾಯ್ಡು ಮತ್ತಿತರ ನಾಯಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಜಿ ಕೆಪಿಸಿಸಿ ಸದಸ್ಯ ಡಿ.ಎ.ಜವರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ ಚಂದ್ರು, ಪ್ರಧಾನ ಕಾರ್ಯದರ್ಶಿ ನಿಲಂಗಾಲಜಯಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಮುತ್ತು ರಾಜ್, ಪ.ಪಂ. ಮಾಜಿ ಅಧ್ಯಕ್ಷ ವೈ. ವೆಂಕಟಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಅಸ್ವಾಳು ಶಫಿ, ಪಿ.ಮಹದೇವ್, ಟಿ.ಡಿ.ಸ್ವಾಮಿ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry