ಕೆಬಿಜೆಎನ್‌ಎಲ್ ಆಸ್ತಿ ರಕ್ಷಣೆ ಯಾರ ಹೊಣೆ?

ಶುಕ್ರವಾರ, ಜೂಲೈ 19, 2019
24 °C

ಕೆಬಿಜೆಎನ್‌ಎಲ್ ಆಸ್ತಿ ರಕ್ಷಣೆ ಯಾರ ಹೊಣೆ?

Published:
Updated:

ಹುಣಸಗಿ: ಕೃಷ್ಣಾ ಭಾಗ್ಯ ಜಲ ನಿಗಮದ ಆಸ್ತಿಗಾಗಿ ಹುಣಸಗಿ, ನಾರಾಯಣಪುರ, ಕೊಡೇಕಲ್ಲ, ಕಕ್ಕೇರಾ, ಕೆಂಭಾವಿ, ಸೇರಿದಂತೆ ಶಹಾಪುರ ಯಾದಗಿರಿ, ಜೇವರ್ಗಿ, ವಿಜಾಪುರ, ಬಾಗಲಕೋಟೆಯ ಜಿಲ್ಲೆಯಲ್ಲಿ ಅಂದಾಜು 15 ಸಾವಿರಕ್ಕೂ ಅಧಿಕ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.ಪ್ರತಿಯೊಂದು ಗ್ರಾಮ ಮತ್ತು ಪಟ್ಟಣದಲ್ಲಿಯೂ ಚಿನ್ನಕ್ಕಿಂತ ಹೆಚ್ಚಿನ ಬೆಲೆಯ ಆಸ್ತಿ ಇದೆ. ಆದರೆ ಸರಿಯಾದ ಪ್ರಮಾಣದಲ್ಲಿ ಇದರ ರಕ್ಷಣೆ ಇಲ್ಲದೇ ಇರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ಹಿಂದಿನ ಅಧಿಕಾರಿಗಳು ದಾಖಲಾತಿಗಳಲ್ಲಿ ಮಾಡಿದ ಕೆಲವು ನ್ಯೂನ್ಯತೆಗಳಿಂದಾಗಿ ಅಲ್ಲಲ್ಲಿ ನಿಗಮದ ಆಸ್ತಿ ಕೈತಪ್ಪಿ

ಹೋಗುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಈ ಮೊದಲು ಕೃಷ್ಣಾ ಭಾಗ್ಯಜಲ ನಿಗಮವು ಮನೆ ನಿರ್ಮಾಣ, ಮೊರಮ್ ತುಂಬುವ ಕ್ವಾರಿಗಳಿಗಾಗಿ ಅಲ್ಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯನ್ನು ಖರೀದಿಸಿತ್ತು. ಆದರೆ ಅದಕ್ಕೆ ಪರಿಹಾರ ಕೂಡ ಅಂದೇ ನೀಡಲಾಗಿತ್ತು ಎಂದು ತಿಳಿದು ಬಂದಿದ್ದರೂ ಇಂದು ಅಲ್ಲಲ್ಲಿ ಭೂಮಿಯನ್ನು ಮೊದಲಿನ ರೈತರು ಸಾಗುವಳಿ ಮಾಡುವುದು ಅಥವಾ ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿರುವುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.ಅದೇ ರೀತಿ ಹುಣಸಗಿ ಸಮೀಪದ ರಾಜನಕೋಳೂರ ಗ್ರಾಮದ ಕೃಷ್ಣಾ ಭಾಗ್ಯಜಲ ನಿಗಮದ ಕ್ಯಾಂಪ್‌ಗೆ ಹೊಂದಿಕೊಂಡಿರುವ ಸರ್ವೆ ನಂ: 4/4ರಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂದಿರುವ ಜಾಗವನ್ನು ಕೆಲವರು ಅನಧಿಕೃತವಾಗಿ ಸ್ವಾಧೀನ ಮಾಡಿಕೊಂಡು ಅಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. 2ಎ. 11 ಗುಂಟೆ ಜಾಗವನ್ನು ಖರೀಸಿ ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ವರ್ಗಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮದ ರಾಮನಗೌಡ ಭೀಮನಗೌಡ ಮತ್ತು ಕೆಲವರು ನಾರಾಯಣಪುರ ಮುಖ್ಯ ಎಂಜಿನಿಯರ್ ಅವರಿಗೆ ಪತ್ರ ಬರೆದಿದ್ದಾರೆ.ಈ ಆಸ್ತಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗ ಅಕ್ರಮವಾಗಿ ಖಾತಾ ವರ್ಗಾವಣೆ ಪ್ರಕ್ರಿಯೆ ನಡೆದಿದೆ ಎಂದು ದೂರಿದ್ದಾರೆ. ಹಿಂದಿನ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಇಂದು ಸರ್ಕಾರದ ಆಸ್ತಿ ಯಾರದೋ ಪಾಲಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸುತ್ತಾರೆ.ಇದೇ ರೀತಿಯ ಪ್ರಕರಣಗಳು ಹುಣಸಗಿಯಲ್ಲೂ ನಡೆಯುತ್ತಿದೆ. ಕೃಷ್ಣಾ ಕಾಡಾಕ್ಕೆ ಸಂಭಂಧಿಸಿದ ಕ್ಯಾಂಪ್ ಕೂಡಾ ಇಂದು ನಿಗಮದಿಂದ ಕೈ ತಪ್ಪುತ್ತಿದೆ. ಅಲ್ಲಿಯೂ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ  ರಸ್ತೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಇಂತಹ ಎಲ್ಲ ಪ್ರಕರಣಗಳು ನಿಗಮದ ಹಿರಿಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ರಾಜೂಗೌಡ ಅವರ ಗಮನಕ್ಕೆ ಬಂದಿಲ್ಲವೇ ಎಂದು ನಾಗರಿಕರು  ಪ್ರಶ್ನಿಸುತ್ತಿದ್ದಾರೆ.ಈ ಕುರಿತು ಸರ್ಕಾರ ಗಮನ ಹರಿಸಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿಗಮಗ ಆಸ್ತಿ ರಕ್ಷಿಸಬೇಕು. ಇಲ್ಲದಿದ್ದರೆ ಮತ್ತೆ ರೈತರಿಗೆ ಹಸ್ತಾಂತರಿಸಲಿ ಎನ್ನುತ್ತಾರೆ ಕೆಲವರು. ಅದರೆ ನಿಗಮದ ಹಿರಿಯ ಅಧಿಕಾರಿಗಳು ಮಾತ್ರ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡಬೇಕಿದೆ ಎಂದು ಜನರು ಅಭಿಪ್ರಾಯಪಡುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry