ಕೆರಳಿದ ಜಿ.ಪಂ ಸದಸ್ಯರಿಂದ ಸಭಾತ್ಯಾಗ

7

ಕೆರಳಿದ ಜಿ.ಪಂ ಸದಸ್ಯರಿಂದ ಸಭಾತ್ಯಾಗ

Published:
Updated:
ಕೆರಳಿದ ಜಿ.ಪಂ ಸದಸ್ಯರಿಂದ ಸಭಾತ್ಯಾಗ

ಬೆಂಗಳೂರು: ಆರೋಗ್ಯ ಹಾಗೂ ಸಾಮಾಜಿಕ ಅರಣ್ಯ ಅಧಿಕಾರಿಗಳು ನೀಡಿದ ಅಸಮರ್ಪಕ ಉತ್ತರದಿಂದ ಕೆರಳಿದ ಸದಸ್ಯರು ಪಕ್ಷ-ಭೇದ ಮರೆತು ಸಭಾತ್ಯಾಗ ನಡೆಸಿದ ಪ್ರಸಂಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಗುರುವಾರ ನಡೆಯಿತು.ಜಿ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್~ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟ ಉತ್ತರ ನೀಡಲಿಲ್ಲ.ಇದರಿಂದ ಕೆರಳಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ನಾರಾಯಣಸ್ವಾಮಿ, ಡಿಎಚ್‌ಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.`ಇಂತಹ ಅಸಮರ್ಪಕ ಉತ್ತರ ನೀಡುವ ಅಧಿಕಾರಿಗಳಿಂದ ಏನನ್ನೂ ನಿರೀಕ್ಷಿಸಲಾಗದು. ದಯವಿಟ್ಟು ಅವರನ್ನು ಹೊರಗೆ ಕಳಿಸಿ, ಇಲ್ಲವೇ ನಾವೇ ಹೊರಗೆ ಹೋಗುತ್ತೇವೆ~ ಎಂದು ಅವರು ಸಿಇಒ ಅವರನ್ನು ಒತ್ತಾಯಿಸಿದರು. `ನಾನು ಏನು ಹೇಳಿದರೂ ಅವರಿಗೆ ಅರ್ಥವೇ ಆಗುವುದಿಲ್ಲ~ ಸಿಇಒ ಬೆಟ್ಟಸ್ವಾಮಿ ಕೂಡ ಅಸಹಾಯಕತೆ ವ್ಯಕ್ತಪಡಿಸಿದರು.ಆನಂತರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2009-10ನೇ ಸಾಲಿನಲ್ಲಿ ಶೇ 20ರಷ್ಟು ಅನುದಾನವನ್ನು ಸಾಮಾಜಿಕ ಅರಣ್ಯೀಕರಣ ಕಾಮಗಾರಿಗಳಿಗೆ ವಿನಿಯೋಗಿಸಿರುವ ಕುರಿತು ಸಾಮಾಜಿಕ ಅರಣ್ಯಾಧಿಕಾರಿ ನೀಡಿದ ಉತ್ತರದಿಂದಲೂ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಈ ಯೋಜನೆಯಡಿ 2009-10ನೇ ಸಾಲಿನಲ್ಲಿ 8 ಕೋಟಿ ರೂಪಾಯಿಗಳನ್ನು ಸಾಮಾಜಿಕ ಅರಣ್ಯ ಉದ್ದೇಶಗಳಿಗೆ ಖರ್ಚು ಮಾಡಿದ್ದರೂ, ಕೆಲವು ತಾಲ್ಲೂಕುಗಳಲ್ಲಿ ಶೇ 20ರಷ್ಟರ ಅನುದಾನಕ್ಕೆ ಸಮನಾಗಿ ಗಿಡಗಳನ್ನು ನೆಟ್ಟಿರುವ ಬಗ್ಗೆ ಅಧಿಕಾರಿ ನೀಡಿದ ಅಂಕಿ-ಅಂಶಗಳು ಗೊಂದಲ ಮೂಡಿಸುವಂತಿದ್ದವು. ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಕೂಡ ಸಾಮಾಜಿಕ ಅರಣ್ಯಾಧಿಕಾರಿ ನೀಡಿದ ಮಾಹಿತಿಯನ್ನು ಒಪ್ಪಲಿಲ್ಲ. ಇದರಿಂದ ಕೆರಳಿದ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.ಎಲ್ಲ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದರಿಂದ ಅಧ್ಯಕ್ಷರು ಕೂಡ ಅವರನ್ನು ಹಿಂಬಾಲಿಸುವಂತಾಯಿತು. ಕೊನೆಗೆ ಸಿಇಒ ಒಬ್ಬರೇ ಸಭೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾದಾಗ ಅನ್ಯ ಮಾರ್ಗವಿಲ್ಲದೆ ಮುಂದೂಡುವಂತಾಯಿತು.ತನಿಖೆಗೆ ಸಮಿತಿ ರಚನೆ: ಇದಕ್ಕೂ ಮುನ್ನ ನಡೆದ ಸಭೆಯಲ್ಲಿ 2009-10 ಹಾಗೂ 2010-11ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ಆರೋಪಗಳ ಬಗ್ಗೆ ತನಿಖೆ ನಡೆಸಲು ಜಿ.ಪಂ. ಅಧ್ಯಕ್ಷೆ ಭಾಗ್ಯಮ್ಮ ಅವರ ಅಧ್ಯಕ್ಷತೆಯಲ್ಲಿ ಆರು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಯಿತು.ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಕೃಷ್ಣಪ್ಪ, ಈ ಯೋಜನೆಯಡಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಕೆಲವೆಡೆ ಕಾಮಗಾರಿಗಳು ಅಪೂರ್ಣಗೊಂಡಿದ್ದರೂ ಬಿಲ್ ಪಾವತಿ ಮಾಡಲಾಗಿದೆ ಎಂದು ಒಂದೆರಡು ಕಾಮಗಾರಿಗಳ ಛಾಯಾಚಿತ್ರಗಳನ್ನು ಸಭೆಯಲ್ಲಿ ಪ್ರದರ್ಶಿಸುವ ಮೂಲಕ ಗಂಭೀರ ಆರೋಪ ಮಾಡಿದರು.`ನೆಲಮಂಗಲ ತಾಲ್ಲೂಕಿನಲ್ಲಿಯೇ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆದಿರುವ ಶಂಕೆಯಿದೆ. ಹೀಗಾಗಿ, ತನಿಖೆಗೆ ಸಮಿತಿ ರಚಿಸಲೇಬೇಕು. ಒಂದು ವೇಳೆ ಆರೋಪದಲ್ಲಿ ಹುರುಳಿಲ್ಲದಿದ್ದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ~ ಎಂದು ಕೃಷ್ಣಪ್ಪ ಸವಾಲು ಹಾಕಿದರು.ಆಡಳಿತಾರೂಢ ಸದಸ್ಯರಾದ ಹನುಮಂತೇಗೌಡ ಹಾಗೂ ವಿ. ನಾರಾಯಣಸ್ವಾಮಿ ಕೂಡ ಸಮಿತಿ ರಚನೆಗೆ ಬೆಂಬಲ ಸೂಚಿಸಿದರು. ಅಂತಿಮವಾಗಿ ಜಿ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆರು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಮಿತಿ ನೀಡುವ ವರದಿಯನ್ನಾಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಿಇಒ ಸಭೆಗೆ ತಿಳಿಸಿದರು.ಕಳೆದ ವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿದ ಗುತ್ತಿಗೆದಾರರಿಗೆ ಶೀಘ್ರ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುವಂತೆ ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.

ನೆಲಮಂಗಲ ಶಾಸಕ ನಾಗರಾಜ್, ಜಿ.ಪಂ. ಉಪಾಧ್ಯಕ್ಷೆ ಶಾಂತಮ್ಮ, ಸಿಇಒ ಬೆಟ್ಟಸ್ವಾಮಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry