ಸೋಮವಾರ, ಮೇ 23, 2022
26 °C

ಕೆರೆಗಳಲ್ಲಿ ಆಳ ಗಾಯ; ಕೃಷಿ ಜಮೀನಲ್ಲೂ ಮರಳು ಮಾಯ

ಪ್ರಜಾವಾಣಿ ವಾರ್ತೆ / ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಒಂದೊಮ್ಮೆ ಜಲ ಸಂಸ್ಕೃತಿಗೆ ಪ್ರತೀಕವಾಗಿದ್ದ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ಈಗ ಮಾಯವಾಗದ ಆಳ ಗಾಯಗಳಾಗಿವೆ. ನೂರಾರು ವರ್ಷಗಳಿಂದ ಸಂಗ್ರಹವಾಗಿದ್ದ, ಲೈಟು ಕಂಬದೆತ್ತರದಷ್ಟು ಮರಳ ಹಾಸಿಗೆಯನ್ನು ಬರಿದು ಮಾಡಲಾಗಿದೆ.ಜಿಲ್ಲೆಯ ಕೆರೆಗಳು ಈಗ ತುರ್ತುನಿಗಾ ಘಟಕದಲ್ಲಿರುವ ರೋಗಿಯ ಸ್ಥಿತಿಯಲ್ಲಿವೆ. ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಬೇಕು ಎಂದು ಕೋರಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರೂ ಪ್ರಯೋಜನವಾಗಿಲ್ಲ.ಕೆರೆಗಳಲ್ಲಿ ಇನ್ನು ಮರಳು ಸಿಗುವುದಿಲ್ಲ ಎಂಬ ಸತ್ಯ ಗೊತ್ತಾದ ಮೇಲೆ ಕೃಷಿ ಜಮೀನಿನಲ್ಲಿ ಮರಳು ತೆಗೆಯುವ ದುರಾಸೆಯ ಪರಿಣಾಮ ಮುಳಬಾಗಲು ತಾಲ್ಲೂಕಿನ ಹಲವು ಗ್ರಾಮಗಳ ಕೃಷಿ ಜಮೀನುಗಳೂ ಅಸ್ತಿತ್ವ ಕಳೆದುಕೊಳ್ಳುತ್ತಿವೆ.ಮುಳಬಾಗಲು ಪಟ್ಟಣ ದಾಟಿದ ಕೆಲವೇ ಕಿಲೋಮೀಟರುಗಳ ಬಳಿಕ ರಾಷ್ಟ್ರೀಯ ಹೆದ್ದಾರಿ 4ರ ಅಕ್ಕಪಕ್ಕದಲೇ ಮರಳು ಗುಡ್ಡಗಳು ಉದ್ದಕ್ಕೂ ಕಾಣಿಸುತ್ತವೆ. ಪರವಾನಗಿ ಇಲ್ಲದೆ, ಕಣ್ಣೆದುರೇ ಮರಳು ಲೂಟಿ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುವವರೇ ಇಲ್ಲದ ಅರಾಜಕ ಸನ್ನಿವೇಶ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಕೃಷಿ ಜಮೀನಿನಲ್ಲಿ ಮರಳು ತೆಗೆದರೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂಬ ಜಿಲ್ಲಾಧಿಕಾರಿ ಸೂಚನೆಗೆ ಕವಡೆ ಕಿಮ್ಮತ್ತೂ ಸಿಕ್ಕಿಲ್ಲ.ಅಕ್ರಮವಾಗಿ ಕೆರೆಗಳಲ್ಲಿ ಮಣ್ಣು ತೆಗೆಯುವ, ಮರಳು ಫಿಲ್ಟರಿಂಗ್ ಮಾಡುವ ಮತ್ತು ಸಾಗಿಸುವ ಲಾರಿಗಳನ್ನು ತಡೆದು ವಶಕ್ಕೆ ಪಡೆದು ದಂಡ ವಿಧಿಸಿ ಕಳಿಸುವುದು, ಮರಳು ಫಿಲ್ಟರಿಂಗ್ ಸಾಮಗ್ರಿಗಳನ್ನು ಸುಡುವುದನ್ನು ಬಿಟ್ಟರೆ ಅಕ್ರಮ ಮರಳು ಸಾಗಣೆ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿದ ನಿದರ್ಶನಗಳೂ ಇಲ್ಲ.

ಕೆರೆಗಳಲ್ಲಿ ಮರಳು ತೆಗೆಯುವುದನ್ನು ನಿಲ್ಲಿಸಲು ಕೈಗೊಂಡ ಕ್ರಮದ ಬಗ್ಗೆ ಕೇಳಿದರೆ ಅಧಿಕಾರಿಗಳು ಜಾಣಮೌನ ವಹಿಸುವುದು ಸಾಮಾನ್ಯವಾಗಿದೆ. ಮರಳು ಸಾಗಣೆ ತಡೆಯುವ ಸಲುವಾಗಿ ಜಿಲ್ಲಾಧಿಕಾರಿ ನೇತೃತ್ವದ ಪೊಲೀಸ್, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಆಯಾ ತಹಶೀಲ್ದಾರ್ ಇರುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಇದ್ದರೂ, ಜವಾಬ್ದಾರಿ ನಿರ್ವಣೆಯ ವಿಚಾರದಲ್ಲಿ ಒಬ್ಬರ ಕಡೆ ಮತ್ತೊಬ್ಬರು ಬೆರಳು ತೋರಿಸಿ ನುಣುಚಿಕೊಳ್ಳುವ ನಿದರ್ಶನಗಳೂ ಸಾಕಷ್ಟಿವೆ.ಅಕ್ರಮ ಮರಳು ಸಾಗಣೆ ವಿಚಾರದಲ್ಲಿ ಇತರೆ ತಾಲ್ಲೂಕುಗಳಿಗೆ ಮುಳಬಾಗಲು ದೊಡ್ಡಣ್ಣನಂತೆ ಕಾಣಿಸುತ್ತದೆ. ಮರಳು ಸಾಗಿಸುವವರಿಗೆ ಮುಳಬಾಗಲು ಚಿನ್ನದ ಗಣಿಯಂತೆಯೇ ಆಗಿದೆ. ಕೃಷಿಗೆ ಮೀಸಲಾದ ಕೊಳವೆಬಾವಿ ನೀರು ಹೆಚ್ಚಾಗಿ ಮರಳು ಫಿಲ್ಟರಿಂಗ್‌ಗೆ ಬಳಕೆಯಾಗುತ್ತದೆ.ರಾಷ್ಟ್ರೀಯ ಹೆದ್ದಾರಿಯೂ ಇರುವುದರಿಂದ ಬೆಂಗಳೂರಿಗೆ ಇಲ್ಲಿಂದ ಮರಳು ಸಾಗಣೆ ಹೆಚ್ಚು. ಬಹಳಷ್ಟು ಗ್ರಾಮಗಳ ಕೃಷಿ ಜಮೀನು ಪ್ರದೇಶಗಳಲ್ಲಿ ಈಗ ಗಡಿ ಗುರುತಿಸಲಾಗದಷ್ಟು ಆಳದ ಹಳ್ಳಗಳು ಬಾಯ್ದೆರೆದಿವೆ. ಮುಳಬಾಗಲು ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ಮರಳು ಸಾಗಣೆ ಲಾರಿಗಳನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿಲ್ಲ.  ಉಳಿದಂತೆ ಇತರೆ ತಾಲ್ಲೂಕುಗಳ ಕೆರೆಗಳಲ್ಲಿ ಮರಳು ತೆಗೆದು ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ.ಮೊಕದ್ದಮೆ: ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಬೇಕು ಎಂದು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗಾ.ಪಂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಕೆ ಹೂಡಿತ್ತು. ಈ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ 20 ಮಂದಿಗೆ ನೋಟಿಸ್ ನೀಡಿತ್ತು.`ಇದುವರೆಗೂ ಕ್ರಮ ಕೈಗೊಂಡ ಬಗ್ಗೆ ಕೋರ್ಟಿಗೆ ವರದಿ ಸಲ್ಲಿಸಿಲ್ಲ. ಬದಲಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾತ್ರ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಮೂರು ನಾಲ್ಕು ಪ್ಯಾರಾಗಳ ಒಂದು ಸ್ಪಷ್ಟನೆಯನ್ನಷ್ಟೇ ನೀಡಿದೆ. ಮರಳು ಗಣಿಗಾರಿಕೆ ತಡೆಯುವಲ್ಲಿ ಜಿಲ್ಲೆಗೆ ಸಂಬಂಧಿಸಿದ ಯಾರಿಗೂ ಗಂಭೀರ ಆಸಕ್ತಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ' ಎನ್ನುತ್ತಾರೆ ಮೊಕದ್ದಮೆ ಹೂಡಿರುವ ಹಿರಿಯ ವಕೀಲ ಎಂ.ಶಿವಪ್ರಕಾಶ್.ಮೊಕದ್ದಮೆ ದಾಖಲಾದ ಬಳಿಕ ಕಳೆದ ಅಕ್ಟೋಬರ್ 17ರಂದೇ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, `ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಯುವಲ್ಲಿ ಅಧಿಕಾರಿಗಳು ಸ್ವಂತ ಬುದ್ಧಿಯನ್ನೂ ಉಪಯೋಗಿಸುತ್ತಿಲ್ಲ. ಹೇಳಿದ ಮಾತನ್ನೂ ಕೇಳುತ್ತಿಲ್ಲ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

`ಪೊಲೀಸರ ನೆರವನ್ನು ಯಾವುದೇ ಸಂದರ್ಭದಲ್ಲೂ ನೀಡಲಾಗುವುದು ಎಂದು ಹೇಳಿದ ಬಳಿಕವೂ ಯಾವುದೇ ಇಲಾಖೆ ಅಧಿಕಾರಿ ಇದುವರೆಗೂ ಒಂದು ಪತ್ರವನ್ನೂ ಬರೆದಿಲ್ಲ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್ ಅಧಿಕಾರಿಗಳ ನಿರುತ್ಸಾಹ, ನಿಷ್ಕ್ರಿಯ ಕಾರ್ಯವೈಖರಿ ಬಗ್ಗೆ ಗಮನ ಸೆಳೆದಿದ್ದರು.ಅದಾಗಿ 8 ತಿಂಗಳಾದರೂ ಸನ್ನಿವೇಶದಲ್ಲಿ ಬದಲಾವಣೆ ಆಗಿಲ್ಲ ಎಂಬುದು ರೈತ ಸಂಘದ ಹಲವು ಪ್ರಮುಖರ ದೂರು. ದೂರುಗಳು ಹಲವು, ಕೈಗೊಂಡ ಕ್ರಮಗಳು ಕೆಲವು. ಇಂಥ ಸನ್ನಿವೇಶದಲ್ಲೇ  ಮರಳು ಸಾಗಣೆ ದಂಧೆ ನಿತ್ಯ ನಡೆಯುತ್ತಲೇ ಇದೆ. ಕೆರೆ, ಕೃಷಿ ಜಮೀನುಗಳು ಖಾಲಿಯಾಗುತ್ತಲೇ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.