ಕೆರೆಗಳ ರಕ್ಷಣೆಗೆ ಗಮನ ಕೊಡಿ

7

ಕೆರೆಗಳ ರಕ್ಷಣೆಗೆ ಗಮನ ಕೊಡಿ

Published:
Updated:

ಭೂಮಿಯ ಬೆಲೆ ಗಗನಕ್ಕೆ ಏರಿದ ಹಿನ್ನೆಲೆಯಲ್ಲಿ ಕೆರೆ, ಗೋಮಾಳ, ಸ್ಮಶಾನ, ಅರಣ್ಯದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಬೆಂಗಳೂರಿನ ೪೦೦ಕ್ಕೂ ಹೆಚ್ಚು ಕೆರೆಗಳ ಪೈಕಿ ೬೪ ಕೆರೆಗಳು ಮಾತ್ರವೇ ಉಳಿದಿವೆ. ಈ ಕೆರೆಗಳ ಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ. ಕೆರೆಗಳಿಗೆ ನೀರನ್ನು ಹರಿಸುತ್ತಿದ್ದ ಜಲಾನಯನ ಪ್ರದೇಶ ಸಂಪೂರ್ಣ ಒತ್ತುವರಿಯಾಗಿ ಕೊಳಚೆ ನೀರು ಮಾತ್ರವೇ ಕೆರೆಗಳಿಗೆ ಹರಿದುಬರುತ್ತಿದೆ. ಈ ಒತ್ತುವರಿಯನ್ನು ತೆರವು ಮಾಡ­ಬೇಕಾದ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ.ಇಂತಹ ಸ್ಥಿತಿ­ಯಲ್ಲಿ ಕೆರೆಗಳನ್ನು ಉಳಿಸಲು ಬೆಂಗಳೂರಿನಲ್ಲಿ ಜನಾಂದೋಲನ ನಡೆದಿ­ರು­ವುದು ಸ್ವಾಗತಾರ್ಹ ಬೆಳವಣಿಗೆ. ಸರ್ಜಾಪುರ ರಸ್ತೆಯ ಅಗರ ಕೆರೆಯ ಮುಂದಿನ ೭೨ ಎಕರೆ ಕೃಷಿ ಭೂಮಿಯಲ್ಲಿ ಮಾಲ್‌, ವಸತಿ ಸಂಕೀರ್ಣ ಹಾಗೂ ವಾಣಿಜ್ಯ ಕಟ್ಟಡ ಕಾಮಗಾರಿಯನ್ನು ವಿರೋಧಿಸಿ ‘ನಮ್ಮ ಬೆಂಗ­ಳೂರು ಪ್ರತಿಷ್ಠಾನ’ದ ಮೂಲಕ ಜನ ಪ್ರತಿಭಟನೆ ನಡೆಸಿ ಈ ಕಾಮಗಾ­ರಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು. ಕಟ್ಟಡದಿಂದ ಉತ್ಪತ್ತಿಯಾಗುವ ಮಾಲಿನ್ಯ ಕೆರೆಗೆ ಹರಿದು ಪರಿಸರವೇ ಹಾಳಾಗುತ್ತದೆ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಕೆರೆಗಳನ್ನು ಉಳಿಸಲು ಇಂತಹ ಪ್ರತಿಭಟನೆ ಆಂದೋಲ­ನದ ರೂಪ ಪಡೆಯಬೇಕು. ಆಗ ಮಾತ್ರ ಸರ್ಕಾರವನ್ನು ಮಣಿಸುವ ಶಕ್ತಿ ಬರುತ್ತದೆ.

ನಗರಕ್ಕೆ ಕಾವೇರಿ ನೀರು ಪೂರೈಕೆ ವ್ಯವಸ್ಥೆ ಬರುವ ಮುನ್ನ ಕೆರೆಗಳೇ ಕುಡಿ­ಯುವ ನೀರಿಗೆ ಮೂಲವಾಗಿತ್ತು. ಬೆಂಗಳೂರಿನ ಕೆರೆಗಳನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. ಆದರೆ ಈ ಉದ್ದೇಶವೇ ಈಡೇರುತ್ತಿಲ್ಲ. ಬಹುತೇಕ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಬದ್ಧತೆಯನ್ನು ಈ ಸಂಸ್ಥೆಗಳು ಪ್ರದರ್ಶಿಸುತ್ತಿಲ್ಲ. ನಂದಿ ಬೆಟ್ಟದ ಬಳಿ ಹುಟ್ಟಿ ಮಾಗಡಿ ಬಳಿಯ ತಿಪ್ಪಗೊಂಡ­ನಹಳ್ಳಿ ಜಲಾಶಯವನ್ನು ಸೇರುವ ಅರ್ಕಾವತಿ ನದಿ ಪಾತ್ರವೂ ಸಂಪೂರ್ಣ ಒತ್ತುವರಿಯಾಗಿ, ನದಿಯು ಕಾಲುವೆಯಂತಾಗಿದೆ.ಈ ಒತ್ತುವರಿ ತೆರವಿಗೆ ಜನಪ್ರತಿನಿಧಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿ­ಗಳು ಮತ್ತು ಕಟ್ಟಡ ನಿರ್ಮಾತೃಗಳ ಅಪವಿತ್ರ ಮೈತ್ರಿಯೇ ಕೆರೆ ಒತ್ತುವರಿ, ನದಿ ಪಾತ್ರ ಒತ್ತುವರಿಗೆ ಕಾರಣ. ಬೆಂಗಳೂರು ಕೆರೆಗಳ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಕರಡು ಮಸೂದೆಗೆ ವಿಧಾನಮಂಡಲದ ಎರಡೂ ಸದನಗಳ ಅಂಗೀಕಾರ ದೊರೆತರೆ ಕಾಯ್ದೆಯ ಬಲ ಬರುತ್ತದೆ. ಇದು ತುರ್ತಾಗಿ ಆಗಬೇಕಾದ ವಿಚಾರ. ಕೆರೆಗಳ ರಕ್ಷಣೆ ಮಾಡದಿದ್ದರೆ ಅಂತರ್ಜಲ ಮತ್ತಷ್ಟು ಆಳಕ್ಕೆ ಹೋಗುತ್ತದೆ. ನೀರು ಪಡೆ­ಯಲು ಸಾವಿರ ಅಡಿಗೂ ಹೆಚ್ಚು ಆಳಕ್ಕೆ ಕೊಳವೆ ಬಾವಿಯನ್ನು ಕೊರೆಯಬೇಕಾಗಿದೆ.ಹೆಚ್ಚು ಬೆಳವಣಿಗೆ ಕಾಣುತ್ತಿರುವ ಬೆಳ್ಳಂದೂರು, ಸರ್ಜಾಪುರ ಹಾಗೂ ಅಗರ ಮತ್ತಿತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಕೊಳವೆಬಾವಿಯನ್ನೇ ಆಶ್ರಯಿಸಬೇಕು. ಇಂತಹ ಸ್ಥಿತಿಯಲ್ಲಿ ಕೆರೆಗಳನ್ನೇ ನಾಶಪಡಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ. ನದಿ ಪಾತ್ರ, ಕೆರೆಗಳ ಸುತ್ತ ಯಾವುದೇ ರೀತಿಯ ಕಟ್ಟಡಗಳು ತಲೆ ಎತ್ತದಂತೆ ಸರ್ಕಾರ ನೋಡಿಕೊಳ್ಳಬೇಕು ಹಾಗೂ ಅಧಿಕಾರಿಗಳು ಹಾಗೂ ಭೂಅಭಿವೃದ್ಧಿ ಮಾಡುವವರ ಅಪವಿತ್ರ ಮೈತ್ರಿಗೆ ಕಡಿವಾಣ ಹಾಕಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry