ಕೆರೆಗೆ ನೀರು, ಕಾಡಲಿದೆ ಸಮಸ್ಯೆ

7

ಕೆರೆಗೆ ನೀರು, ಕಾಡಲಿದೆ ಸಮಸ್ಯೆ

Published:
Updated:

ತುಮಕೂರು: ಬುಗುಡನಹಳ್ಳಿ ಕೆರೆಯಿಂದ ನಗರದ ಅಮಾನಿಕೆರೆಗೆ ಹೇಮಾವತಿ ನೀರು ಪಂಪ್ ಮಾಡುತ್ತಿರುವುದರಿಂದ ನಗರದ ಬಹುತೇಕ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

ಇಷ್ಟು ದಿನ ಬುಗುಡನಹಳ್ಳಿ ಕೆರೆಯಲ್ಲಿ ನೀರಿಲ್ಲದೆ ನಗರದ ಜನತೆ ನೀರಿಗಾಗಿ ಪರದಾಡುತ್ತಿದ್ದರು. ಆದರೆ ಈಗ ಕೆರೆಯ ತುಂಬಾ ನೀರಿದ್ದರೂ ಜನರ ನೀರಿನ ಬವಣೆ ಮುಗಿದಿಲ್ಲ.ನಗರಕ್ಕೆ ನೀರು ಪೂರೈಸುವ ಎರಡನೇ ಹಂತದ ಹೇಮಾವತಿ ಯೋಜನೆಯ ಕೊಳವೆ ಮಾರ್ಗದಿಂದಲೇ ಅಮಾನಿಕೆರೆಗೆ ನೀರು ಪಂಪ್ ಮಾಡುತ್ತಿರುವುದು ಈ ಸಮಸ್ಯೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕೇವಲ ರಾತ್ರಿ ವೇಳೆ ಮಾತ್ರ ಅಮಾನಿಕೆರೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಆದರೆ ನಿರ್ಣಯ ಮಾಡಿದ್ದಕ್ಕಿಂತಲೂ ಹೆಚ್ಚಿನ ಸಮಯ ಅಮಾನಿಕೆರೆಗೆ ನೀರು ಹರಿಸಲಾಗುತ್ತಿದ್ದು, ಇದು ಕುಡಿಯುವ ನೀರು ಸರಬರಾಜಿನ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.ಕುಡಿಯುವ ನೀರಿಗಿಂತಲೂ ಅಮಾನಿಕೆರೆ ತುಂಬಿಸಲೇ ಹೆಚ್ಚು ಸಮಯ ಪಂಪ್ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಗರದ ಅನೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.ಈಗಾಗಲೇ ಬುಗುಡನಹಳ್ಳಿ ಕೆರೆಯಲ್ಲಿ ಎರಡೂವರೆ ಅಡಿಯಷ್ಟು ನೀರು ಖಾಲಿಯಾಗಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದರಿಂದ ಒಂದು ವೇಳೆ ಜಿಲ್ಲೆಗೆ ಬರುವ ಹೇಮಾವತಿ ನೀರಿನ ಪ್ರಮಾಣ ಕಡಿಮೆಯಾದರೆ ನಗರದ ಜನತೆ ಮಾತ್ರವಲ್ಲ, ಕುಡಿಯಲು ಹಾಗೂ ಕೃಷಿ ಬಳಕೆಗೆ ಹೇಮಾವತಿಯನ್ನು ಅವಲಂಬಿಸಿರುವ ಬಹುತೇಕ ತಾಲ್ಲೂಕುಗಳ ಜೀವನದ ಮೇಲೂ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.ತಕ್ಷಣಕ್ಕೆ ಅಮಾನಿಕೆರೆಗೆ ನೀರು ಬಿಡುವುದನ್ನು ನಿಲ್ಲಿಸಿ, ಅದೇ ನೀರನ್ನು ಕೃಷಿ, ಕುಡಿಯುವ ನೀರಿನ ಕೆರೆಗಳಿಗೆ ಮೊದಲಿಗೆ ತುಂಬಿಸಿಕೊಳ್ಳಬೇಕು. ನೀರು ಹೆಚ್ಚುವರಿ ಸಿಕ್ಕರೆ ಮಾತ್ರವೇ ಅಮಾನಿಕೆರೆ, ಹೆಬ್ಬಾಕ ಕೆರೆಗಳಿಗೆ ತುಂಬಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅಧಿಕಾರಿ ವಲಯದಿಂದ ವ್ಯಕ್ತವಾಯಿತು.ತುಮಕೂರು ಜಿಲ್ಲೆ ಸೇರಿದಂತೆ ಇತರ ಭಾಗಗಳಿಗೂ ಗೊರೂರು ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾನಯನ ಪ್ರದೇಶದಲ್ಲೂ ಮಳೆ ಇಲ್ಲವಾಗಿದ್ದು, ಜಲಾಶಯದಲ್ಲಿ ಸಹ ನೀರಿನ ಮಟ್ಟ ಕುಸಿಯುತ್ತಿದೆ. ಕಾವೇರಿ ವಿವಾದ ಬಗೆಹರಿದಿಲ್ಲ. ಮುಂದೆ ಏನಾಗಲಿದೆ ಎಂಬ ಸ್ಪಷ್ಟ ಚಿತ್ರಣವೂ ಸಿಕ್ಕಿಲ್ಲ.ಇನ್ನೂ ಅಸ್ಪಷ್ಟ ಚಿತ್ರಣ, ಗೊಂದಲ ಮುಂದುವರಿದಿದೆ. ಒಂದು ವೇಳೆ ತಮಿಳುನಾಡಿಗೆ ಕಾವೇರಿಯಿಂದ ಮತ್ತಷ್ಟು ನೀರು ಹರಿಸಬೇಕಾದರೆ, ಆ ಉದ್ದೇಶಕ್ಕೆ ಹೇಮಾವತಿ ನೀರು ಬಳಸಿಕೊಳ್ಳವ ಸಾಧ್ಯತೆಗಳು ಹೆಚ್ಚಾಗಿವೆ. ಅಂಥ ಸಂದರ್ಭ ಒದಗಿದರೆ ಜಿಲ್ಲೆಗೆ ನೀರು ಹರಿಸುವುದು ಕಷ್ಟ.ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಿ ನೀರು ಪೋಲುಮಾಡುವುದನ್ನು ನಿಲ್ಲಿಸಿ ಕೆರೆಗಳಲ್ಲಿ ತುಂಬಿಸಿಟ್ಟುಕೊಂಡರೆ ಕಷ್ಟದ ಪರಿಸ್ಥಿತಿ ಎದುರಿಸಬಹುದು. ಮುಂದೆ ಹೆಚ್ಚು ನೀರು ಬಂದರೆ ಆಗ ಅಮಾನಿಕೆರೆ ತುಂಬಿಸಿಕೊಳ್ಳಬಹುದು. ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರ ಸುತ್ತಿಕೊಂಡಿದ್ದು, ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.ಪರಿಸ್ಥಿತಿಯನ್ನು ಅವಲೋಕಿಸಿ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಈಗಿನಿಂದಲೇ ಎಚ್ಚರಿಕೆ ವಹಿಸಬೇಕು. ತಪ್ಪಿದರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ನಗರದ ಸಾರ್ವಜನಿಕರ ಆತಂಕವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry