ಕೆರೆಗೆ ನೀರು ತುಂಬಿಸಿ ಜನರ ಸಮಸ್ಯೆ ಪರಿಹರಿಸಿ

7

ಕೆರೆಗೆ ನೀರು ತುಂಬಿಸಿ ಜನರ ಸಮಸ್ಯೆ ಪರಿಹರಿಸಿ

Published:
Updated:

ಬಳ್ಳಾರಿ:  ಫ್ಲೋರೈಡ್‌ಯುಕ್ತ ನೀರನ್ನು ಕುಡಿಯುತ್ತಿರುವ ಜಿಲ್ಲೆಯ ಕುರುಗೋಡು ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲೆಂದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟಲಾದ ಕೆರೆಗೆ ಕಾಲುವೆಯಿಂದ ನೀರು ಬಿಟ್ಟು ಜನರ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ಗ್ರಾಮದ ಪಂಚಾಯಿತಿ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ಮನವಿ ಸಲ್ಲಿಸಿದರು.

ಈವರೆಗೆ ಒಟ್ಟು ನಾಲ್ಕು ಬಾರಿ ಉದ್ಘಾಟನೆಗೊಂಡಿರುವ ಕುರುಗೋಡು ಕೆರೆಗೆ ಎಲ್‌ಎಲ್‌ಸಿ ಕಾಲುವೆಯಿಂದ ನೀರು ಹರಿಸಬೇಕಿದೆ. ಈ ನಿಟ್ಟಿನಲ್ಲಿ, ಕೇವಲ 5 ಎಚ್‌ಪಿ ಮೋಟರ್ ಅಳವಡಿಸಿ ನೀರನ್ನು ಹರಿಸಲಾಗುತ್ತಿದೆ. 20 ಎಚ್‌ಪಿ ಸಾಮರ್ಥ್ಯದ ಮೂರು ಮೊಟರ್‌ಗಳನ್ನು ಅಳವಡಿಸಿ ನೀರು ಹರಿಸಿದಲ್ಲಿ ಮಾತ್ರ ಕೆರೆ ತುಂಬುತ್ತದೆ ಎಂದು ಗ್ರಾ.ಪಂ. ಸದಸ್ಯ ಎ.ಮಲ್ಲಿಕಾರ್ಜುನ ತಿಳಿಸಿದರು.ಎಂಟು ವರ್ಷಗಳಿಂದ ಕಟ್ಟಲಾಗುತ್ತಿರುವ ಈ ಕೆರೆಯ ಕಾಮಗಾರಿ ಪೂರ್ಣಗೊಂಡಿದ್ದು, ಒಟ್ಟು ನಾಲ್ಕು ಬಾರಿ ಕೆರೆಯನ್ನು ಉದ್ಘಾಟಿಸಲಾಗಿದೆ. ಕಳೆದ ನವೆಂಬರ್‌ನಲ್ಲಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಜನಾರ್ದನರೆಡ್ಡಿ ಅವರು ಮತ್ತೊಮ್ಮೆ ಕೆರೆಯನ್ನು ಉದ್ಘಾಟಿಸಿದ್ದಾರೆ. ಆದರೆ, ಕೆರೆಗೆ ನೀರು ಹರಿಸಿ, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.ಐದು ಎಚ್‌ಪಿ ಮೋಟರ್‌ನಿಂದ ನೀರನ್ನು ಎತ್ತಿ ಕೆರೆಗೆ ಹರಿಸಲಾಗಿದ್ದು, ಸಾಕಷ್ಟು ನೀರು ಭೂಮಿಯಲ್ಲಿ ಇಂಗಿದ್ದು, ಅಷ್ಟಿಷ್ಟು ಸಂಗ್ರಹವಾಗಿರುವ ನೀರೆಲ್ಲ ಕಲುಷಿತಗೊಂಡಿದೆ. ಅಲ್ಲದೆ, ಗ್ರಾಮದ ದನಕರುಗಳು ಕೆರೆಯ ನೀರಲ್ಲಿ ಮುಳುಗಿ ಏಳುತ್ತಿವೆ. ಕೂಡಲೇ ಇದನ್ನು ತಪ್ಪಿಸಿ, ಕಲುಷಿತ ನೀರನ್ನು ತೆರವುಗೊಳಿಸಿ, ಮತ್ತೆ ಸ್ವಚ್ಛ ನೀರನ್ನು ಹರಿಸಿ ಗ್ರಾಮಸ್ಥರಿಗೆ ಪೂರೈಸಬೇಕು ಎಂದು ಅವರು ಕೋರಿದರು.ಗ್ರಾಮದ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಹುದ್ದೆ ಖಾಲಿ ಇದ್ದು, ಅಭಿವೃದ್ಧಿ ಅಧಿಕಾರಿಯೂ ನಿತ್ಯ ಕಚೇರಿಗೆ ಬರುವುದಿಲ್ಲ ಎಂದೂ ಅವರು ಆರೋಪಿಸಿದರು.ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್, ಗ್ರಾ.ಪಂ. ಸದಸ್ಯರಾದ ಕೆ.ನೀಲಪ್ಪ, ಅಮಿನ್, ಸಿದ್ದನಗೌಡ, ಹನೀಫ್, ಕುರೇರ ಮಲ್ಲಯ್ಯ, ನಾಗಪ್ಪ, ದೇವೇಂದ್ರಪ್ಪ, ಚಲವಾದಿ ಅಂಬಣ್ಣ, ವೈ.ಬಸಪ್ಪ, ಭೂಪತಿ ದೇವೇಂದ್ರ, ದಮ್ಮೂರ ತಿಪ್ಪಯ್ಯ, ತಾ.ಪಂ. ಸದಸ್ಯ ಚಂದ್ರಾಯಿ ಕಿಷ್ಟಪ್ಪ ಮತ್ತಿತರರು ಜಿ.ಪಂ. ಕಾರ್ಯದರ್ಶಿ ಅನ್ನದಾನಯ್ಯ ಹಾಗೂ ಜಿ.ಪಂ. ಕಾರ್ಯ ನಿರ್ವಾಹಕ ಎಂಜಿನಿಯರ್ ವೆಂಕಟರಮಣ  ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry