ಕೆರೆಗೆ ನೀರು: ಪಾಟೀಲ

7
ಶಿವಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವ

ಕೆರೆಗೆ ನೀರು: ಪಾಟೀಲ

Published:
Updated:

ವಿಜಾಪುರ: ಕರ್ಮಯೋಗಿ, ಜ್ಞಾನಯೋಗಿ ಶಿವಯೋಗಿ ಸಿದ್ಧರಾಮೇಶ್ವರರ ಬದುಕು ನಮ್ಮ ಜೀವನಕ್ಕೆ ಮಾರ್ಗ ದರ್ಶಿಯಾಗಬೇಕು. ಅವರ ತತ್ವ –ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕರೆ ನೀಡಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಇಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.ಶರಣರು ಮಾಡಿದ ಕಾರ್ಯಗಳನ್ನು ಜನರಿಗೆ ತಲುಪಿಸುವ ಹಾಗೂ ಶರಣರನ್ನು  ಸ್ಮರಿಸುವ ನಿಟ್ಟಿನಲ್ಲಿ, ಸರ್ಕಾರ  ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಈ ವರ್ಷದಿಂದ ಆಚರಿಸುತ್ತಿದೆ ಎಂದರು.ಶಿವಯೋಗಿಗಳು  ಕಲ್ಯಾಣಕ್ಕೆ ಬರುವ  ಮೊದಲು ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಸಿದ್ಧರಾಮೇಶ್ವರರು ಕೆರೆ ನಿರ್ಮಾಣ, ಬಡವರು, ನಿರ್ಗತಿ ಕರಿಗಾಗಿ ಪರಿಹಾರ ಕಾರ್ಯಗಳನ್ನು ಕೈಗೊಂಡು ಕಾಯಕ ಯೋಗಿಯಾಗಿದ್ದರು. ಅಲ್ಲಮಪ್ರಭುಗಳ ಮಾರ್ಗದರ್ಶನದಲ್ಲಿ ಜ್ಞಾನಯೋಗಿಯಾದರು. ತಮ್ಮ ವಚನಗಳ ಮೂಲಕ ಜಗತ್ತಿಗೆ ಮಾರ್ಗದರ್ಶಕರಾದರು ಎಂದು ಹೇಳಿದರು.ಸಿದ್ಧರಾಮೇಶ್ವರರ ಕಾರ್ಯತತ್ವಗಳನ್ನು ಅನುಸರಿಸಿ ಅವರ ಸ್ಮರಣೆಯಲ್ಲಿ  ಜಿಲ್ಲೆಯ ಮಮದಾಪುರ, ಬೇಗಂ ತಲಾಬ್‌ ಹಾಗೂ ಭೂತನಾಳ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.ಉಪನ್ಯಾಸ ನೀಡಿದ ಡಾ.ಮಲ್ಲಿಕಾರ್ಜುನ ಮೇತ್ರಿ, ಸಿದ್ಧರಾಮೇಶ್ವರರು ಸೋಲಾಪುರ ಜಿಲ್ಲೆಯ ಸೊನ್ನಲಗಿ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಅವರ ಮೂಲ ಹೆಸರು ಧೂಳಿಮಾಂಕಾಳ. ಅವರು 68,000 ವಚನಗಳನ್ನು ಬರೆದಿದ್ದು,  ಕೇವಲ 1,679 ವಚನ ಲಭ್ಯವಾಗಿವೆ ಎಂದರು.ಜ್ಞಾನಯೋಗಾಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಿದ್ಧೇಶ್ವರ ಸಂಸ್ಥೆಯ ಚೇರಮನ್‌ ಬಸಯ್ಯ ಎಸ್.ಹಿರೇಮಠ, ಉಪಾಧ್ಯಕ್ಷ ಸಂಗು ಸಜ್ಜನ, ಜಿಲ್ಲಾಧಿಕಾರಿ ರಿತ್ವಿಕ್ ಪಾಂಡೆ, ಭೋವಿ ಸಮಾಜದ ಮುಖಂಡ ರಾಜು ಆಲಕುಂಟೆ ವೇದಿಕೆಯಲ್ಲಿದ್ದರು.ಇದಕ್ಕೂ ಮೊದಲು ನಗರದ ಸಿದ್ಧರಾಮೇಶ್ವರ ದೇವಾಲಯದಿಂದ ರಂಗ ಮಂದಿರದ ವರೆಗೆ ವಿವಿಧ ಕಲಾತಂಡಗಳೊಂದಿಗೆ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry