ಕೆರೆಗೆ ನೀರು: ರೈತರ ಮುತ್ತಿಗೆ

7

ಕೆರೆಗೆ ನೀರು: ರೈತರ ಮುತ್ತಿಗೆ

Published:
Updated:
ಕೆರೆಗೆ ನೀರು: ರೈತರ ಮುತ್ತಿಗೆ

ತಿಪಟೂರು: ತಾಲ್ಲೂಕಿನ ಬೆಸಿಗೆ ರಾಮ­ಚಂದ್ರಪುರ, ಕೆರೆಗೋಡಿಯ ಚಿಕ್ಕಕೆರೆ ಹಾಗೂ ತಡಸೂರು ಕೆರೆಗಳಿಗೆ ನಾಲೆ­ಯಿಂದ ಹೇಮಾವತಿ ನೀರನ್ನು ತಕ್ಷಣ ಹರಿ­ಸುವಂತೆ ಆಗ್ರಹಿಸಿ ಸುತ್ತ­ಮುತ್ತಲ ಗ್ರಾಮಸ್ಥರು ಶುಕ್ರವಾರ ಹೊಗವನಘಟ್ಟ ಸಮೀಪದ ಹೊನ್ನವಳ್ಳಿ ಏತ ನೀರಾವರಿ ಜಾಕ್‌ವೆಲ್‌ಗೆ ಮುಕ್ತಿಗೆ ಹಾಕಿ ಪ್ರತಿಭಟಿಸಿದರು.ತಡಸೂರು, ರಾಮಚಂದ್ರಪುರ, ಕೆರೆ­ಗೋಡಿ, ಮಲ್ಲೇನಹಳ್ಳಿ ಮತ್ತಿತರರ ಗ್ರಾಮ­ಗಳ ಗ್ರಾಮಸ್ಥರು ಜಾಕ್‌ವೆಲ್ ಸಿಬ್ಬಂದಿ ಹೊರಗೆ ಕಳುಹಿಸಿ ಬಾಗಿಲು ಮುಚ್ಚಿ ಧರಣಿ ಕುಳಿತರು. ಹೊನ್ನವಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಬರುವ ರಾಮಚಂದ್ರಪುರ, ಕೆರೆ ಗೋಡಿಯ ಚಿಕ್ಕಕೆರೆ ಹಾಗೂ ತಡಸೂರು ಕೆರೆಗಳಿಗೆ ಕಳೆದ ವರ್ಷ ಕೂಡ ನೀರು ಬಿಟ್ಟಿರಲಿಲ್ಲ.ಬೆಸಿಗೆ ಕೆರೆಗೆ ಯೋಜನೆ ಆರಂಭದ ದಿನದಿಂದಲೂ ನೀರು ಹರಿದಿಲ್ಲ.  ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ತಕ್ಷಣ ಈ ಕೆರೆಗಳಿಗೆ ನೀರು ಹರಿಸದಿದ್ದರೆ ಯಾವ ಕೆರೆಗಳಿಗೂ ನೀರು ಹರಿಸಲು ಬಿಡು­ವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಸಂಬಂಧಿಸಿದ ಅಧಿಕಾರಿಗಳು ಲೋಪ ಅರಿತು ತಕ್ಷಣ ನೀರು ಹರಿಸಲು ಆದೇಶ ನೀಡಬೇಕು. ಅಲ್ಲಿವರೆಗೆ ಜಾಗ ಬಿಟ್ಟು ಕದಲುವುದಿಲ್ಲ. ಜಾಕ್‌ವೆಲ್ ಯಂತ್ರಗಳ ಚಾಲನೆಗೆ ಅವಕಾಶ ನೀಡುವುದಿಲ್ಲ ಎಂದು  ಪಟ್ಟು ಹಿಡಿದರು. ಆಗ ಹೇಮಾ­ವತಿ ಅಧಿಕಾರಿ ವಿಜಯ್‌­ಕುಮಾರ್‌ಗೆ ದೂರವಾಣಿ ಮೂಲಕ ಪರಿಸ್ಥಿತಿ ಮಾಹಿತಿ ನೀಡಿದರು.ಬೆಂಗಳೂರಿನಲ್ಲಿದ್ದ ಆ ಅಧಿಕಾರಿ ದೂರವಾಣಿ ಮೂಲಕ ಧರಣಿ ನಿರತರ ಜತೆ ಮಾತನಾಡಿ, ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ಏಕಕಾಲದಲ್ಲಿ ನೀರು ಹರಿಸಲು ಸಾಧ್ಯ­ವಿಲ್ಲ. ಸರದಿ ಮೇಲೆ ನೀರು ಬಿಡಲಾಗು­ವುದು. ಈಗ ಹೊನ್ನವಳ್ಳಿ ಭಾಗದ ಕೆರೆ­ಗಳಿಗೆ ನೀರು ಹರಿಸಲಾಗುತ್ತಿದೆ.ಅಕ್ಟೋ­ಬರ್ ಅ.7ರಿಂದ ಬೆಸಿಗೆ, ಕೆರೆ­ಗೋಡಿ ಚಿಕ್ಕಕೆರೆ, ತಡಸೂರು ಕೆರೆಯೂ ಸೇರಿದಂತೆ ಕಸಬ ಹೋಬಳಿಯ ಏಳು ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.ಅ.7ರ ನಂತರ ತಮ್ಮ ಕೆರೆಗಳಿಗೆ ನೀರು ಬರದಿದ್ದಲ್ಲಿ ಯಾವ ಕಾರಣಕ್ಕೂ ಕಾರ್ಯಾ­ಗಾರ­ದಿಂದ ಬೇರೆ ಕೆರೆಗಳಿಗೆ ನೀರು ಹರಿಸಲು ಅವಕಾಶ ನೀಡುವು­ದಿಲ್ಲ ಎಂದು ಎಚ್ಚರಿಸಿದ ಗ್ರಾಮಸ್ಥರು ಧರಣಿ ಅಂತ್ಯಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry