ಕೆರೆಮನೆ-ಯಕ್ಷ ತ್ರಿವೇಣಿ

7

ಕೆರೆಮನೆ-ಯಕ್ಷ ತ್ರಿವೇಣಿ

Published:
Updated:
ಕೆರೆಮನೆ-ಯಕ್ಷ ತ್ರಿವೇಣಿ

ಯಕ್ಷಗಾನದಲ್ಲಿ `ಕೆರೆಮನೆ ಘರಾನಾ~ವನ್ನು ಸೃಜಿಸಿದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಅಮೃತೋತ್ಸವದ ಸಂಭ್ರಮವೂ, ಮೂರನೇ ತಲೆಮಾರಿನ ಸವಾಲೂ ಏಕಕಾಲಕ್ಕೆ ಘಟಿಸುತ್ತಿದೆ. ಹಾಗಾಗಿ ಯಕ್ಷಗಾನ ಪ್ರದರ್ಶನ-ಪ್ರಯೋಗ-ನಿರ್ದೇಶನದಲ್ಲಿ ಅಮೃತತ್ವವನ್ನು ಉಳಿಸಿಕೊಂಡು `ಕೆರೆಮನೆ~ಯೆಂಬ ಯಕ್ಷಮಹಾವೃಕ್ಷದ ನೆರಳಿನಲ್ಲಿ ಹೆಮ್ಮರವಾಗಿ ಬೆಳೆಯುವ ಪಂಥಾಹ್ವಾನದೊಂದಿಗೆ ಧೃಡಹೆಜ್ಜೆಗಳನ್ನೂರುತ್ತಿರುವ ಕೆರೆಮನೆ ಶಿವಾನಂದ ಹೆಗಡೆಯವರದು ಮಹತ್ವದ ಜವಾಬ್ದಾರಿ.ಈ ಭಾರವನ್ನು ಹೊತ್ತು, ಅದನ್ನು ಯಶಸ್ವಿಯಾಗಿ ಸಮದೂಗಿಸಬಲ್ಲ, ಎಲ್ಲಾ ಸಾಧ್ಯತೆಗಳಿಗೆ ತೆರೆದುಕೊಂಡು ಯಕ್ಷ ಕಲಾಕ್ಷೇತ್ರದ ಅಗ್ರಪಂಕ್ತಿಯನ್ನು ಕಾಯ್ದುಕೊಳ್ಳಬಲ್ಲ ಸಾಮಾರ್ಥ್ಯಕ್ಕೆ ಸಾಕ್ಷಿಯಾದದ್ದು ಮಂಗಳೂರಿನ ಪುರಭವನದಲ್ಲಿ 3 ದಿನಗಳ ಸಂಜೆ ನಡೆದ ಶ್ರೀಮಯ ಯಕ್ಷತ್ರಿವೇಣಿ ಕಾರ್ಯಕ್ರಮ, ಸನ್ಮಾನ -ಪ್ರದರ್ಶನಗಳ ಸಂಭ್ರಮ.ಸೌಜನ್ಯ, ಹೃದಯವಂತಿಕೆ, ಮತ್ತು ದಕ್ಷತೆಗಳು ಮುಪ್ಪುರಿಗೊಂಡ ಈ ಮೂರು ದಿನದ ಸರಣಿಯ ಸಂಘಟನೆ, ಅಭಿಜ್ಞಾನ ಮತ್ತು ರಸಾಸ್ವಾದನದ ಲಕ್ಷ್ಯಗಳನ್ನೂ ತನ್ನೊಳಗೆ ತುಂಬಿಕೊಂಡಿದ್ದರಿಂದ ಒಂದು ದಿನದ ಯಶಸ್ವೀ ಕಾರ್ಯಕ್ರಮವಾಗಿ ದಾಖಲಾಯಿತು. ತೆಂಕಿನ ನೆಲದಲ್ಲಿ ಬಡಗಿನ ಪ್ರದರ್ಶನವನ್ನು ಏರ್ಪಡಿಸುವ ಸಂದರ್ಭದಲ್ಲಿ ತೆಂಕಿನ ಅಗ್ರಮಾನ್ಯ ಕಲಾವಿದರನ್ನು ಸನ್ಮಾನಿಸುವ ತೆಂಕು-ಬಡಗುಗಳ ಮೇರೆಯನ್ನು ಮೀರಿದ ಪರಿಕಲ್ಪನೆ ಪರಸ್ಪರ ಕೊಡುಕೊಳ್ಳುವಿಕೆಯನ್ನು ಸಾರಿ ಹೇಳಿತು. ಸನ್ಮಾನ ಸ್ವೀಕರಿಸಿದ ಹಿರಿಯ ಕಲಾವಿದರಾದ ಸಂಪಾಜೆ ಶೀನಪ್ಪ ರೈ, ಶಿವರಾಮ ಜೋಗಿ, ಕುರಿಯ ಗಣಪತಿ ಶಾಸ್ತ್ರಿಯವರೂ ಇದನ್ನೇ ಧ್ವನಿಸಿದ್ದು ಅರ್ಥಪೂರ್ಣ.ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಮಹೋದಯರು ಯಾರೂ ವ್ಯರ್ಥಾಲಾಪದಲ್ಲಿ ತೊಡಗಿ ಸಭಿಕರ ತಾಳ್ಮೆ ಪರೀಕ್ಷಿಸುವಂತಾಗಲಿಲ್ಲ ಎಂಬುದು ಸಂಘಟನೆಯ ಯಶಸ್ಸಿಗೆ ಸಾಕ್ಷಿ.

ಮೂರೂ ದಿನಗಳ ಯಕ್ಷಗಾನ ಪ್ರದರ್ಶನ (ಮಾರುತಿ, ಪ್ರತಾಪ, ಪಂಚವಟಿ, ಮತ್ತು ಗದಾಯುದ್ಧ)ದಲ್ಲಿ `ನಿರ್ದೇಶನ~ ಔಚಿತ್ಯವನ್ನು ರಸವತ್ತಾಗಿ ಬಿಂಬಿಸಿದವರು ಶಿವಾನಂದ ಹೆಗಡೆ.

 

ಯಕ್ಷಗಾನದ ಮೂಲಸೆಲೆಗಳಾಗಿರುವ `ಆಶುತ್ವ~ ಮತ್ತು `ಭಾಗವತರ ನಿರ್ದೇಶನ~ ತತ್ವಗಳಿಗೆ ಎರವಾಗದಂತೆ ಇದನ್ನು ಸಾಧಿಸುವ ಮೂಲಕ ಒಟ್ಟು ಪ್ರದರ್ಶನವನ್ನು ಹೇಗೆ ಉನ್ನತೀಕರಿಸಲು ಸಾಧ್ಯ ಎಂಬುದಕ್ಕೆ ರಂಗ ಪ್ರಯೋಗದ ಸುಂದರ ಪ್ರಾತ್ಯಕ್ಷಿಕೆಯನ್ನು ಅವರು ಒದಗಿಸಿದರು. ಯಾವುದೇ ರಾಗವನ್ನಾದರೂ ಶುದ್ಧ-ಸ್ಪಷ್ಟ ಮತ್ತು ಸುಭಗವಾದ ತ್ರಿಸ್ಥಾಯಿ ಸಂಚಾರದಲ್ಲಿ ಸಾಹಿತ್ಯ- ಛಂದೋಬದ್ಧತೆಯಿಂದ ಹಾಡಬಲ್ಲ ಭಾಗವತರು (ಅನಂತ ಹೆಗಡೆ ದಂತಳಿಕೆ) ಶಿಷ್ಟ ಯಕ್ಷಗಾನದ ಪಾರಂಪರಿಕ ನಡತೆಗಳೊಂದಿಗೆ, ಹೆಜ್ಜೆಗಳಿಗೆ, ಆಲಾಪನೆಗಳಿಗೆ, ಭಾವನೆಗಳಿಗೆ, ಸಂದರ್ಭಗಳಿಗೆ ನುಡಿಯಬಲ್ಲ ಮದ್ದಳೆ (ಪರಮೇಶ್ವರ ಹೆಗಡೆ ತಾರೇಸರ) ಮತ್ತು ಚೆಂಡೆಯ (ಗಜಾನನ ಹೆಗಡೆ ಮುರೂರು) `ಪಕ್ವವಾದ್ಯ~ ಕಲಾವಿದರ ಸಹಕಾರದೊಂದಿಗೆ ಯಕ್ಷಗಾನಕ್ಕೆ ರಂಗಶಿಸ್ತಿನ ಮಾದರಿಯನ್ನು ತೆರೆದಿಟ್ಟರು. ಸ್ವಪ್ರತಿಷ್ಠೆಯನ್ನು ಮೆರೆಸುವ, ಅನವಶ್ಯ ಸಂದರ್ಭಗಳಲ್ಲೂ ಚರ್ವಿತಾಭಿನಯದ ಮೂಲಕ ಭೀಭತ್ಸ ಸೃಷ್ಟಿಸುವ, ದುರ್ಬಲ ಮಂದ್ರಾ ಮೂಲಕ -ಜಾಳು ಮಾತುಗಳ ಮೂಲಕ ಪ್ರೇಕ್ಷಕರ ಕನಿಕರಕ್ಕೆ ಈಡಾಗುವ ಸಂದರ್ಭಗಳನ್ನು ಯಾವ ಪಾತ್ರಧಾರಿಯೂ ಸೃಷ್ಟಿಸಿಕೊಳ್ಳಲಿಲ್ಲ.

 

ಬದಲಾಗಿ ಅರ್ಥಪೂರ್ಣ ಮುಖಾಭಿವ್ಯಕ್ತಿ, ಭಾವಭಿನಯ, ಸಾಂದ್ರವಾದ ವಾಚಿಕ- ಆಂಗಿಕಾಭಿನಯ, ಸಾಂದರ್ಭಿಕ ಸಮೂಹಾಭಿವ್ಯಕ್ತಿ, ಮೌನ, ನೋಟ, ನಿಲುವು ಮತ್ತಿತರ ಸೂಕ್ಷ್ಮಾತಿಸೂಕ್ಷ್ಮ ರಂಗ ಸಾಧ್ಯತೆಗಳನ್ನು ಅಭಿವ್ಯಕ್ತಿಸಿ, ಒಟ್ಟು ಪ್ರದರ್ಶನದ ಮೌಲ್ಯ ವಿಸ್ತಾರಗೊಳ್ಳುವುದಕ್ಕೆ ಕಾರಣರಾದರು. ಹಿರಿಯ-ಕಿರಿಯ ಕಲಾವಿದರೆನ್ನೆದೆ ನಾಯಕ-ಪ್ರತಿನಾಯಕ-ಖಳನಾಯಕ, ಸ್ತ್ರೀ-ಹಾಸ್ಯ ಪಾತ್ರ ಎನ್ನುವ ಭೇದವಿಲ್ಲದೆ ಎಲ್ಲರೂ ಈ ಶಿಸ್ತಿನ ಸೌಂದರ್ಯ ಕಾಯ್ದುಕೊಂಡ ಕಾರಣ ಯಕ್ಷಗಾನ ಪ್ರದರ್ಶನದ ಉನ್ನತೀಕರಣ ಸಾಧ್ಯವಾಯಿತು. ಹಾಗಾದ್ದರಿಂದ ಮಂಗಳೂರಿನ ಯಕ್ಷಗಾನ ಪ್ರೇಕ್ಷಕರ `ಮನ~ವೆಂಬ `ಕೆರೆ~ಯಲ್ಲಿ ರಸೋತ್ಪತ್ತಿಯೇ `ಒರತೆ~ಯಾಯಿತು.ಒಟ್ಟಾರೆ ಅಭಿಪ್ರಾಯ ದಾಖಲಿಸುವುದಾದರೆ ಸಂಘಟಕ- ಕಲಾವಿದ- ಪ್ರೇಕ್ಷಕರನ್ನೊಳಗೊಂಡ ಯಕ್ಷ ತ್ರಿವೇಣಿ ಇಡಗುಂಜಿ ಮೇಳಕ್ಕೆ ಸ್ಥಾಯಿಯಾಯಿತು ಎನ್ನಲು ಅಡ್ಡಿಯಿಲ್ಲ. ಆ ಕಾರಣಕ್ಕಾಗಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರಿನ ಧನ್ಯತಾ ಪ್ರತಿಷ್ಠಾನ, ಸರಯೂ ಬಾಲ ಯಕ್ಷವೃಂದ, ಸಂಘಟಕ ನರಸಿಂಹ ಹೆಗ್ಗಡೆಯವರಿಗೆ, ಸಹಕರಿಸಿದವರಿಗೆ ಮತ್ತು ಸಭ್ಯ, ಸುಸಂಸ್ಕೃತ ಪ್ರೇಕ್ಷಕ ರಸಿಕ ವರ್ಗಕ್ಕೆ ಅಭಿನಂದನೆ ಸಲ್ಲಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry