ಕೆರೆಯಲ್ಲಿ ಚಿರತೆ: ಗ್ರಾಮಸ್ಥರಲ್ಲಿ ಆತಂಕ

7

ಕೆರೆಯಲ್ಲಿ ಚಿರತೆ: ಗ್ರಾಮಸ್ಥರಲ್ಲಿ ಆತಂಕ

Published:
Updated:

ಹಿರೀಸಾವೆ : ಸಮೀಪದ ದೊಡ್ಡಕೆರೆ­ಯಲ್ಲಿ ಗುರುವಾರ ಚಿರತೆ ಕಾಣಿಸಿ­ಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಯಗೊಂಡಿದ್ದಾರೆ.ತೂಬಿನಕೆರೆ ಗ್ರಾಮದ ರಂಗಸ್ವಾಮಿ ಮತ್ತು ಕೊಳ್ಳೇನಹಳ್ಳಿ ಗ್ರಾಮದ ರಾಜೇಶ್ ಎಂಬವರು  ಬೈಕ್‌ನಲ್ಲಿ ಹಿರೀಸಾವೆಗೆ ಬರುತ್ತಿದ್ದಾಗ, ಚಿರತೆ­ಯು ಗದ್ದೆಯಿಂದ ಕೆರೆಯೊಳಗೆ ಹೋಗಿದ್ದನ್ನು ನೋಡಿ, ತಕ್ಷಣ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದರು.ಹೋಬಳಿಯಲ್ಲಿ ಹಲವು ದಿನಗಳಿಂದ ಚಿರತೆಯು ರಾತ್ರಿ ಸಮಯದಲ್ಲಿ ತೋಟದ ಮನೆಗಳ ಬಳಿ ಇದ್ದ, ನಾಯಿ, ರಾಸು ಮತ್ತು ಕುರಿಗಳ ಮೇಲೆ ದಾಳಿ ಮಾಡುತ್ತಿದೆ. ಗುರುವಾರ ಬೆಳಿಗ್ಗೆ ಕೆರೆಯ ಬಳಿ ಕಾಣಿಸಿಕೊಂಡಿದೆ. ಕೆರೆಯೊಳಗೆ ಕುರುಚಲು ಗಿಡಗಳು ಬೆಳೆದಿದ್ದು, ಅದರೊಳಗೆ ಚಿರತೆ ಇರು­ವುದನ್ನು ಜಾನುವಾರು ಮೇಯಿಸಲು ಬಂದವರೂ ದೃಢಪಡಿಸಿದರು.ಸ್ಥಳಕ್ಕೆ ಚನ್ನರಾಯಪಟ್ಟಣ ವೃತ್ತ ಅರಣ್ಯಾಧಿಕಾರಿ ಧರ್ಮಪ್ಪ ಮತ್ತು ಸಿಬ್ಬಂದಿ, ಹಿರೀಸಾವೆ ಪೊಲೀಸರು ಬಂದು, ಸಾರ್ವಜನಿಕರು ಚಿರತೆ­ಯನ್ನು ಗಾಬರಿ­ಗೊಳಿಸದಂತೆ  ಮನವಿ ಮಾಡಿದರು.   ನಾಲ್ಕು ದಿನಗಳ ಹಿಂದೆ ಕೊಳ್ಳೇನಹಳ್ಳಿ ಗ್ರಾಮದ ಎಚ್.ಕೆ. ಮಂಜುನಾಥ ಎಂಬವರಿಗೆ ಸೇರಿದ ಕರುವನ್ನು ಚಿರತೆ ತಿಂದು ಹಾಕಿತ್ತು.ಬುಧವಾರ ತೂಬಿನಕೆರೆ ಗ್ರಾಮದಲ್ಲಿ ಕುರಿ­ಯೊಂದನ್ನು ಎಳೆದುಕೊಂಡು ಹೋಗಿತ್ತು. ಇದೀಗ ಕೆರೆಯಲ್ಲಿ ಕಾಣಿಸಿ­ಕೊಂಡಿದ್ದರಿಂದ ತೂಬಿನಕೆರೆ, ಕೊಳ್ಳೇನ­ಹಳ್ಳಿ, ಕೊತ್ತನಹಳ್ಳಿ, ಸಬ್ಬನಹಳ್ಳಿ ಮತ್ತು ಹಿರೀಸಾವೆಯ ಜನರಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry