ಸೋಮವಾರ, ಮಾರ್ಚ್ 1, 2021
24 °C

ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

ಆನೇಕಲ್‌: ಈಜಲು ತೆರಳಿದ ಮೂರು ಮಂದಿ ಬಾಲಕರು ನೀರು ಪಾಲಾದ ದಾರುಣ ಘಟನೆ ತಾಲ್ಲೂಕಿನ ಹೆನ್ನಾಗರ ಕೆರೆಯಲ್ಲಿ ಭಾನುವಾರ ನಡೆದಿದೆ.ಮೃತ ಬಾಲಕರನ್ನು ತಾಲ್ಲೂಕಿನ ರಾಜಾಪುರದ ಸಂತೋಷ್‌(13), ಚೇತನ್‌ಕುಮಾರ್‌ (10), ಗಣೇಶ್‌ (8) ಎಂದು ಗುರುತಿಸಲಾಗಿದೆ.ರಾಜಾಪುರದ ಸೋಮಣ್ಣ ಅವರ ಪುತ್ರ ಸಂತೋಷ್‌ ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ರಾಜಾಪುರದ ಬಸಮ್ಮ ಅವರ ಮಗ ಚೇತನ್‌ಕುಮಾರ್‌ ರಾಜಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮತ್ತೊಬ್ಬ ಬಾಲಕ ಗಣೇಶ್ ಬನ್ನೇರುಘಟ್ಟದ ಕೃಷ್ಣಮೂರ್ತಿ ಹಾಗೂ ಮಾಲಾ ದಂಪತಿಯ ಪುತ್ರನಾಗಿದ್ದು ಜಿಗಣಿ ಸಮೀಪದ ಹರಪನಹಳ್ಳಿಯ  ಬೃಂದಾವನ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜಾಪುರದ ಅಜ್ಜಿಯ ಮನೆಗೆ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಬಂದಿದ್ದ ಬಾಲಕ ನೀರುಪಾಲಾಗಿದ್ದಾನೆ.ಶಾಲೆಗೆ ರಜೆ ಇದ್ದುದ್ದರಿಂದ ಭಾನುವಾರ ಮಧ್ಯಾಹ್ನ ನಾಲ್ಕು ಮಂದಿ ವಿದ್ಯಾರ್ಥಿಗಳು ನೀರು ತುಂಬಿದ್ದ ಹೆನ್ನಾಗರ ಕೆರೆಯತ್ತ ತೆರಳಿದ್ದಾರೆ. ಕೈ ಕೈ ಹಿಡಿದುಕೊಂಡು ನೀರಿನಲ್ಲಿ ಆಟವಾಡುತ್ತಿದ್ದಾಗ ಅಕಸ್ಮಿಕವಾಗಿ ಕೆರೆಯಲ್ಲಿ ತೋಡಲಾಗಿದ್ದ ಆಳವಾದ ಗುಂಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಜೊತೆಯಲ್ಲಿ ಹೋಗಿದ್ದ ಕಾರ್ತಿಕ್ ಎಂಬ ಬಾಲಕ ಸ್ವಲ್ಪ ಹಿಂದೆ ಎನ್ನಲಾಗಿದೆ.ಸ್ನೇಹಿತರು ಮುಳುಗುತ್ತಿದ್ದಂತೆ ಭಯಗೊಂಡ ಕಾರ್ತಿಕ್ ಗ್ರಾಮಕ್ಕೆ ಓಡಿಬಂದು ಮಾಹಿತಿ ನೀಡಿದ್ದಾನೆ. ಕೂಡಲೇ ಕೆರೆಯತ್ತ ತೆರಳಿದ ಸ್ಥಳೀಯರು ಹಾಗೂ ಪೋಷಕರು ಹರಸಾಹಸ ಮಾಡಿ ಹುಡುಕಲು ಪ್ರಯತ್ನಿಸಿದರು. ಆದರೆ ಸುಮಾರು ಒಂದು ತಾಸು ಹುಡುಕಿದರೂ ಸಹ ಯಾವುದೇ ಸುಳಿವು ದೊರೆಯಲಿಲ್ಲ. ಗ್ರಾಮಸ್ಥರು ಅಗ್ನಿಶಾಮಕದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ತೆಪ್ಪದ ಮೂಲಕ ಕೆರೆಯಲ್ಲಿ ಹುಡುಕುವ ಪ್ರಯತ್ನ ನಡೆಸಿದರು. ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಹಾಗೂ ನುರಿತ ಈಜುಗಾರರು ಮೂರು ಮಂದಿ ಬಾಲಕರ ಕಳೇಬರವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.ಕೆರೆಯಿಂದ ಒಬ್ಬೊಬ್ಬರು ಬಾಲಕರ ಮೃತದೇಹವನ್ನು ಹೊರತೆಗೆದು ಕೆರೆಯ ದಂಡೆಯತ್ತ ತರುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ತಾಯಂದಿರು ತಮ್ಮ ಮಕ್ಕಳನ್ನು ನೆನೆದು ದುಃಖಿಸುತ್ತಿದ್ದರು.ಮಕ್ಕಳನ್ನು ಕಳೆದುಕೊಂಡಿದ್ದ ಇಬ್ಬರು ತಾಯಂದಿರು ಮೃತದೇಹಗಳನ್ನು ಕಂಡು ರೋದಿಸಿ ಪ್ರಜ್ಞೆ ತಪ್ಪಿ ಬಿದ್ದರು. ಹಲವು ಆಸೆಗಳನ್ನು ಹೊತ್ತು ಬೆಳೆಸಿದ್ದ ಮಕ್ಕಳು ಕೈಗೆ ಬರುವ ಮುನ್ನವೇ ನೀರು ಪಾಲಾದರು ಎಂದು ರೋಧಿಸುತ್ತಿದ್ದ ಕುಟುಂಬದವರ ಆಕ್ರಂದನ ಕರುಳು ಕಿತ್ತುಬರುವಂತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.