ಕೆರೆಯ ವಿಲಾಸ

7

ಕೆರೆಯ ವಿಲಾಸ

Published:
Updated:
ಕೆರೆಯ ವಿಲಾಸ

ಚಾಮರಾಜಪೇಟೆ ಬಳಿ ಕಾರ್ಪೊರೇಶನ್‌ ಬಾಲಕಿಯರ ಪ್ರೌಢಶಾಲೆಯಿಂದ ಕೂಗಳತೆ ದೂರದಲ್ಲಿರುವ ಕೆಂಪಾಂಬುಧಿ ಕೆರೆ ಕಾಯಕಲ್ಪದ ಹೆಸರಿನಲ್ಲಿ ಪ್ರತಿವರ್ಷ ಸುದ್ದಿಯಾಗುತ್ತದೆ. ಮಾಜಿ ಮೇಯರ್ ಡಿ. ವೆಂಕಟೇಶಮೂರ್ತಿ ಅವರು 2012ರಲ್ಲಿ ಪ್ರಕಟಿಸಿದಂತೆ ಕೆಲಸ ನಡೆದಿದ್ದರೂ ಇಷ್ಟು ಹೊತ್ತಿಗೆ ಅದೊಂದು ಪ್ರವಾಸಿತಾಣವಾಗುತ್ತಿತ್ತು. ಹಾಲಿ ಮೇಯರ್ ಕಳೆದ ತಿಂಗಳು ಮತ್ತೆ ಕಾಯಕಲ್ಪದ ಮಾತು ಆಡಿದ್ದಾರೆ.ಹೀಗೆ ಕೆಂಪಾಂಬುಧಿ ಕೆರೆ ಅಭಿವೃದ್ಧಿ ಕುರಿತ ಆಶ್ವಾಸನೆಗಳು ಪ್ರತಿವರ್ಷ ನವೀಕರಣಗೊಳ್ಳುತ್ತಿರುವ ಹೊತ್ತಿನಲ್ಲಿ ನಾಲ್ಕೈದು ದಶಕಗಳ ಹಿಂದೆ ಈ ಕೆರೆಯಲ್ಲಿ ನೀರಾಟವಾಡುತ್ತಿದ್ದವರಿಗೆ ಆ ದಿನಗಳು ಬಹಳ ಕಾಡುತ್ತಿದೆಯಂತೆ. ಪ್ರಸ್ತುತ ಕನ್ನಿಂಗ್‌ಹ್ಯಾಂ ರಸ್ತೆಯ ನಿವಾಸಿಯಾಗಿರುವ 79 ವರ್ಷದ ಹಿರಿಯಜ್ಜ ಬಿ.ಕೆ. ವೇಣುಗೋಪಾಲ್‌ ಅವರು ಹಳೆಯ ವೈಭವವನ್ನು ನೆನಪಿಸಿಕೊಂಡಿದ್ದಾರೆ. 40ರ ದಶಕದಲ್ಲಿ ನಗರದ ವಿವಿಧೆಡೆಯಿಂದ ಜನರು ಕುಟುಂಬ ಸಮೇತ ಬಂದು ಈ ಕೆರೆಯಲ್ಲಿ ಈಜಿ ಹೋಗುತ್ತಿದ್ದರಂತೆ. ಆಗ ಬಾಲಕ ವೇಣುಗೋಪಾಲ್‌ಗೆ ಅವರ ತಂದೆಯೇ ಈಜು ಕಲಿಸಿದ್ದರಂತೆ.ಕುದುರೆಯೇರಿ ಕೆರೆ ಏರಿಗೆ

‘ನನಗೆ ಮೂವರು ಸಹೋದರರು ಹಾಗೂ ಮೂರು ಮಂದಿ ಸಹೋದರಿಯರು. ತಂದೆ ಬಿ.ಟಿ. ಕೆಂಪಣ್ಣ ಅವರು ಜಯಚಾಮರಾಜೇಂದ್ರ ಒಡೆಯರ್‌ ಅವರ ಆಡಳಿತದಲ್ಲಿ ಡೆಪ್ಯೂಟಿ ಕಮಿಷನರ್‌ ಆಗಿದ್ದರು. ತಂದೆ ನಮ್ಮನ್ನು ಪ್ರತಿ ಭಾನುವಾರ ಬೆಳಿಗ್ಗೆ ಕೆಂಪಾಂಬುಧಿ ಕೆರೆಗೆ ಈಜು ಕಲಿಸಲೆಂದೇ ಕರೆದುಕೊಂಡು ಹೋಗುತ್ತಿದ್ದರು. ಚಾಮರಾಜಪೇಟೆಯಿಂದ ಕುದುರೆ ಮೇಲೆ ಹೋಗಿ ಸ್ನೇಹಿತರೊಂದಿಗೆ ಈಜುತ್ತಿದ್ದೆವು.

ಆಗ ಈಗಿನಂತೆ ಈಜುಕೋಳಗಳು ಇರಲಿಲ್ಲ. ಹಾಗಾಗಿ ಬಡವ ಬಲ್ಲಿದರೆನ್ನದೇ, ನಾಲ್ಕು ವರ್ಷದ ಮಗುವಿನಿಂದ ದೊಡ್ಡವರವರೆಗೂ ಕೆರೆಯಲ್ಲಿ ಈಜಿ, ನೀರಾಟವಾಡಿ ಆನಂದಿಸುತ್ತಿದ್ದರು. ಸರ್ಕಾರಿ ಅಧಿಕಾರಿಗಳೂ ಬರೋರು. ನಾನು ಈಜಲು ಭಯಪಟ್ಟು ಬಂಡೆಯ ಮೇಲೆ ನಿಂತರೆ ಅಪ್ಪನೇ ನನ್ನನ್ನು ನೀರಿಗಿಳಿಸುತ್ತಿದ್ದರು. ಬಸವನಗುಡಿ, ಚಾಮರಾಜಪೇಟೆ, ಶಂಕರಪುರ, ಅಕ್ಕಿಪೇಟೆ, ಚಿಕ್ಕಪೇಟೆ ಸೇರಿದಂತೆ ನಗರದ ಅನೇಕ ಬಡಾವಣೆಗಳಿಂದ ಈಜುವುದಕ್ಕಾಗಿಯೇ ಬರುತ್ತಿದ್ದರು.‘ಕೆಂಪಾಂಬುಧಿ ಅಲ್ಲದೆ ಹಲಸೂರು, ಸ್ಯಾಂಕಿ ಕೆರೆಗಳಿಗೂ ಈಜಲು ಹೋಗುತ್ತಿದ್ದೆವು. ಅಂದು ರಸ್ತೆಯಲ್ಲಿ ಒಂದು ಕಾರು ಕಂಡರೆ ವಿಶೇಷವಾಗಿತ್ತು. ಆಗ ಸುಮಾರು 5ರಿಂದ 6 ಲಕ್ಷ ಜನಸಂಖ್ಯೆ ಹೊಂದಿತ್ತು ಈ ಬೆಂಗಳೂರು. ಸುಮಾರು 47 ಎಕರೆ ವಿಸ್ತೀರ್ಣವಿದ್ದ ಕೆರೆ ಈಗ 36 ಎಕರೆಯಾಗಿದೆ. ಒತ್ತುವರಿಯೂ ಹೆಚ್ಚಾಗಿದೆ. ಅಂದು ಕೆರೆಯ ಸುತ್ತಮುತ್ತ ಗಿಡಮರಗಳಿದ್ದವು. ಸುಂದರ ಪರಿಸರದಲ್ಲಿ ಅನೇಕ ಹಕ್ಕಿಪಕ್ಷಿಗಳು ಕಂಡು ಬರುತ್ತಿದ್ದವು. ಆಗಿನ ಮಜಾವೇ ವರ್ಣನಾತೀತ.

ಆದರೆ ಈಗ ಕೆರೆ ತುಂಬ ಕೊಳಚೆ ನೀರು ತುಂಬಿಕೊಂಡಿದೆ, ಹೂಳು ಸಹ ಹೆಚ್ಚಾಗಿದೆ. ಆದ್ದರಿಂದ ಪಾಲಿಕೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಗಿಡಗಳನ್ನು ಹಾಕಿ ಪರಿಸರ ಕಾಪಾಡಬೇಕು, ಒತ್ತುವರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ ಬಿ.ಕೆ. ವೇಣುಗೋಪಾಲ್‌. ಕೆಂಪಾಂಬುಧಿ ಕೆರೆ ಅಲ್ಲದೇ ಕಾರ್ಪೊರೇಶನ್‌ನ ಈಜುಕೋಳಕ್ಕೆ ವೇಣುಗೋಪಾಲ್‌ ಈಜಲು ಸ್ನೇಹಿತರೊಂದಿಗೆ ಸೈಕಲ್‌ನಲ್ಲಿ ಬರುತ್ತಿದ್ದರಂತೆ.ಕೆರೆಗೆ ಕಾಯಕಲ್ಪ?

ಪ್ರತಿವರ್ಷ ಜನಪ್ರತಿನಿಧಿಗಳು ಕೆರೆ ಪ್ರದೇಶಗಳಿಗೆ ಭೇಟಿ ನೀಡುವುದು, ಅಭಿವೃದ್ಧಿಯ ಮಾತಾಡುವುದು ಸಾಮಾನ್ಯವಾಗಿದೆ. ಕಳೆದ ತಿಂಗಳು ಕೆಂಪಾಂಬುಧಿ ಕೆರೆಗೆ ಭೇಟಿ ನೀಡಿದ ಹಾಲಿ ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಅವರೂ ಕೆರೆ ಸ್ಥಿತಿಗತಿ ಪರಿಶೀಲಿಸಿದ್ದರು. ಸದ್ಯಕ್ಕೆ ಕೆಂಪಾಂಬುಧಿ ಕೆರೆಗೆ ಎದುರಾಗಿರುವ ದೊಡ್ಡ ಆಪತ್ತು ಕೊಳಚೆ ನೀರು ಮತ್ತು ತ್ಯಾಜ್ಯಗಳದ್ದು.

ಕೆರೆಗೆ ಎಗ್ಗಿಲ್ಲದೆ ಹರಿದುಬರುತ್ತಿರುವ ಕೊಳಚೆ ನೀರನ್ನು ತಡೆದು ಚರಂಡಿಗೆ ಹರಿದುಹೋಗುವಂತೆ ಸಂಪರ್ಕ ಕಲ್ಪಿಸಬೇಕು ಮತ್ತು ಇಲ್ಲಿ ನಿರ್ಮಿಸಲಾಗಿರುವ ಉದ್ಯಾನವನ್ನು ಅಭಿವೃದ್ಧಿ ಮಾಡಬೇಕು ಎಂದು ಅಧಿಕಾರಿಗಳಿಗೆ ಮೇಯರ್‌ ಸೂಚಿಸಿದ್ದಾರೆ. ಇದು ಮತ್ತೊಂದು ಆಶ್ವಾಸನೆಯಾಗದೆ ಕಾರ್ಯರೂಪಕ್ಕೆ ಬರುವುದೇ ಎಂದು ವೇಣುಗೋಪಾಲ್‌ ಪ್ರಶ್ನಿಸುತ್ತಾರೆ. ಐತಿಹಾಸಿಕ ಹಿನ್ನೆಲೆಯಲ್ಲಿ ಕಟ್ಟಿಸಲಾದ ಈ ಕೆರೆಯ ಸೊಬಗು ಈಗ ಉಳಿದಿಲ್ಲ ನಿಜ. ಆದರೆ ಈಗಿರುವಷ್ಟು ಕೆರೆ ಪ್ರದೇಶವನ್ನಾದರೂ ಉಳಿಸಿಕೊಳ್ಳಲು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹ.

ಕೆರೆಯ ಇತಿಹಾಸ

ತಮ್ಮ ಕುಲದೇವತೆ ಕೆಂಪಮ್ಮನ ಹೆಸರಿನಲ್ಲಿ ಕೆಂಪೇಗೌಡರು ನಿರ್ಮಿಸಿದ ಈ ಕೆರೆಯನ್ನು ಇಮ್ಮಡಿ ಕೆಂಪೇಗೌಡ ಅವರು ದುರಸ್ತಿ ಮಾಡಿಸಿದರು. ಈ ಐತಿಹಾಸಿಕ ಕೆರೆಗೆ ಎರಡು ಕಲ್ಲಿನ ತೂಬು­ಗಳಿವೆ. ಇವು ನೀರನ್ನು ಹಾಯಿಸುವ ತೂಬುಗಳು. ಇವೆರಡು ತೂಬುಗಳು 30 ಅಡಿ ಅಂತರದಲ್ಲಿವೆ. ಕೃಷಿಗೆ ನೀರೊದಗಿಸುತ್ತಿದ್ದ ಈ ಕೆರೆ ಆಗಿನ ಕಾಲಕ್ಕೆ ಅತ್ಯುತ್ತಮ ಈಜುಕೊಳವೂ, ಜೊತೆಗೆ ಸುತ್ತಲಿನ ಜನರಿಗೆ ಕುಡಿಯುವ ನೀರಿನ ಆಗರವೂ ಆಗಿತ್ತು.ಜನರು ಸ್ವಪ್ರೇರಣೆಯಿಂದ ಈ ಕೆರೆಗೆ ಈಜು ಕಲಿಯಲು, ಈಜಲು ಬರುವುದನ್ನು ಗಮನಿಸಿದ ಅರಮನೆಯ ಸ್ಕೌಟ್‌ ವಿಭಾಗ ಈಜು ಕಲಿಸಲೆಂದೇ ‘ಡಾಲ್ಫಿನ್ ಕ್ಲಬ್‌’ ಎಂಬ ಈಜು ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿತು. ವಯಸ್ಸಿನ ಭೇದವಿಲ್ಲದೇ ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಈಜು ಕಲಿಸಲಾಗುತ್ತಿತ್ತು. 1921ರಲ್ಲಿ 13 ಮಂದಿಯೊಂದಿಗೆ ಆರಂಭವಾದ ಕ್ಲಬ್‌ನ ಸದಸ್ಯರ ಸಂಖ್ಯೆ 1930ರ ಹೊತ್ತಿಗೆ 2000ಕ್ಕೆ ಏರಿತು.

ಇದರಲ್ಲಿ 150 ಮಂದಿ ಮಹಿಳೆಯರಿದ್ದರು. ಈಜುವವರಿಗೆ ಏರಿಯಿಂದ ನೀರಿಗೆ ಜಿಗಿಯಲು ಅನುಕೂಲವಾಗುವಂತೆ ಅದೇ ವರ್ಷ ಎರಡು ಕಬ್ಬಿಣದ ಕಟ್ಟೆಗಳನ್ನು ಅಳವಡಿಸಲಾಯಿತಂತೆ. ಆ ಕಾಲದಲ್ಲಿ ಈಜು ಸ್ಪರ್ಧೆಗೆ ಕೆಂಪಾಂಬುಧಿ ಕೆರೆ  ಹೆಸರುವಾಸಿಯಾಗಿತ್ತು ಎಂಬ ಅಂಶ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ಬೈರಮ್ಮನ ಈಜು ಸಾಹಸ

ಕ್ಲಬ್‌ಗೆ ಅತೀ ಕಿರಿಯ ಸದಸ್ಯೆಯಾಗಿ ಸೇರಿಕೊಂಡ ಬೈರಮ್ಮ ನಿರಂತರ ಹತ್ತು ಗಂಟೆ ಕಾಲ ಈಜುವ ಸಾಹಸ ಮೆರೆದು ಬೆಂಗಳೂರಿನ ಜನರ ಮೆಚ್ಚುಗೆ ಪಡೆದಿದ್ದರು. ಚಾಮರಾಜಪೇಟೆಯ ಪಿಟೀಲು ವಿದ್ವಾಂಸ ಪಿ.ಶಿವಲಿಂಗಪ್ಪ ಅವರ ಮಗಳಾದ ಬೈರಮ್ಮ, 1934ರಲ್ಲಿ ಸತತ 12 ಗಂಟೆ ಈಜಿದ್ದರು. ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ನಗರದ ಸಾವಿರಾರು ಮಂದಿ ಜಮಾಯಿಸಿದ್ದರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry