ಶನಿವಾರ, ಮೇ 28, 2022
30 °C

ಕೆರೆ ಅಭಿವೃದ್ಧಿ ಅನುದಾನ ದುರುಪಯೋಗ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಇಲ್ಲಿಗೆ ಸಮೀಪದ ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಂಜೂರಾಗಿರುವ ಹಣವನ್ನು ಬಸವನಳ್ಳಿ ಕೆರೆ ಅಭಿವೃದ್ಧಿಗೆ ಉಪಯೋಗಿಸಿ ಅನುದಾನದ ದುರುಪಯೋಗ ಮಾಡಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹುನ್ನಾರ ನಡೆಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ದೊಡ್ಡಕೆರೆ ಅಭಿವೃದ್ಧಿಗೆ ಇಲಾಖೆ ವತಿಯಿಂದ ಬಿಡುಗಡೆಯಾಗಿರುವ ಹಣವನ್ನು ಬಸವನಳ್ಳಿ ಕೆರೆ ಅಭಿವೃದ್ಧಿಗೆ ಉಪಯೋಗಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ದೊಡ್ಡಕೆರೆ ಹೂಳೆತ್ತಿದ್ದರೆ ಗ್ರಾಮಸ್ಥರಿಗೆ ಹಾಗೂ ಕೃಷಿಕರಿಗೆ ಸಾಕಷ್ಟು ನೀರು ಲಭ್ಯವಾಗಲಿದೆ ಎಂದು ಗ್ರಾಮಸ್ಥರು ಪ್ರತಿಪಾದಿಸಿದ್ದಾರೆ.ಕೆರೆ ಅಭಿವೃದ್ಧಿ ಹಣವನ್ನು ಬೇರೆಯ ಕಾರಣಕ್ಕೆ ಬಳಸುವುದನ್ನು ವಿರೋಧಿಸಿರುವ ಗ್ರಾಮಸ್ಥರು ಹಾಗೂ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಬಿ.ಗಣೇಶ್ ಮಾತನಾಡಿ ಗ್ರಾಮ ಪಂಚಾಯಿತಿ ಆಡಳಿತ ವರ್ಗ ಪರಿಶಿಷ್ಟ ಜಾತಿ, ಪಂಗಡಗಳ ಸದಸ್ಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಆಡಳಿತ ಮಂಡಳಿಯ ಸದಸ್ಯರು ಸತ್ಯಕ್ಕೆ ದೂರವಾದ ವಿಚಾರಗಳನ್ನು ಪತ್ರಿಕೆಗಳಿಗೆ ನೀಡುತ್ತಿರುವುದು ಖಂಡನೀಯ ಎಂದರು. ಗ್ರಾಮದಲ್ಲಿ ನೈರ್ಮಲ್ಯದ ಕೊರತೆ ಇದೆ. ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ಇಲ್ಲದಿರುವುದು ಆಡಳಿತದ ವೈಫಲ್ಯವಾಗಿದೆ ಎಂದರು.

ದೊಡ್ಡಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿರುವ ರೂ. 30ಲಕ್ಷ ಹಣವನ್ನು ಯಾವುದೇ ಕಾರಣಕ್ಕೂ ಇತರ ಕೆರೆ ಅಭಿವೃದ್ಧಿಗೆ ನೀಡಬಾರದು ಎಂದು ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಸ್ಥಾನೀಯ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಹ್ಯಾರಿಸ್, ಎಚ್.ಎಚ್.ರಾಜು, ಎಚ್.ಎಸ್.ರಾಜು, ಸುರೇಂದ್ರ, ದೊಡ್ಡಯ್ಯ ಮೊದಲಾದವರು ಇದ್ದರು.ಸುಳ್ಳು ಹೇಳಿಕೆ ನೀಡಿಲ್ಲ:

ಇದೇ ಸಂದರ್ಭದಲ್ಲಿ  ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ    ಅಭಿವೃದ್ಧಿ     ಅಧಿಕಾರಿ ಸುಬ್ಬಯ್ಯ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುತ್ರ ಪೂಣಚ್ಚ ಪ್ರಜಾವಾಣಿಯೊಂದಿಗೆ ಮಾತನಾಡಿ ಗ್ರಾಮ ಪಂಚಾಯಿತಿಯ ಪರವಾಗಿ ಪತ್ರಿಕೆಗಳಿಗೆ ಯಾವುದೇ ಸುಳ್ಳು ಹೇಳಿಕೆ, ತಪ್ಪು ಮಾಹಿತಿ ನೀಡಿಲ್ಲ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.