ಶನಿವಾರ, ಮೇ 8, 2021
26 °C

ಕೆರೆ ಅಭಿವೃದ್ಧಿ ಖಾಸಗಿ ಕಂಪೆನಿಗೆ:ಪ್ರಾಧಿಕಾರದ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೆಬ್ಬಾಳ, ನಾಗವಾರ, ಅಗರ ಹಾಗೂ ವೆಂಗಯ್ಯನಕೆರೆಗಳನ್ನು ಖಾಸಗಿಯವರಿಗೆ ನಿರ್ವಹಣೆಗೆಂದು ನೀಡಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ತೀರ್ಮಾನವನ್ನು ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.`ಖಾಸಗಿಯವರಿಗೆ ವಹಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ; ಕೆರೆ ಹಾಳಾಗುತ್ತದೆ, ಪಕ್ಷಿ ಸಂಕಲು ವಿನಾಶದತ್ತ ಸಾಗಿದೆ ಇತ್ಯಾದಿಯಾಗಿ ಅರ್ಜಿದಾರರು ಮಾಡಿರುವ ಆರೋಪಗಳ ಕುರಿತು ಯಾವುದೇ ಸೂಕ್ತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಆದೇಶ ಸರಿ ಇದೆ ಎಂದು ತೋರುತ್ತದೆ~ ಎಂದು ನ್ಯಾಯಮೂರ್ತಿ ಕೆ.ಶ್ರೀಧರರಾವ್ ನೇತೃತ್ವದ ವಿಭಾಗೀಯ ಪೀಠ ತೀರ್ಪು ನೀಡಿದೆ.ಹೈದರಾಬಾದ್ ಮೂಲದ ಬಯೋಟಾ ನ್ಯಾಚುರಲ್ ಸಿಸ್ಟಮ್ಸಗೆ ಅಗರ ಮತ್ತು ವೆಂಗಯ್ಯನಕೆರೆಯನ್ನು, ಈಸ್ಟ್ ಇಂಡಿಯಾ ಹೋಟೆಲ್ಸ್ ಲಿಮಿಟೆಡ್‌ಗೆ ಹೆಬ್ಬಾಳ ಕೆರೆಯನ್ನು ಹಾಗೂ ಲುಂಬಿನಿ ಗಾರ್ಡನ್ಸ್ ಲಿಮಿಟೆಡ್‌ಗೆ ನಾಗವಾರ ಕೆರೆಯನ್ನು ಗುತ್ತಿಗೆ ನೀಡಿರುವ ಸಂಬಂಧದ ಒಪ್ಪಂದ ಇದಾಗಿದೆ. ಈ ಒಪ್ಪಂದ ಪ್ರಶ್ನಿಸಿ ಪರಿಸರವಾದಿ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.`ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ನೇತೃತ್ವದ ಸಮಿತಿಯು ಈ ನಾಲ್ಕು ಕೆರೆಗಳ ಪರಿಶೀಲನೆ ನಡೆಸಿದೆ. ಆದರೆ ಖಾಸಗಿಯವರಿಗೆ ಅವುಗಳನ್ನು ವಹಿಸಿರುವುದರಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.ಆದುದರಿಂದ ಅರ್ಜಿದಾರರ ವಾದವನ್ನು ಮಾನ್ಯ ಮಾಡಲಾಗದು~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಇದೆ ವೇಳೆ, ಈ ನಾಲ್ಕೂ ಕೆರೆಗಳ ವೀಕ್ಷಣೆಗೆ ಬರುವ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ಶುಲ್ಕ ತೆಗೆದುಕೊಳ್ಳದಂತೆ ನ್ಯಾಯಮೂರ್ತಿಗಳು ಮಾಲೀಕರಿಗೆ ನಿರ್ದೇಶಿಸಿದ್ದಾರೆ. ಆದರೆ ಮಕ್ಕಳು ಬಳಕೆ ಮಾಡುವ ಇತರ ಮನೋರಂಜನಾ ಸೌಲಭ್ಯಗಳಿಗೆ ಶುಲ್ಕ ವಸೂಲಿಗೆ ಮಾಲೀಕರಿಗೆ ಅನುಮತಿ ನೀಡಲಾಗಿದೆ.ಸಮೀಕ್ಷೆ ಅಗತ್ಯ: `ರಾಜ್ಯದ ಎಲ್ಲ ಕೆರೆಗಳ ಸಮೀಕ್ಷೆ ನಡೆಸಿ ಅದರ ರಕ್ಷಣೆಗೆ ಸುತ್ತಲೂ ತಂತಿ ಬೇಲಿ ಹಾಕಿಸಬೇಕು. ಕೆರೆಯ 30 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಒತ್ತುವರಿ ನಡೆಯದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಮೇಲಿಂದ ಮೇಲೆ ಪರಿಶೀಲನೆ ನಡೆಸಬೇಕು. ಕಳೆ ತೆಗೆಯುವ ಕೆಲಸವೂ ಆಗಬೇಕು. ಒಳಚರಂಡಿ ನೀರು ಕೆರೆಗಳಿಗೆ ಹೋಗದಂತೆ ನೋಡಿಕೊಳ್ಳಬೇಕು~ ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.ಸಮಿತಿ ರಚನೆ: ರಾಜ್ಯದ ವಿವಿಧ ಭಾಗಗಳ ಕೆರೆಗಳ ರಕ್ಷಣೆಗೋಸ್ಕರ ವಿವಿಧ ಸಮಿತಿಗಳನ್ನು ರಚನೆ ಮಾಡಿ ಕೋರ್ಟ್ ನಿರ್ದೇಶಿಸಿತು.  ಬೆಂಗಳೂರಿನಲ್ಲಿ ಇರುವ ಕೆರೆಗಳ ರಕ್ಷಣೆಗೆ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ನಾಲ್ಕು ಕೆರೆಗಳು ಸೇರಿದಂತೆ ವಿವಿಧ ಕೆರೆಗಳ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳು ಇತ್ಯಾದಿಯ ಕುರಿತು ಎರಡು ತಿಂಗಳಿಗೆ ಒಮ್ಮೆ ಸಭೆ ಸೇರಿ ಚರ್ಚಿಸುವಂತೆ ಸಮಿತಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.`ಸಭೆಯಲ್ಲಿ ನಡೆದ ಚರ್ಚೆಗಳ ಕುರಿತು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ನೀಡಬೇಕು. ಈ ವರದಿ ಅನ್ವಯ ಪ್ರಾಧಿಕಾರವು ಮುಂದಿನ ಕ್ರಮ ತೆಗೆದುಕೊಳ್ಳಬೇಕು~ ತೀರ್ಪಿನಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.