ಕೆರೆ ಅಭಿವೃದ್ಧಿ: ಸಮಗ್ರ ವರದಿಗೆ ಸೂಚನೆ

ಭಾನುವಾರ, ಜೂಲೈ 21, 2019
26 °C
ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರಿಂದ ಜನಸಂಪರ್ಕ ಸಭೆ

ಕೆರೆ ಅಭಿವೃದ್ಧಿ: ಸಮಗ್ರ ವರದಿಗೆ ಸೂಚನೆ

Published:
Updated:

ದಾವಣಗೆರೆ: ಜಿಲ್ಲೆಯ ಜಗಳೂರು ಪಟ್ಟಣದ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೂಡಲೇ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಸೂಚಿಸಿದರು.ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ನಡೆಸಿದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಈ ಕೆರೆಯನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಸರೋವರ ಸಂರಕ್ಷಣಾ ಯೋಜನೆ(ಎನ್‌ಎಲ್‌ಸಿಪಿ) ವತಿಯಿಂದ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಈ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನೋಡಲ್ ಏಜೆನ್ಸಿಯಾದ ಕೆರೆ ಅಭಿವೃದ್ಧಿ ಪ್ರಾಧಿಕಾರ ಸಮರ್ಪಕ ಯೋಜನಾ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ, ಪ್ರಸ್ತಾವವನ್ನು ಕೇಂದ್ರ ಸರ್ಕಾರ ಹಿಂದಿರುಗಿಸಿತ್ತು. ನಂತರ ಕೈಗೊಂಡ ಕ್ರಮವೇನು? ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಚ್.ಪಿ.ನಾಗರಾಜ್ ಅವರಿಂದ ಸಿದ್ದೇಶ್ವರ ಮಾಹಿತಿ ಪಡೆದರು.ಉತ್ತರಿಸಿದ ನಾಗರಾಜ್, ಮತ್ತೆ ಸಮಗ್ರ ಯೋಜನಾ ವರದಿ ತಯಾರಿಸಲು ಗುಲ್ಬರ್ಗದ ಶ್ರುತಿ ಕನ್ಸಲ್ಟೆಂಟ್‌ಗೆ ನೀಡಲಾಗಿದೆ. ವರದಿ ಪೂರ್ಣವಾಗಿದೆ. ಈ ವಾರದಲ್ಲಿ  ಸಂಬಂಧಿಸಿದ ಏಜೆನ್ಸಿಯವರು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.ಹೊನ್ನಾಳಿ ತಾಲ್ಲೂಕಿನ ಕೋಟೆಹಾಳ್ ಗ್ರಾಮದಲ್ಲಿ ಆಂಜನೇಯ ದೇವಸ್ಥಾನ ಮತ್ತು ದೊಡ್ಡೆತ್ತಿನಹಳ್ಳಿಯಲ್ಲಿ ವೀರಭದ್ರೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಕೋರಿ ಗ್ರಾಮದವರು ಮನವಿ ಸಲ್ಲಿಸಿದರು. ಕೊಳವೆಬಾವಿ ಕೊರೆಸಲು ಸೂಚನೆ: ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಕೊಳವೆಬಾವಿ ಕೊರೆಸಿಕೊಡಬೇಕು ಎಂದು ಹರಪನಹಳ್ಳಿ ತಾಲ್ಲೂಕಿನ ಸೇವಾನಗರದ ಗ್ರಾಮಸ್ಥರು ಮನವಿ ಸಲ್ಲಿಸಿದರು.  ಆವರಗೆರೆ ಬಳಿ ಪಾಮೇನಹಳ್ಳಿ- ತೊಳಹುಣಸೆ ರಸ್ತೆಯಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಈಚೆಗೆ ರೈಲ್ವೆ ಇಲಾಖೆ ನಿರ್ಮಿಸಿರುವ ಸಬ್‌ವೇ ಅವೈಜ್ಞಾನಿಕವಾಗಿದೆ. ಇಲ್ಲಿ ನೀರು ಸಂಗ್ರಹವಾಗುತ್ತಿದೆ. ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ ಎಂದು ಪಾಮೇನಹಳ್ಳಿ ಗ್ರಾಮಸ್ಥರು ತಿಳಿಸಿದರು. ಜಗಳೂರು ತಾಲ್ಲೂಕಿನ ಅಸಗೋಡು, ಮುಚ್ಚನೂರು, ದಾವಣಗೆರೆ ತಾಲ್ಲೂಕಿನ ಹುಲಿಕಟ್ಟೆ, ಹರಪನಹಳ್ಳಿ ತಾಲ್ಲೂಕಿನ ಹಿರೇಮೇಗಳಗೆರೆ, ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ, ದಾಗಿನಕಟ್ಟೆ, ಹರಿಹರ ತಾಲ್ಲೂಕಿನ ಬೆಳ್ಳೂಡಿ, ಕುಣೇಬೆಳಕೆರೆ ಗ್ರಾಮಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲು, ಜಗಳೂರು ತಾಲ್ಲೂಕಿನ ಗೌರಮ್ಮನಹಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದವರ ಕೋರಿಕೆಯಂತೆ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಶಿಫಾರಸು ಮಾಡಿದರು.ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯ ಎಚ್.ಎನ್.ಶಿವಕುಮಾರ್, `ದೂಡಾ' ಮಾಜಿ ಸದಸ್ಯ ಕೊಟ್ರೇಶ್ ಉಪಸ್ಥಿತರಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry