ಭಾನುವಾರ, ಆಗಸ್ಟ್ 25, 2019
25 °C

ಕೆರೆ ಏರಿಯಲ್ಲಿ ತಡೆಗೋಡೆ ನಿರ್ಮಿಸಲು ಮೊರೆ

Published:
Updated:

ಸೋಮವಾ ರಪೇಟೆ: ಇಲ್ಲಿಗೆ ಸಮೀಪದ ಚೌಡ್ಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆರೆ ಏರಿಯ ರಸ್ತೆಯ ಇಕ್ಕೆಲದಲ್ಲೂ ತಡೆಗೋಡೆ ಇಲ್ಲವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.ಚೌಡ್ಲು ಗ್ರಾಮಪಂಚಾಯಿತಿಯಿಂದ ಅನತಿ ದೂರದಲ್ಲಿರುವ ಈ ಕೆರೆಯು, ಮುಖ್ಯ ರಸ್ತೆಯ ಒತ್ತಿನಲ್ಲಿಯೇ ಇದೆ. ಇದರ ಏರಿ ಶನಿವಾರಸಂತೆ ಹಾಗೂ ಶಾಂತಳ್ಳಿಗೆ ಸಂಪರ್ಕ ರಸ್ತೆಯಾಗಿದೆ. ನಿತ್ಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಕೂಲಿಕಾರ್ಮಿಕರು, ವಾಹನಗಳ ಸಂಚಾರ ದಟ್ಟಣೆ ಈ ರಸ್ತೆಯಲ್ಲಿ ಇರುತ್ತದೆ.  ಈ ರಸ್ತೆಯು ಕಿರಿದಾಗಿದೆ. ರಸ್ತೆಯ ಯಾವ ಭಾಗದಲ್ಲೂ ಸೂಚನಾಫಲಕ ಅಳವಡಿಸಿಲ್ಲ. ಕೆಲವು ಖಾಸಗಿ ಮತ್ತು ಶಾಲಾ ವಾಹನಗಳು ಮಕ್ಕಳನ್ನು ಅಧಿಕ ಸಂಖ್ಯೆಯಲ್ಲಿ ತುಂಬಿಸಿಕೊಂಡು ತೆರಳುತ್ತಿರುವುದು ಈ ರಸ್ತೆಯಲ್ಲಿ ಸಾಮಾನ್ಯವಾಗಿದೆ. ರಸ್ತೆ ಕಿರಿದಾಗಿರುವುದರಿಂದ ಒಂದೇ ಬಾರಿ ಎರಡು ವಾಹನಗಳು ಚಲಿಸಲು ಸಾಧ್ಯವಾಗುವುದಿಲ್ಲ.  ಕಳೆದ ಎರಡು ವರ್ಷಗಳ ಹಿಂದೆಯೇ ಗ್ರಾಮಸ್ಥರು ಈ ರಸ್ತೆಗೆ ತಡೆಗೋಡೆ ನಿರ್ಮಿಸುವಂತೆ ಹಲವು ಭಾರಿ ಮನವಿಯೊಂದಿಗೆ ಪ್ರತಿಭಟನೆಯನ್ನು ಮಾಡಿದ್ದರು. ಕ್ಷೇತ್ರ ಶಾಸಕರಿಗೂ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರು ಅಂದು ರೂ 5 ಲಕ್ಷದ ಅನುದಾನದ ಘೋಷಿಸಿ ಮಿಕ್ಕ ಹಣವನ್ನು ತಡೆಗೋಡೆಗೆ ಗ್ರಾಮಪಂಚಾಯಿತಿಯ ಉದ್ಯೋಗ ಖಾತರಿ ಯೋಜನೆಯಲ್ಲಿ ಬಳಸಿಕೊಳ್ಳಲು ಸೂಚಿಸಿದ್ದರು. ಆದರೆ, ಈವರೆಗೆ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.ಪ್ರತಿವರ್ಷ ಮಳೆಗಾಲದಲ್ಲಿ ಕೆರೆಯು ತುಂಬಿ ಹರಿಯುತ್ತದೆ. ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟರುವರು ಎಚ್ಚೆತ್ತುಗೊಂಡು ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Post Comments (+)